ಸಚಿವ ಖಾದರ್ ಪಣಂಬೂರಿನಲ್ಲಿ ಮೊಕ್ಕಾಂ, ಬಾರ್ಜ್ ದುರಂತದ ರಕ್ಷಣೆಗೆ ಎ.ಸಿ.ವಿ. ಬೋಟ್ ಕಾರ್ಯಾಚರಣೆ
ಮಂಗಳೂರು: ಉಳ್ಳಾಲ ಸಮೀಪದ ಮೊಗವೀರಪಟ್ಣದಲ್ಲಿ ಶನಿವಾರ ನಡೆದ ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು ಹಾಗೂ ರಾಜ್ಯ ಆಹಾರ ಸಚಿವರಾದ ಯು.ಟಿ.ಖಾದರ್ ಬೆಳ್ಳಂಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ತೆರಳಿ ಅಧಿಕಾರಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ. ಸಚಿವರು ಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಕೋಸ್ಟ್ ಗಾರ್ಡ್ ಡಿಐಜಿ ಎಸ್.ಎಸ್. ದಾಸಿಲ, ಕಮಾಂಡೆಂಟ್ ಜಸ್ವಾಲ್ ಅವರಲ್ಲಿ ಕಾರ್ಯಾಚರಣೆಯ ರೂಪುರೇಷೆಯ ಬಗ್ಗೆ ಸಚಿವರು ಚರ್ಚಿಸಿದರು.
ಬ್ರಿಟಿಷ್ ಕಂಪೆನಿಯ ದುಬಾರಿ ಎ.ಸಿ.ವಿ. (Air Cutpon Vesel) ಓವರ್ ಕ್ರಾಫ್ಟ್ ಬೋಟನ್ನು ಇದೀಗ ಬೆಳಗ್ಗಿನಿಂದ ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ವಿಶೇಷ ಬೋಟ್ ನೀರು ಹಾಗೂ ಹೊಯ್ಗೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. (ನಿನ್ನೆ ಈ ಬೋಟ್ ದೂರ ಇತ್ತೆನ್ನಲಾಗಿದೆ.) 50 ಮಂದಿ ಕೋಸ್ಟ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರ ಜೊತೆ ಅಮರಿಯಾ ಶಿಪ್, ರಾಜಧೂತ್ ಸ್ಟಾಂಡ್ ಶಿಪ್ ಸಜ್ಜುಗೊಂಡಿದೆ. ಅಗತ್ಯ ಬಿದ್ದರೆ ಗೋವಾದಲ್ಲಿ ಹೆಲಿಕಾಪ್ಟರ್ ಕೂಡಾ ಸಿದ್ಧಗೊಂಡು ನಿಂತಿದೆ. ಕೋಸ್ಟ್ ಗಾರ್ಡ್ ಗೆ ಅಸಾಧ್ಯವಾದರೆ ತಕ್ಷಣ ಹೆಲಿಕಾಪ್ಟರ್ ಆಗಮಿಸಲಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಬಾರ್ಜ್ ನಲ್ಲಿ ಸಿಲುಕಿರುವ ಶೋಭಿತ್ ಅವರ ಜೊತೆ ಫೋನ್ ಮೂಲಕ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದು ಎಲ್ಲಾ 24 ಮಂದಿಗೆ ಧೈರ್ಯ ತುಂಬುತ್ತಿದ್ದೇನೆ ಎಂದು ಸ್ಥಳೀಯ ಶಾಸಕರು ಹಾಗೂ ಸಚಿವರೂ ಆದ ಯು.ಟಿ.ಖಾದರ್ ಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಕಛೇರಿಯಿಂದ ಮಾಹಿತಿ ಒದಗಿಸಿದ್ದಾರೆ.
ಮೈಸೂರು ಕಾರ್ಯಕ್ರಮ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮಂಗಳೂರು ತಲುಪಿರುವ ಸಚಿವ ಖಾದರ್ ಆ ನಂತರ ರಂಝಾನ್ ಉಪವಾಸದ ಸಹರಿ ಸೇವಿಸಿ ಮಸೀದಿಯಲ್ಲಿ ಭಾನುವಾರ ಬೆಳಗ್ಗಿನ ನಮಾಝ್ ಮುಗಿಸಿ ಬಾರ್ಜ್ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ವಿಶೇಷ ಪ್ರಾರ್ಥನೆ ನಡೆಸಿದರು. ಬಳಿಕ ನೇರವಾಗಿ ಪಣಂಬೂರು ಕೋಸ್ಟ್ ಗಾರ್ಡ್ ಕಛೇರಿಗೆ ತೆರಳಿ ಕಾರ್ಯಾಚರಣೆ ತಂಡದೊಂದಿಗೆ ಕ್ರಿಯಾಶೀಲರಾಗಿದ್ದಾರೆ.
ಬಾರ್ಜ್ ಬಲವಾದ ಗಾಳಿಗೆ ಬಂಡೆಕಲ್ಲಿಗೆ ಅಪ್ಪಳಿಸಿ ಒಂದು ಭಾಗದ ಆಂಕರ್ ತುಂಡಾದುದರಿಂದ ಈ ದುರಂತ ಸಂಭವಿಸಿದೆ. ಬಾರ್ಜ್ ನಲ್ಲಿ 27 ಮಂದಿ ಇದ್ದು ನಾಲ್ವರನ್ನು ನಿನ್ನೆಯೇ ರಕ್ಷಿಸಲಾಗಿದೆ. ಉಳಿದವರ ರಕ್ಷಣೆಗೆ ನಿನ್ನೆ ರಾತ್ರಿ ಗಾಳಿ ತೊಡಕಾಗಿತ್ತು. ಬಾರ್ಜ್ ಬಳಿ ದೊಡ್ಡ ಬೋಟ್ ಹೋಗುತ್ತಿರಲಿಲ್ಲ. ರಬ್ಬರ್ ಬೋಟ್ ಬಳಸುವಾಗ ಗಾಳಿ ತೊಡಕಾಗಿದೆ. ಈ ಘಟನೆ ಕುರಿತು ಕೋಸ್ಟ್ ಗಾರ್ಡ್ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸಚಿವರಾದ ಯು.ಟಿ.ಖಾದರ್ ತಿಳಿಸಿದ್ದಾರೆ.