ಸೌಜನ್ಯ ಕೊಲೆ ಪ್ರಕರಣ: ಸಿ.ಬಿ.ಐ. ವರದಿ ಸತ್ಯಕ್ಕೆ ಸಂದ ಜಯ: ಧರ್ಮಸ್ಥಳದಲ್ಲಿ ಸಂಭ್ರಮಾಚರಣೆ
ಧರ್ಮಸ್ಥಳದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ “ಸತ್ಯಕ್ಕೆ ಸಂದ ಜಯ” ಸಂಭ್ರಮಾಚರಣೆ ಸಮಾರಂಭದಲ್ಲಿ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿದರು
ಸೌಜನ್ಯ ಕೊಲೆ ಪ್ರಕರಣದ ಬಗ್ಯೆ ಸಿ.ಬಿ.ಐ. ವರದಿಯಿಂದ ಧರ್ಮಕ್ಕೆ ಜಯವಾಗಿದೆ. ಸತ್ಯ ದರ್ಶನವಾಗಿದೆ. ಧರ್ಮ ಯುದ್ಧದಲ್ಲಿ ಸತ್ಯಕ್ಕೆ ದೊರಕಿದ ಜಯ ಸತ್ಯೋತ್ಸವವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ “ಸತ್ಯಕ್ಕೆ ಸಂದ ಜಯ” ಸಂಭ್ರಮಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವಕಾಶದ ದುರುಪಯೋಗ ಮಾಡಿದ ಕೆಲವು ನಕಲಿ ಸಮಾಜ ಸೇವಕರು ಮುಗ್ದ ಯುವಕರನ್ನು ಹೋರಟಕ್ಕೆ ಬಳಸಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಸೇವೆಯ ಹೆಸರಿನಲ್ಲಿ ಹಣ ಸಂಪಾದನೆ ಮಾಡಿದ್ದಾರೆ. ಧರ್ಮಸ್ಥಳದ ಬಗ್ಯೆ ಸುಳ್ಳು ಆರೋಪ ಮಾಡಿ ಅಪಪ್ರಚಾರ ಮಾಡಿದ್ದಾರೆ. ಆದರೆ ಸಿ.ಬಿ.ಐ. ವರದಿಯಿಂದ ಸುಳ್ಳು ಆರೋಪಕ್ಕೆ ಮುಕ್ತಿ ದೊರಕಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ ಸುಳ್ಳು ಆರೋಪ ಮಾಡಿದವರಿಗೆ ದೇವರು ಒಳ್ಳೆಯ ಮನಸ್ಸನ್ನು ಕೊಟ್ಟು ಸತ್ಕಾರ್ಯ ಮಾಡುವ ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಮಾಜಿ ಶಾಸಕರುಗಳಾದ ಬೈಂದೂರಿನ ಅಪ್ಪಣ್ಣ ಹೆಗ್ಡೆ, ಕಾರ್ಕಳದ ಗೋಪಾಲ ಭಂಡಾರಿ ಮತ್ತು ಉಡುಪಿಯ ರಘುಪತಿ ಭಟ್ ಮಾತನಾಡಿ ಸಿ.ಬಿ.ಐ. ವರದಿಯಿಂದ ಎಲ್ಲರಿಗೂ ಸಮಾಧಾನವಾಗಿದೆ. ಇನ್ನಾದರೂ ಅಪಪ್ರಚಾರಕ್ಕೆ ಇತಿಶ್ರೀಯಾಗಬೇಕು ಎಂದು ಕೋರಿದರು.
ಪುತ್ತೂರಿನ ಜಗದೀಶ, ವಕೀಲ ಸುಬ್ರಹ್ಮಣ್ಯ ಅಗರ್ತ, ಮಹೇಶ್ ಸುಳ್ಯ, ವಿಮಲಾ ರಂಗಯ್ಯ, ನೆರಿಯಾದ ಯು.ಸಿ. ಪೌಲೋಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಹೊನ್ನಳ್ಳಿ, ಎಂ.ಬಿ. ಪುರಾಣಿಕ್, ಡಿ.ಎ. ರಹಿಮಾನ್, ರಾಜಶ್ರೀ ಎಸ್. ಹೆಗ್ಡೆ ಮಾತನಾಡಿ ಸತ್ಯಕ್ಕೆ ಸಂದ ಜಯದ ಬಗ್ಯೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ವಕೀಲ ಕೇಶವ ಗೌಡ ಬೆಳಾಲು ಪ್ರಾಸ್ತಾವಿಕವಾಗಿ ಮಾತನಾಡಿ ಘಟನೆಯ ಮಾಹಿತಿ ನೀಡಿದರು.
ಚಂದನ್ ಕಾಮತ್ ಸ್ವಾಗತಿಸಿದರು. ವಕೀಲ ರತ್ನವರ್ಮ ಬುಣ್ಣು ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಮತ್ತು ಸತ್ಯಮೇವ ಜಯತೆ ಸಮಿತಿಯ ಸರ್ವ ಸದಸ್ಯರು ಮತ್ತು ಊರಿನ ನಾಗರಿಕರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಾಹನ ಜಾಥಾದಲ್ಲಿ ಉಜಿರೆಗೆ ಹೋಗಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಬಂದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಬಂಟ್ವಾಳದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಜಯರಾಘವ ಪಡ್ವೆಟ್ನಾಯ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.