ಸಮಸ್ಯೆಗೆ ಸ್ಪಂದಿಸುವುದು ಜನಪ್ರತಿನಿಧಿ ಕರ್ತವ್ಯ – ಜಯಪ್ರಕಾಶ್ ಹೆಗ್ಡೆ

Spread the love

ಸಮಸ್ಯೆಗೆ ಸ್ಪಂದಿಸುವುದು ಜನಪ್ರತಿನಿಧಿ ಕರ್ತವ್ಯ – ಜಯಪ್ರಕಾಶ್ ಹೆಗ್ಡೆ

ಚಿಕ್ಕಮಗಳೂರು: ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ ಅರಮನೆ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಆರೋಗ್ಯಕರ ಸ್ಪರ್ಧೆಯಾಗಲು ಲೋಕಸಭೆ ಕ್ಷೇತ್ರದಲ್ಲಿ ನಿಂತು ಹೋದ ಎಲ್ಲಾ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿಕೊಡುತ್ತೇನೆ.

ತರೀಕೆರೆ ಪಟ್ಟಣದಲ್ಲಿ ವಿಐಎಲ್ ಸ್ಥಗಿತವಾಗಿದ್ದು ಪಟ್ಟಣದಲ್ಲಿ ಇನ್ನೊಂದು ಉದ್ಯಮ ಸೃಷ್ಟಿಯಾಗಬೇಕು. ಹಿಂದೆ ಅಡಿಕೆ ಧಾರಣೆ ಕ್ವಿಂಟಾಲ್ ಗೆ ಹತ್ತು ಸಾವಿರ ಇತ್ತು. ಅಡಕೆಗೆ ಆಮದು ಸುಂಕ ಹೆಚ್ಚು ವಿಧಿಸುವಂತೆ ಮಾಡಿದ್ದರಿಂದ ಅಡಕೆ ಧಾರಣೆ 80 ಸಾವಿರವಾಗಿತ್ತು. ತಾವು ಸಂಸದರಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಚಿಕ್ಕಮಗಳೂರಿಗೆ ರೈಲು ಮಾರ್ಗ ತರಲಾಯಿತು, 9 ವರ್ಷ ಕಳೆದರೂ ಈ ವರೆಗೂ ಒಂದು ಗೂಡ್ಸ್ ಗಾಡಿಯನ್ನು ತರಲಾಗಿಲ್ಲ. ನಾಯಕರ ಹೆಸರಿನಲ್ಲಿ ಚುನಾವಣೆಗೆ ಹೋಗುವವುರು ನಾವಲ್ಲ, ಕೆಲಸ ಮಾಡಿ ಚುನಾವಣೆಗೆ ಹೋಗುವವರು ನಾವು ಎಂದರು.

15 ಲಕ್ಷ ಹಣ ಬರಲಿಲ್ಲ, ಕಪ್ಪು ಹಣ ಬರಲಿಲ್ಲ ಈ ಕಪ್ಪು ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ಚರ್ಚೆಯಾಗಲಿ. ಉದ್ಯೋಗ ಸೃಷ್ಟಿಯಾಗಲಿಲ್ಲ ಆದರೆ ಸುಳ್ಳು ಹೇಳಿ ಅದನ್ನು ಸತ್ಯ ಮಾಡುತ್ತಾರೆ. ನಾನು ಯಾರನ್ನು ಬೈಯ್ಯಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ. ಏ. 3 ರಂದರು ನಾಮಪತ್ರ ಸಲ್ಲಿಸುತ್ತಿದ್ದು ಈ ಬಾರಿ ಬದಲಾವಣೆ ಖಂಡಿತ ಹೆಚ್ಚಿನ ಮತ ನೀಡಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಶಾಸಕ ಜಿ ಎಚ್ ಶ್ರೀನಿವಾಸ್ ಮಾತನಾಡಿ ಜಯಪ್ರಕಾಶ್ ಹೆಗ್ಡೆ ಅವರು ಪ್ರಾಮಾಣಿಕರು, ಸಜ್ಜನರು ಜನರ ಕಷ್ಟಗಳಿಗೆ ಮಿಡಿಯುತ್ತಾರೆ. ಅಡಕೆ ಧಾರಣೆ ಕುಸಿದಿತ್ತು ಆಗ ಅವರು ಆಮದು ಅಡಕೆಗೆ ಹೆಚ್ಚು ಸುಂಕ ವಿಧಿಸುವಂತೆ ಮಾಡಿ ಅಡಕೆ ಧಾರಣೆ ಹೆಚ್ಚುವಂತೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮೀ, ಅನ್ನಭಾಗ್ಯ, ಜಾರಿಗೆ ತಂದರು ಜನರ ಪರವಾಗಿ ಕಾಂಗ್ರೆಸ್ ಸರ್ಕಾರ ಇದೆ ಬಿಜೆಪಿಯವರು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಯವರಿಗೆ ಸೋಲುವ ಭಯ ಇದೆ ಕಾಂಗ್ರೆಸ್ ಪಕ್ಷದವರ ಮೇಲೆ ಐಟಿ, ಇಡಿ ಕೇಸುಗಳನ್ನು ಹಾಕಿ ಕುತಂತ್ರ ಮಾಡಿದರು ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ 10 ವರ್ಷಗಳಲ್ಲಿ ಬಿಜೆಪಿ ಸಂಸದರು ಯಾವ ವಿಚಾರಗಳನ್ನು ಪ್ರತಿಪಾದಿಸಿಲ್ಲ. ಜನರ ಪರವಾಗಿ ನಿಲ್ಲಲು ಸಂಸದರು ವಿಫಲರಾಗಿದ್ದಾರೆ ಬಿಜೆಪಿಯದ್ದು ಅವೈಜ್ಞಾನಿಕ ಆರ್ಥಿಕ ನೀತಿಯಾಗಿದ್ದು ಇದರಿಂದ ಎಲ್ಲಾ ಪದಾರ್ಥಗಳ ಬೇಲೆ ಏರಿದೆ ಎಂದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಯು ಫಾರೂಕ್ ಮಾತನಾಡಿ ಜಯಪ್ರಕಾಶ್ ಹೆಗ್ಡೆ ಅವರು ಸರಳ ಸಜ್ಜನ ವ್ಯಕ್ತಿ. ಎಲ್ಲಾ ವರ್ಗದವರಿಗೂ ಸ್ಪಂದಿಸುತ್ತಾರೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಮಂಜುನಾಥ ಭಂಡಾರಿ ಮಾತನಾಡಿ ಅಭಿವೃದ್ಧಿಯೇ ನಮ್ಮ ಮಂತ್ರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನೀಡಿದೆ ಎಂದರು.

ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್, ಕೆಪಿಸಿಸಿ ಕಾರ್ಯದರ್ಶಿ ಎಮ್ ಎಗಫೂರ್ ನಾಯಕರಾದ ಶಿವಾನಂದ ಸ್ವಾಮಿ, ರವಿ ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love