ಸಮಾಜಸೇವಕಿ ವೆರೋನಿಕಾ ಕರ್ನೆಲಿಯೊಗೆ ಸಾರ್ಥಕ್ ನಾರಿ -2016 ಪ್ರಶಸ್ತಿ
ಬೆಂಗಳೂರು: ಪರಿಶ್ರಮದಿಂದ ಸಮಾಜ ಮತ್ತು ಸಮೂದಾಯದಲ್ಲಿ ಬದಲಾವಣೆ ತಂದ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ‘ಸಾರ್ಥಕ್ ನಾರಿ- ವುಮೆನ್ ಎಚೀವರ್ಸ್ ಅವಾರ್ಡ್’ ಅನ್ನು ಇಂದು ಬೆಂಗಳೂರಿನ ದಿ ಲಲಿತ್ ಅಶೋಕ್ ಹೊಟೇಲಿನಲ್ಲಿ ನೀಡಲಾಯಿತು. ಸಾಹಿತ್ಯ, ಕಲೆ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ರಾಜಕೀಯ, ಸಮಾಜಸೇವೆ, ಶಿಕ್ಷಣ, ಕ್ರೀಡೆ, ಕೃಷಿ ಮತ್ತು ಜೀವನಶೈಲಿ ಕ್ಷೇತ್ರದಲ್ಲಿ ಸಾಧಿಸಿದ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ‘ಸಾರ್ಥಕ್ ನಾರಿ-2016’ ಪ್ರಶಸ್ತಿ ನೀಡಲಾಯಿತು.
ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ (ಕೆಎಸ್‍ಡಿಎಲ್)ನ ಮಾಜಿ ಅಧ್ಯಕ್ಷೆ ಮತ್ತು ಉಡುಪಿ ಜಿಲ್ಲೆಯ ಹೆಸರುವಾಸಿ ಸಮಾಜ ಸೇವಕಿ ಶ್ರೀಮತಿ ವೆರೊನಿಕಾ ಕರ್ನೆಲಿಯೊ ಅವರಿಗೆ ‘ಸಮಾಜ ಸೇವೆ’ಮತ್ತು ‘ರಾಜಕೀಯ’ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಲವು ಕಠಿಣ ಪರಿಶೀಲನೆ ಮತ್ತು ತೀರ್ಪುಗಾರರ ಸುದೀರ್ಘ ಚರ್ಚೆಯ ನಂತರ ವಿವಿಧ ಕ್ಷೇತ್ರದ ಸಾಧಕಿಯರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಸಮಿತಿಯಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್ ಕುಮಾರ್, ಟೈಟಾನ್ ಕಂಪೆನಿ ಲಿಮಿಟೆಡ್‍ನ ಎಂಡಿ ಮತ್ತು ವಿಸ್ತಾರ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಭಟ್, ವಿನ್ನರ್ಸ್ ಇಸ್ಟಿಟ್ಯೂಟ್ ಪ್ರೈ. ಲಿಮಿಟೆಡ್‍ನ ಲೈಫ್ ಕೋಚ್ ಭರತ್ ಚಂದ್ರ ಇದ್ದರು.
ಪ್ರಶಸ್ತಿ ಪುರಸ್ಕೃತೆ ವೆರೊನಿಕಾ ಕರ್ನೆಲಿಯೊ ಮಾತನಾಡಿ, “ಮಹಿಳಾ ಸಬಲೀಕರಣವೇ ಅಭಿವೃದ್ಧಿಯ ಸಾಧನ. ಮಹಿಳೆಯರು ಹಿಂದುಳಿದರೆ ಯಶಸ್ಸು ಅಸಾಧ್ಯ. ಕಷ್ಟದಲ್ಲಿರುವವರಿಗೆ ನಾನು ನೀಡಿದ ನೆರವನ್ನು ಗುರುತಿಸಿ ಗೌರವಿಸಿದ ತೀರ್ಪುಗಾರರಿಗೆ ನಾನು ಖುಣಿಯಾಗಿದ್ದೇನೆ. ಇದಕ್ಕಿಂತಲೂ ಮಿಗಿಲಾಗಿ, ಪ್ರತಿಬಾರಿ ನನ್ನ ಹುಟ್ಟೂರಿಗೆ ತೆರಳಿದಾಗ ಜನರು ಆಧರಿಸುವ ರೀತಿ ಮತ್ತು ಅವರ ಮುಖದಲ್ಲಿನ ನಗು ನನ್ನಲ್ಲಿ ಸಂತಸ ಮೂಡಿಸುತ್ತದೆ. ಅವರು ನನ್ನ ಶ್ರಮವನ್ನು ಗುರುತಿಸಿದಾಗ ಖುಷಿ ಇಮ್ಮಡಿಗೊಳ್ಳುತ್ತದೆ. ಅವರ ನಗುವೆ ನನಗೆ ಪ್ರಶಸ್ತಿ. ಅದೇ ನನ್ನ ಸಾಧನೆ. ಮುಂದೆಯೂ ಕಷ್ಟದಲ್ಲಿರುವವರಿಗೆ ನನ್ನ ಕೈಯಲ್ಲಾದ ಸಹಾಯ ಮಾಡುವುದುನ್ನು ಮುಂದುವರೆಸುತ್ತೇನೆ”ಎಂದರು.
ಎಲ್ಲಾ ಅಡೆ-ತಡೆಗಳನ್ನು ಮೆಟ್ಟಿನಿಂತು ತಮ್ಮ ಕ್ಷೇತ್ರದಲ್ಲಿರುವ ತೊಡಕುಗಳನ್ನು ಅಳಿಸಲು ಪಣತೊಟ್ಟ ಮಹಿಳೆಯನ್ನು ಗುರುತಿಸುವ ಕೆಲಸವನ್ನು ‘1000 ಪೆಟಲ್ಸ್’ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆಯು ಸಮಾಜಕ್ಕೆ ಮಹಿಳೆಯ ಕೊಡುಗೆಯನ್ನು ಗುರುತಿಸುವ ಹಾಗೂ ಕಾರ್ಯ ದಕ್ಷತೆ ಮತ್ತು ಸಾಧನೆಯನ್ನು ಸಂಭ್ರಮಿಸಲು ವೇದಿಕೆ ಕಲ್ಪಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ‘1000 ಪೆಟಲ್ಸ್’ ಸಂಸ್ಥೆಯ ಸ್ಥಾಪಕ ಮತ್ತು ನಿರ್ದೇಶಕ ಮನೋಜ್ ಪಿ.ಕೆ, “ನಮ್ಮ ಉಳಿದೆಲ್ಲಾ ಕಾರ್ಯಕ್ರಮಗಳಿಗಿಂತ ‘ಸಾರ್ಥಕ್ ನಾರಿ ಅವಾರ್ಡ್’ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದ್ದು. ಕೌಟುಂಬಿಕವಾಗಿ ಮತ್ತು ನಮ್ಮ ಜೀವನದಲ್ಲಿ ಮಹಿಳೆಯರ ಪಾತ್ರದ ಅರಿವೇ ನಮ್ಮ ಈ ಕಾರ್ಯಕ್ರಮಕ್ಕೆ ಸ್ಪೂರ್ತಿ. ನಮಗೆ ಜನ್ಮ ನೀಡಿ, ಬೆಳೆಸಿ ಮತ್ತು ಸ್ಪೂರ್ತಿ ತುಂಬುವಾಕೆ ತಾಯಿ. ನಮ್ಮ ಬಗ್ಗೆ ಮುಂಜಾಗೃತಿ ವಹಿಸಿ ಹುರಿದುಂಬಿಸುವಾಕೆ ಸಹೋದರಿ. ಜೀವನ ಏಳು-ಬೀಳುಗಳನ್ನು ಸರಿದೂಗಿಸಿಕೊಂಡು ಬಾಳುವವಳು ಮಡದಿ” ಎಂದರು.
“ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ಭಾಗಿಯಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ನೂತನ ಸಮೂದಾಯದ ಏಳಿಗೆಗೆ ಮತ್ತು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆಗಳಿವೆ” ಎಂದರು.