Home Mangalorean News Kannada News ಸಚಿವ ಪ್ರಮೋದ್ ಅವರಿಂದ ಶಿಷ್ಟಾಚಾರದ ಉಲ್ಲಂಘನೆ ಬಿಜೆಪಿ ಜನಪ್ರತಿನಿಧಿಗಳಿಗೆ ಅವಮಾನ, ಮಟ್ಟಾರ್ ಹೆಗ್ಡೆ

ಸಚಿವ ಪ್ರಮೋದ್ ಅವರಿಂದ ಶಿಷ್ಟಾಚಾರದ ಉಲ್ಲಂಘನೆ ಬಿಜೆಪಿ ಜನಪ್ರತಿನಿಧಿಗಳಿಗೆ ಅವಮಾನ, ಮಟ್ಟಾರ್ ಹೆಗ್ಡೆ

Spread the love

ಸಚಿವ ಪ್ರಮೋದ್ ಅವರಿಂದ ಶಿಷ್ಟಾಚಾರದ ಉಲ್ಲಂಘನೆ ಬಿಜೆಪಿ ಜನಪ್ರತಿನಿಧಿಗಳಿಗೆ ಅವಮಾನ, ಮಟ್ಟಾರ್ ಹೆಗ್ಡೆ

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ  ಪ್ರಮೋದ್ ಮಧ್ವರಾಜ್ ಅವರಿಂದ ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಉಲ್ಲಂಘನೆ ನಡೆಯುವುದಲ್ಲದೆ, ಕುಡಿಯುವ ನೀರಿನ ಸರಬರಾಜಿನಲ್ಲಿ ರಾಜಕೀಯ ಮಾಡುತ್ತಿದ್ದು, ಕೇಂದ್ರ ಸರಕಾರದಿಂದ ಬಂದ ಅನುದಾನದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಆರೋಪಿಸಿದರು.

ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ   ಪ್ರಮೋದ್ ಮಧ್ವರಾಜ್ ಅವರು ಪ್ರತಿಯೊಂದು ವಿಚಾರದಲ್ಲೂ ರಾಜಕೀಯ, ಸ್ವಜನ ಪಕ್ಷಪಾತ ಹಾಗೂ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ ಇದರ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮಾಡಿದರೂ ಕೂಡ ಮಾನ್ಯ ಸಚಿವರು ಎಗ್ಗಿಲ್ಲದೇ ತನ್ನ ದುರಾಡಳಿತವನ್ನು ಮುಂದುವರಿಸುವುದು ಅತ್ಯಂತ ಖೇದಕರ.

 ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ನ 26 ಸದಸ್ಯರಲ್ಲಿ 20 ಜನ ಭಾರತೀಯ ಜನತಾ ಪಾರ್ಟಿಯಿಂದ ಚುನಾಯಿತರಾದ ಸದಸ್ಯರಿದ್ದು, ಅಧ್ಯಕ್ಷ-ಉಪಾಧ್ಯಕ್ಷರು ಬಿಜೆಪಿಯವರಿದ್ದಾರೆ ಮತ್ತು ಜಿಲ್ಲೆಯ 3 ತಾಲೂಕು ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮಾತ್ರವಲ್ಲದೇ 2 ಪುರಸಭೆಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಜಿಲ್ಲೆಯ ಒಟ್ಟು ಗ್ರಾಮ ಪಂಚಾಯತ್ ಗಳಲ್ಲಿ ಶೇಕಡಾ 70 ಕ್ಕಿಂತಲೂ ಜಾಸ್ತಿ ಬಿಜೆಪಿ ಬೆಂಬಲಿರು ಅಧಿಕಾರದಲ್ಲಿದ್ದಾರೆ. ಒಟ್ಟಾರೆಯಾಗಿ ಭಾರತೀಯ ಜನತಾ ಪಾರ್ಟಿ ಆಡಳಿತ ರೂಡ ರಾಜಕೀಯ ಪಕ್ಷವಾಗಿದೆ. ಇದನ್ನು ಸಹಿಸದ ಜಿಲ್ಲಾ ಉಸ್ತುವಾರಿ ಸಚಿವರು ಈ ಜಿಲ್ಲೆಯ ಆಡಳಿತದಲ್ಲಿ ನಿರಂತರ ಹಸ್ತಕ್ಷೇಪ ಮಾಡುವುದಲ್ಲದೇ ಶಿಷ್ಟಾಚಾರದ ಉಲ್ಲಂಘನೆಯನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಜಿಲ್ಲಾ ಪಂಚಾಯತ್ ಗೆ ಸಂಬಂಧಿಸಿದ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಉದ್ದೇಶ ಪೂರ್ವಕವಾಗಿ ಕಡೆಗಣನೆ ಮಾಡುತ್ತಿದ್ದಾರೆ. ಈ ಮನವಿಯೊಂದಿಗೆ ಲಗ್ತೀಕರಿಸಿದ ವಿವಿಧ ಆಮಂತ್ರಣ ಪತ್ರಿಕೆಗಳಲ್ಲಿ ಅಚ್ಚು ಹಾಕಿದಂತೆ, ಕಾಮಗಾರಿಯ ಉದ್ಘಾಟನೆ ಹಾಗೂ ಅಧ್ಯಕ್ಷತೆ ಎರಡನ್ನು ತಾವೇ ಮಾಡಿಕೊಂಡು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ಕಾಟಾಚಾರಕ್ಕೆ ಅವರನ್ನು ಆಮಂತ್ರಿಸುವುದು, ಸಭೆ ಸಮಾರಂಭಗಳಲ್ಲಿ ಅವರನ್ನು ದಲಿತರೆಂಬ ಕಾರಣಕ್ಕೆ ಅವಮಾನಿಸುತ್ತಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರನ್ನು ಅತಿಥಿಗಳ ಪಟ್ಟಿಯಲ್ಲಿ ಹಾಕದೇ ನಿರ್ಲಕ್ಷಿಸಿರುವುದು ನಿರಂತರವಾಗಿ ನಡೆಯುತ್ತಿದೆ, ಮಾತ್ರವಲ್ಲ ಉಡುಪಿ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳಿಗೆ ನಿರಂತರ ಕಿರುಕುಳ ನೀಡುವ ಪರಿಪಾಠ ಕಳೆದ 4 ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ.

ಕುಡಿಯುವ ನೀರಿನ ಸರಬರಾಜು : ಉಡುಪಿ ಜಿಲ್ಲೆ ಪ್ರಥಮ ಬಾರಿಗೆ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಆಗಿರುವುದು ಶೋಚನೀಯ. ಕುಡಿಯುವ ನೀರಿನ ಸರಬರಾಜಿನ ಬಗ್ಗೆ ಕೇಂದ್ರ ಸರಕಾರ ವಿಶೇಷ ಕಾರ್ಯಪಡೆಯನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಅನುದಾನ ನೀಡಲಾಗುತ್ತಿದೆ. ವಿಪರ್ಯಾಸವೆಂದರೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವರು ನೀರು ಸರಬರಾಜು ಟ್ಯಾಂಕರಿಗೆ ತನ್ನ ಭಾವಚಿತ್ರದ ಬ್ಯಾನರ್ ಗಳನ್ನು  ಹಾಕಿಕೊಂಡು ತನ್ನು ಸ್ವಂತ ಖರ್ಚಿನಿಂದ ನೀರು ಕೊಡುವ ರೀತಿಯಲ್ಲಿ ಬಿಂಬಿಸುತ್ತಿರುವುದು ಅತ್ಯಂತ ವಿಪರ್ಯಾಸ ನಾಚಿಕೆಗೇಡಿತನವಾಗಿದೆ ಎಂದರು.

ಜನ ಸಂಪರ್ಕ ಸಭೆ : ಸಚಿವರು ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುತ್ತಿದ್ದು ಸಂತೋಷದ ಸಂಗತಿ ಆದರೆ ಈ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಬಿಜೆಪಿಯವರೆಂಬ ಕಾರಣಕ್ಕೆ ಅವರನ್ನು ಸಭೆಗೆ ಕರೆಯದೇ ಇರುವುದು, ಒಂದೊಮ್ಮೆ ಕರೆದು ಅವರನ್ನು ಅಧಿಕಾರಿಗಳ ಹಾಗೂ ಸಾರ್ವಜನಿಕರ ಮುಂದೆ ಅವಮಾನಿಸುವುದು, ಚುಚ್ಚು ಮಾತಿನಿಂದ ಮಾತನಾಡುವುದು ಅಸಹ್ಯಕರವಾಗಿದೆ.

ಮರಳು ಮಾಫಿಯಾ : ಜಿಲ್ಲೆಯಲ್ಲಿ ಈಗಾಗಲೇ ಅವ್ಯಾಹತವಾಗಿ ಮರಳು ಸಾಗಾಟವಾಗುತ್ತಿದ್ದು ಜಿಲ್ಲೆಯ ಜನತೆ ಮರಳಿಗೋಸ್ಕರ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಇಡೀ ಮರಳು ಲಾರಿಗಳು ಸಂಚರಿಸುತ್ತಿದ್ದು ಒಂದು ಲಾರಿ ಮರಳಿಗೆ ರೂ. 15 ಸಾವಿರ ನೀಡುವ ದುಸ್ಥಿತಿ ಈ ಜಿಲ್ಲೆಗೆ ಬಂದಿರುವುದು ಶೋಚನೀಯ. ಉಡುಪಿ ನಗರಸಭೆಗೆ ನೀರು ಪೂರೈಕೆಯಾಗುತ್ತಿರುವ ಬಜೆ ಅಣೆಕಟ್ಟಿನ ಸ್ವರ್ಣ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ  ವಿಪರೀತ ಮರಳು ತುಂಬಿದ್ದುಇದಕ್ಕೆ ಉಡುಪಿ ನಗರಸಭೆಯಿಂದ ಅವೈಜ್ಞಾನಿಕವಾಗಿ ಟೆಂಡರ್ ಕರೆಯಲಾಗಿದ್ದು ಟೆಂಡರ್ ನಲ್ಲಿ ಯಾವುದೇ ಸ್ವಷ್ಟತೆ ಇರುವುದಿಲ್ಲ. ಈ ಹೂಳೆತ್ತುವ ಕಾರ್ಯಕ್ರಮದ ಹಿಂದೆ ಬಹುದೊಡ್ಡ ಮರಳು ಮಾಫಿಯಾ ಕೈಯಾಡಿಸುತ್ತಿರುವುದು ಇಡೀ ಜಿಲ್ಲೆಯ ಜನತೆಗೆ ತಿಳಿದಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇರ ಹಸ್ತಕ್ಷೇಪ ಇರುವುದು ಕಂಡುಬರುತ್ತದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರದ ಯೋಜನೆ ಬಗ್ಗೆ : ರಾಜ್ಯದಲ್ಲಿ ಕೇಂದ್ರ ಸರಕಾರದ ನಿಧಿ ಹಾಗೂ ಅನುದಾನದಿಂದ ಅನೇಕ ಯೋಜನೆಗಳು ಕಾರ್ಯಗತಗೊಳುತ್ತಿದ್ದು ಉಸ್ತುವಾರಿ ಸಚಿವರು ಅದೆಲ್ಲವೂ ರಾಜ್ಯ ಸರಕಾರದ ಯೋಜನೆ ಎಂಬುದನ್ನು ಬಿಂಬಿಸಿ ಕೇಂದ್ರ ಸರಕಾರವನ್ನು ಕಡೆಗಾಣಿಸುತ್ತಿದ್ದಾರೆ.

ಸಿ. ಆರ್. ಎಫ್ ಪಂಡ್ – 52 ಕೋಟಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಂದಿದ್ದು, ರಾಜ್ಯದ ಏಕೈಕ ಸಖಿ 1 ಸ್ಟಾಪ್ ಸೆಂಟರ್ ನಿರ್ಮಾಣ ಉಡುಪಿಯಲ್ಲಿ ನಡೆಯುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಯವರ ವಿಶೇಷ ಪ್ರಯತ್ನದ ಫಲವಾಗಿ ಉಡುಪಿಗೆ ಇದು ಲಭ್ಯವಾಗಿದ್ದು, ಜುಲೈ ತಿಂಗಳಲ್ಲಿ ಕೇಂದ್ರ ಸಚಿವ ಮೇನಕಾ ಗಾಂಧಿ ಉದ್ಘಾಟಿಸುವ ನಿರೀಕ್ಷೆಯಿದೆ. ಅಲ್ಲದೆ ಇನ್ನಂಜೆ ರೈಲ್ವೆ ನಿಲ್ದಾಣ ಉನ್ನತೀಕರಣಕ್ಕೆ ರೂ. 6.5 ಕೋಟಿ, ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169, 169ಎ, 173, 234 ಅಭಿವೃದ್ಧಿ ದುರಸ್ತಿಗೆ ರೂ. 20092.89 ಲಕ್ಷ ಅನುದಾನ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ರೂ. 10 ಕೋಟಿ, ಗಂಗೊಳ್ಳಿ ಕೋಡಿ ಕನ್ಯಾನ ಬಂದರುಗಳ ಅಭಿವೃದ್ಧಿಗೆ ಕೇಂದ್ರ ಸರಕಾರದ ಕೃಷಿ ಇಲಾಖೆಯಿಂದ ಅನುದಾನ ರೂ. 13 ಕೋಟಿ ಮತ್ತು ರೂ. 6.25 ಕೋಟಿ, ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯಡಿ ನಿಟ್ಟೆ, ಕುಂದಾಪುರ ಮತ್ತು ಕಾಪು ಅರ್ಹ ಯುವ ಜನತೆಗೆ ಉಚಿತ ಕೌಶಲ್ಯ ತರಭೇತಿ, ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅನುದಾನ – ರೂಸಾ ಯೋಜನೆಯಡಿ ರೂ. 7.75 ಕೋಟಿ, ಅಲೆವೂರಿನಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡ, ವಸತಿ ಗೃಹ, ಕ್ರೀಡಾಂಗಣ, ಅಡಿಟೋರಿಯಂ ಮತ್ತು ಒಳಾಂಗಣ ಕ್ರೀಡಾಂಗಣ ಸುಮಾರು ರೂ. 62 ಕೋಟಿ ಅನುದಾನಗಳು ಕೇಂದ್ರದಿಂದ ಜಿಲ್ಲೆಗೆ ಬಂದಿದೆ ಎಂದರು.

 ಹಿಂದಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರದಲ್ಲಿ ಉಡುಪಿ ಜಿಲ್ಲೆಯವರೇ ಹೆದ್ದಾರಿ ಸಚಿವರಾಗಿದ್ದರೂ ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣ ಕೆಲಸ ಕಾರ್ಯಗಳು ಕುಂಟುತ್ತಾ ಸಾಗಿ ಬಹುತೇಕ ನೆನೆಗುದಿಗೆ ಬಿದ್ದಿತ್ತು. ನಂತರ ಅದಕ್ಕೆ ವೇಗನೀಡಿ ಈಗ ಮುಕ್ತಾಯದ ಹಂತಕ್ಕೆ ತಲುಪಿಸುವಲ್ಲಿ ಯಶಸ್ಸು ಕಂಡದ್ದು ಈಗಿನ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ

ತಾನೊಬ್ಬನೇ ಸಾಚಾ ಎಂದು ಪ್ರತಿ ಸಭೆಯಲ್ಲಿ ಬಿಂಬಿಸುವುದು ಸಚಿವರಿಗೆ ಖಾಯಾಲಿಯಾಗಿದ್ದು, ಆದರೆ ಜಿಲ್ಲೆಯಲ್ಲಿ ಬಹುತೇಕ ಅಧಿಕಾರಿಗಳ ಭೃಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಾಮಾನ್ಯ ಜನರಿಗೆ ಸರಕಾರಿ ಕಛೇರಿಗಳಲ್ಲಿ ತಮ್ಮ ದೈನಂಧಿನ ಕೆಲಸ ಮಾಡಿಸಿಕೊಳ್ಳದಿರುವಂತಹ ಮಟ್ಟಕ್ಕೆ ಜಿಲ್ಲೆಯಲ್ಲಿ ಭೃಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version