Home Mangalorean News Kannada News ಸಮಾಜದ ಒಳಿತಿಗೆ ಶೈಕ್ಷಣಿಕ ಜ್ಞಾನ ಬಳಕೆಯಾಗಲಿ: ಡಾ.ರವಿಕಾಂತೇಗೌಡ

ಸಮಾಜದ ಒಳಿತಿಗೆ ಶೈಕ್ಷಣಿಕ ಜ್ಞಾನ ಬಳಕೆಯಾಗಲಿ: ಡಾ.ರವಿಕಾಂತೇಗೌಡ

Spread the love

ಸಮಾಜದ ಒಳಿತಿಗೆ ಶೈಕ್ಷಣಿಕ ಜ್ಞಾನ ಬಳಕೆಯಾಗಲಿ: ಡಾ.ರವಿಕಾಂತೇಗೌಡ

ಉಜಿರೆ: ವಿವಿಧ ಜ್ಞಾನಶಿಸ್ತುಗಳಲ್ಲಿ ಪದವೀಧರರಾಗುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಸಾಮುದಾಯಿಕ ಬದುಕಿಗೆ ಸಮಗ್ರತೆ ತಂದುಕೊಡಲು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅಭಿಪ್ರಾಯಪಟ್ಟರು.

ಅವರು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಪದವೀಧರರಿಗೆ ಹಾಗೂ ಅಂತಿಮ ಪದವಿಯ ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ಪ್ರದಾನಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ‘ಗ್ರ್ಯಾಜ್ಯುಯೇಷನ್ ಡೇ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿವಿಧ ವಿಷಯಗಳಲ್ಲಿ ಪದವಿ ಪಡೆದ ನಂತರ ವ್ಯಕ್ತಿಗತ ಹೊಣೆಗಾರಿಕೆ ಹೆಚ್ಚುತ್ತದೆ. ಪದವಿಯೊಂದಿಗೆ ಅಂತರ್ಗತವಾದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುವ ಬದ್ಧತೆ ಇರಬೇಕು. ವೃತ್ತಿಪರವಾಗಿ ಗುರುತಿಸಿಕೊಳ್ಳುವ ಹಂಬಲಗಳ ಜೊತೆಗೆ ಸಾಮಾಜಿಕವಾಗಿ ಮುಖ್ಯವೆನ್ನಿಸುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ನಾಗರಿಕತೆಯ ಗುಂಗಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಬೆಳವಣಿಗೆ ಮತ್ತು ಅಭಿವೃದ್ಧಿಯ ನಡೆಗಳು ಉಂಟುಮಾಡಿದ ಅಹಂಭಾವದಲ್ಲಿ ಪ್ರಕೃತಿಗೆ ತದ್ವಿರುದ್ಧದ ಹೆಜ್ಜೆಗಳನ್ನು ಅನುಸರಿಸಲಾಗುತ್ತಿದೆ. ಲೋಕವು ಎಲ್ಲರನ್ನೂ ಒಳಗೊಂಡಿರುತ್ತದೆ. ಎಲ್ಲರನ್ನೂ ಒಳಗೊಳ್ಳುವಂಥ ಮನೋಧರ್ಮಗಳೊಂದಿಗೆ ಮನುಷ್ಯ ಬದುಕು ಗುರುತಿಸಿಕೊಳ್ಳಬೇಕು. ಹಾಗಾಗುವಂತೆ ಪದವೀಧರ ಯುವಸಮೂಹ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಬದುಕಿನಲ್ಲಿ ವ್ಯಕ್ತಿಗತ ಸಾಧನೆಯ ಜೊತೆಗೆ ಸಮೂಹದ ಒಳಿತಿನ ಪರವಾದ ನಿಲುವುಗಳೂ ಮುಖ್ಯವಾಗುತ್ತವೆ. ಸ್ವಾರ್ಥದ ಮಿತಿಗಳನ್ನು ಮೀರಿ ಲೋಕಕ್ಕೆ ಸಲ್ಲುವ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಕಡೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಶೈಕ್ಷಣಿಕ ಅರ್ಹತೆಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಮೌಲ್ಯಬದ್ಧ ಬದುಕನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕು ಎಂದರು.


Spread the love

Exit mobile version