ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು

Spread the love

ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು

ಮಂಗಳೂರು : ಸಾಮಾನ್ಯವಾಗಿ ಭಾರತದ ಸಂದರ್ಭದಲ್ಲಿ ಜಾತಿ ಸಮ್ಮೇಳನ ಧಾರ್ಮಿಕ ಸಮ್ಮೇಳನಗಳ ಅಗತ್ಯ ಇದ್ದು ಮುಸ್ಲಿಮರ, ಬಿಲ್ಲವರ, ಮೊಗವೀರರ, ದಲಿತರ ಸಮ್ಮೇಳನಗಳನ್ನೂ ಮಾಡಿದರೆ ತಪ್ಪೇನಿಲ್ಲ. ಆಯಾ ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಇಂತಹ ಸಮಾವೇಶಗಳು ಅನಿವಾರ್ಯ. ಸಮಾವೇಶಗಳನ್ನು ಮಾಡುವವರ ಉದ್ಧೇಶ ಆಯಾ ಸಮಾಜದ ಕಟ್ಟಕಡೆಯ ಮನುಷ್ಯನೆಡೆಗೆ ಇರಬೇಕೇ ಹೊರತು ಮೇಲ್ವರ್ಗದಲ್ಲಿರುವ ವ್ಯಕ್ತಿಯ ಬಗ್ಗೆ ಅಲ್ಲ ಎಂದು ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಮಂಗಳೂರಿನ ಬಲ್ಮಠದ ಶಾಂತಿ ನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವ ಜನ ಒಕ್ಕೂಟ (ಡಿವೈಎಫ್‍ಐ) ಆಯೋಜಿಸಿರುವ ಎರಡು ದಿನಗಳ ಮುಸ್ಲಿಂ ಯುವ ಸಮಾವೇಶದ ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.
ಭಾರತದ ಸಂದರ್ಭದಲ್ಲಿ ಯಾವುದೇ ತಪ್ಪು ಮಾಡಿದಾಗ ಆರೋಪಿಯಾಗಿದ್ದು, ಅವನ ಮೇಲಿನ ಆರೋಪ ಸಾಬೀತಾದ ಮೇಲೆ ಅಪರಾಧಿ ಆಗುತ್ತಾನೆ. ಆದರೆ ಮುಸ್ಲಿಮರ ವಿಷಯದಲ್ಲಿ ಇದು ಹೀಗಿಲ್ಲ. ಆರೋಪಿಯಾಗಿದ್ದಾಗಲೇ ಅವನನ್ನು ಅಪರಾಧಿಯನ್ನಾಗಿಸಲಾಗುತ್ತಿದೆ ಎಂದರು. ಮುಸ್ಲಿಮರು ಇತಿಹಾಸವನ್ನು ತೆರದು ನೋಡಬೇಕು, ಇಲ್ಲಿ ಕೇವಲ ದಾವೂದ್ ಇಬ್ರಾಹಿಂ ಇಲ್ಲ, ಚಾಂದ್‍ಬೀಬಿ, ಅಬೂಬಕರ್‍ರಂತಹ ಮಹನೀಯರಿದ್ದು ಅಂತಹ ಮಹನೀಯ ವ್ಯಕ್ತಿಗಳ ಸ್ಮರಣೆ ಮಾಡಿದಾಗ ಮುಸ್ಲಿಮರಲ್ಲಿ ಆತ್ಮಸ್ಥೈರ್ಯ ಬರಲು ಸಾಧ್ಯ ಎಂದು ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯಪಟ್ಟರು.

ಮುಸ್ಲಿಮರನ್ನು ಭಾರತದಲ್ಲಿ ಕೆಲವರಿಂದ ಓಲೈಕೆಗೊಳಗಾಗಿ ಇನ್ನೂ ಕೆಲವರಿಂದ ದ್ವೇಷಕ್ಕೊಳಗಾಗಿ ಸಂಕಟಕ್ಕೆ ಸಿಲುಕಿದ್ದಾರೆ. ಓಲೈಕೆ ಮಾಡುವವರಿಂದ ಅಂತಹ ದೊಡ್ಡ ಸಹಾಯವೂ ಏನೂ ಆಗಿಲ್ಲ. ಈ ದೇಶದ ಮುಸ್ಲಿಮರು ಯಾಕೆ ದೊಡ್ಡ ನಾಯಕತ್ವ ಆಗಿ ಬೆಳೆಯುತ್ತಿಲ್ಲ ಎಂಬ ಪ್ರಶ್ನೆಯನ್ನು ಹಾಕಿಕೊಂಡು ಇದರ ಬಗ್ಗೆ ಮುಸ್ಲಿಮರು ಚಿಂತಿಸಬೇಕಿದೆ ಎಂದ ದಿನೇಶ್ ಅಮೀನ್ ಮಟ್ಟು, ಮೊಹಮ್ಮದ್ ಅಲಿ ಜಿನ್ನಾ ಥರದ ನಾಯಕರು ಕೂಡ ಕೇವಲ ಜಾತಿ ಧರ್ಮಕ್ಕೆ ಸೀಮಿತಗೊಂಡಿದ್ದನ್ನು ನಾವು ಗಮನಿಸಿದರೆ ಅದರ ಹಿನ್ನೆಲೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಅರ್ಥ ಎಂದರು.

ಕರ್ನಾಟಕದ ಮಟ್ಟಿಗೆ ಮಾಜಿ ಸಚಿವ ಮೊಯಿದ್ದೀನ್ ಅಂತಹವರಿದ್ದಾರೆ, ಅವರಿಗೆ ಇತ್ತೀಚೆಗೆ ಸಮುದಾಯದಿಂದ ಸನ್ಮಾನಿಸಲಾಯಿತು, ನನ್ನ ಪ್ರಕಾರ ಅವರನ್ನು ಇಪ್ಪತ್ತು ವರ್ಷಗಳ ಹಿಂದೆ ಸನ್ಮಾನಿಸಿದ್ದರೆ, ಮೊಯಿದ್ದೀನ್ ರಾಜಕೀಯದಿಂದ ದೂರ ಉಳಿಯುತ್ತಿದ್ದಿಲ್ಲ ಎಂದು ಅನಿಸುತ್ತದೆ ಎಂದು ಅನಿಸಿಕೆ ವ್ಯಕ್ತಪಿಸಿದರು. ನಾಯಕರನ್ನು ಗುರುತಿಸುವ ಕೆಲಸವನ್ನು ಸಮುದಾಯ ಮಾಡಬೇಕು. ಈ ನಿಟ್ಟಿನಲ್ಲಿ ಉದಾರವಾದ ಮುಕ್ತ ಚಿಂತನೆಯ ನಾಯಕರನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಸಮುದಾಯಕ್ಕಿದ್ದು ಹಾಗೆ ಮುಕ್ತ ಉದಾರವಾದಿ ನಾಯಕರನ್ನು ಒಪ್ಪಿಕೊಳ್ಳದಿರುವುದು ಮುಸ್ಲಿಂ ಸಮುದಾಯದ ಸಮಸ್ಯೆಯಾಗಿದೆ ಎಂದು ಅಮೀನ್ ಮಟ್ಟು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡುವುದಿಲ್ಲ. ಹಾಗೆ ಚರ್ಚೆ ಮಾಡದಿರುವುದು ಒಂದು ಲೋಪ ಎಂದು ಏಕೆ ಅನ್ನಿಸುತ್ತದೆ ಎಂದರೆ ಮುಸ್ಲಿಮರು ರಣರಂಗದ ಮಧ್ಯೆ ಜೀವ ತೆತ್ತಿದ್ದಾರೆ, ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ತುಂಬ ದೊಡ್ಡದು, ಆದರೆ ಗಾಂಧೀಜಿಯ ಅಹಿಂಸಾವಾದದ ಮೂಲಕ ಸ್ವಾತಂತ್ರ್ಯ ಬಂತೆಂದು ಒಪ್ಪುತ್ತೇವೆ ಆದರೆ ಇತಿಹಾಸದ ಪುಟಗಳನ್ನು ನೋಡಿದಾಗ ಇದು ಸಂಪೂರ್ಣ ಸತ್ಯ ಅಲ್ಲ ಎನಿಸುತ್ತದೆ ಎಂದು ದಿನೇಶ್ ಅಮೀನ್‍ಮಟ್ಟು ಹೇಳಿದರು. ಭಾರತ ಸ್ವಾತಂತ್ರ್ಯಕ್ಕೆ ಹೋರಾಡಲಾಯಿತು ಎಂದು ಓದುತ್ತೇವೆ ಆದರೆ ಯಾರು? ಎಂದು ಪ್ರಶ್ನೆ ಕೇಳುವುದಿಲ್ಲ. ಆದರೆ ವಾಸ್ತವದಲ್ಲಿ ಬ್ರಿಟಿಷರ ವಿರುದ್ಧ ಮುಸ್ಲಿಮರು ಮೊದಲು ಹೋರಾಟ ಮಾಡಿದ್ದರು. ಮುಸ್ಲಿಮ ಅರಸರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿತ್ತು. ಅದಾದ ನಂತರದಲ್ಲೂ ಮುಸ್ಲಿಮರ ಸಂಖ್ಯೆ ಹೆಚ್ಚಿತ್ತು, ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದದ್ದು ಮುಸ್ಲಿಮರೇ. ಜಾಕೀರ್ ಖಾನ್ ಅವರ ಒಂದು ಪುಸ್ತಕದಲ್ಲಿ ಈ ಬಗ್ಗೆ ವಿವರಗಳಿವೆ. ಮುಸ್ಲಿಮರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚೆ ಮಾಡದಿರಲು ಕಾರಣ ಗಾಂಧಿಯವರ ಹೋರಾಟದ ಮೂಲಕವೇ ಸ್ವಾತಂತ್ರ್ಯ ಸಿಕ್ಕಿತೆಂದು ನಾವು ಒಪ್ಪಿಕೊಂಡಿರುವುದು ಎಂದು ದಿನೇಶ್ ಹೇಳಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಮುಸ್ಲಿಮರ ಪಾತ್ರದ ಬಗ್ಗೆ ಚರ್ಚಿಸದಿರಲು ಮತ್ತೂ ಒಂದು ಕಾರಣ ಮುಸ್ಲಿಂ ಅರಸರನ್ನು ಮುಸ್ಲಿಂ ನಾಯಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು, ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಅಪನಂಬಿಕೆಯ ಅನುಮಾನದ ಸಂಬಂಧ ಬೆಳೆಯಲು ಕೊಡುಗೆ ಕೊಟ್ಟವರು ಬ್ರಿಟಿಷರು. ಬ್ರಿಟಿಷರು ಮೂಲತಃ ವ್ಯಾಪಾರಿಗಳು, ಒಡೆದಾಳುವ ನೀತಿಯನ್ನು ಅವರು ಅನುಸರಿಸಿದರು. ದಕ್ಷಿಣ ಕನ್ನಡವನ್ನು ಕೋಮುವಾದದ ಪ್ರಯೋಗಶಾಲೆ ಎನ್ನುತ್ತಾರೆ. ಇದರ ಆಳಕ್ಕೆ ಹೋದರೆ ಇದರ ಹಿಂದೆ ಕೂಡ ವ್ಯಾಪಾರಿಗಳೇ ಇದ್ದಾರೆ ಎಂದು ಅಮೀನ್‍ಮಟ್ಟು ಹೇಳಿದರು.

ದಕ್ಷಿಣ ಕನ್ನಡದಲ್ಲಿ ವ್ಯಾಪಾರ ಮಾಡುವವರಲ್ಲಿ ಹಿಂದೂಗಳಂತೆ ಮುಸ್ಲಿಮರೂ ಇದ್ದಾರೆ. ಕೋಮುಗಲಭೆಯಾಗಿ ಮುಸ್ಲಿಂ ವ್ಯಾಪಾರಿಯ ಅಂಗಡಿ ಸುಟ್ಟು ಹಾಕಿದರೆ ಅದರ ಲಾಭ ಯಾರಿಗೆ ಆಗುತ್ತದೆ? ಕೋಮು ಗಲಭೆಗಳ ಹಿಂದೆ ಕೇವಲ ಧಾರ್ಮಿಕ ಕಾರಣಗಳಿಲ್ಲ. ವ್ಯಾಪಾರಿ ಕಾರಣಗಳಿವೆ ಎಂಬುದನ್ನು ಜನರಿಗೆ ತಿಳಿಸಿಕೊಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟ ಎಲ್ಲೆಲ್ಲಿ ಜೋರಾಗಿ ನಡೆಯುತ್ತಿತ್ತೋ ಅಲ್ಲೆಲ್ಲ ಕೋಮು ಗಲಭೆಗಳು ನಡೆಯುತ್ತಿದ್ದವು. ಯುಪಿ ಚುನಾವಣೆಗೂ ಮೊದಲು ಮುಜಾಫ್ಫರ್ ನಗರದ ಕೋಮುಗಲಭೆಗಳನ್ನು ಗಮನಿಸಬಹುದು. ಒಡೆದು ಆಳುವ ನೀತಿ ಈಗ ಹೇಗೆ ಮುಂದುವರೆದಿದೆ ಎಂದು ನೋಡಬಹುದು. ಹೀಗಾಗಿ ಮೆಳ್ಳೆಗಣ್ಣಿನ ಇತಿಹಾಸಕಾರರ ಇತಿಹಾಸವನ್ನು ನಿರಾಕರಿಸಬೇಕಿದೆ ಎಂದು ದಿನೇಶ್ ಹೇಳಿದರು.

ಮುಸ್ಲಿಂ ಅರಸರು ಮತಾಂತರ ಮಾಡಿದರು ಎಂದು ಹೇಳುತ್ತಾರೆ. ಮುಸ್ಲಿಂ ಅರಸರು 700 ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ. ಹಾಗೊಂದು ವೇಳೆ ಮತಾಂತರ ತೀವ್ರವಾಗಿ ನೆದಿದ್ದರೆ ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂರ ಸಂಖ್ಯೆ ಶೇಕಡಾ 14 ಮಾತ್ರ ಎಂದವರು ಹೇಳಿದರು.

ನಾನಾಸಾಹೇಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದಾಗ ಅವರ ಸೈನ್ಯದಲ್ಲಿ ಬಹುಸಂಖ್ಯಾತರೇ ಇದ್ದರು. ಉದ್ಧೇಶಪೂರ್ವಕವಾಗಿ ಮುಸ್ಲಿಮರನ್ನು ದೂರ ಇಟ್ಟಿದ್ದಕ್ಕೆ ಅನುಮಾನದಿಂದ ದೂರ ಮಾಡಿದ್ದಕ್ಕೆ ಸೇನಾ ಭರ್ತಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿಲ್ಲ. ಮುಸ್ಲಿಮರ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಪ್ರಾತಿನಿಧ್ಯ ಅಂತ ಇದ್ದರೆ ಅದು ಜೈಲಿನಲ್ಲಿ ಮಾತ್ರ ಎಂದು ದಿನೇಶ್ ಅಮೀನ್‍ಮಟ್ಟು ಕಳವಳ ವ್ಯಕ್ತಪಡಿಸಿದರು.

ಕೋಮುವಾದವನ್ನು ವಿರೋಧಿಸುವುದು ಸರಿ ಅದನ್ನು ಹೊಡೆದೋಡಿಸುವುದು ಹೇಗೆ? ಅದನ್ನು ಹೊಡೆದೋಡಿಸಬೇಕಾದರೆ ಅದು ಹೇಗೆ ಹುಟ್ಟುತ್ತದೆ ಎಂದು ನೋಡಬೇಕು. ಅಲ್ಪಸಂಖ್ಯಾತರ ಕೋಮುವಾದ ಏಕೆ ಹುಟ್ಟಿಕೊಳ್ಳುತ್ತದೆ, ಬಹುಸಂಖ್ಯಾತರ ಕೋಮುವಾದ ಏಕೆ ಹುಟ್ಟಿಕೊಳ್ಳುತ್ತದೆ? ಪಾಕಿಸ್ತಾನದ ಮುಸ್ಲಿಮರಲ್ಲಿ ಒಂದು ಮೇಲರಿಮೆ ಇದೆ ಅದೇ ರೀತಿ ಭಾರತದ ಹಿಂದೂಗಳಲ್ಲೂ ಮೇಲರಿಮೆ ಇದೆ. ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ಹುಟ್ಟುವ ಅಭದ್ರತೆಯ ಹಿನ್ನೆಲೆಯಲ್ಲಿ ಕೋಮುವಾದ ಹುಟ್ಟುತ್ತದೆ ಎಂದು ಅವರು ಹೇಳಿದರು.

ಮಹಮ್ಮದ್ ಅಲಿ ಜಿನ್ನಾ ಸೆಕ್ಯುಲರ್ ಆದ ನಾಯಕ, ಕಾರಣ ಅವರ ಶಿಕ್ಷಣ, ಅವರ ಮನೆಯ ಹಿನ್ನೆಲೆ ಇದಕ್ಕೆ ಕಾರಣ ಆಯಿತು. ಹೀಗಿದ್ದಾಗ ಅವರು ಒಂದು ಧರ್ಮದ ನಾಯಕರಾಗಿ ಯಾಕೇ ಹೋದರೆಂದರೆ ಅಧಿಕಾರದ ಲಾಲಸೆ ಮನುಷ್ಯನನ್ನು ಹಾಗೆ ಮಾಡಿಸುತ್ತದೆ. ಹೀಗಿದ್ದರೂ ಪಾಕಿಸ್ತಾನದಲ್ಲಿ ಇರುವ ಎಲ್ಲ ಹಿಂದೂ ಮುಸ್ಲಿಮರು ಆ ದೇಶವಾಸಿಗಳೆಂದು ಜಿನ್ನಾ ಹೇಳಿದ್ದರೆಂದು ನೆನಪಿಸಿದ ದಿನೇಶ್ ಭಾರತದಲ್ಲಿ ಕೋಮು ಸಂಘಟನೆಗಳು ಬೆಳೆಯಲು ಕಾರಣವೇನೆಂದು ತಿಳಿಸಿದರು. 1937 ರಲ್ಲಿ ಪ್ರಾಂತೀಯ ಸರ್ಕಾರ ರಚನೆಯಾದಾಗ ಜಿನ್ನಾ ಕೂ ಅದರಲ್ಲಿದ್ದರು. ಈ ಪ್ರಾತಿನಿಧ್ಯವು ಎಲ್ಲಾ ವ್ಯಕ್ತಿಗಳನ್ನೂ ಒಳಗೊಂಡಿದ್ದರೆ ಭಾರತದ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದ ಅಮೀನ್ ಮಟ್ಟು ಆದರೆ ಆಗ ನಡೆದ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಮುಸ್ಲಿಂ ಲೀಗ್ ಇದ್ದಾಗಲೂ ಜನ ಮಾತ್ರ ಜಾತ್ಯಾತೀತರಾಗಿ ಕಾಂಗ್ರೆಸ್‍ಗೆ ಮತ ಚಲಾಯಿಸಿದರು. ಗಾಂಧಿಯವರ ಹಿಂದೆ ಎಲ್ಲಾ ರೀತಿಯ ಜನ ಹೋಗಿದ್ದರಿಂದ ಹಿಂದೂ ಮಹಾಸಭಾ ಮುಸ್ಲಿಂ ಲೀಗ್ ತೀವ್ರವಾಗಿ ಚಟುವಟಿಕೆ ಮಾಡಲು ಕಾರಣವಾಯಿತು ಎಂದರು.

ದೇಶ ವಿಭಜನೆಯ ವಿಷಯ ಇಂದಿಗೂ ಹಿಂದೂ ಮುಸ್ಲಿಮರನ್ನು ಕಾಡುತ್ತದೆ. ಸಮಾನ ಶತ್ರುವಿದ್ದಾಗ ಮನೆಯಲ್ಲಿ ಜಗಳ ಆಗುವುದಿಲ್ಲ. ಆದರೆ ವೈರಿಗಳಿಲ್ಲದಾದಾಗ ಮನೆಯಲ್ಲಿ ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಪಾಕಿಸ್ಥಾನದಂತೆ ಚೀನಾ ಬಾಂಗ್ಲಾ ದೇಶಗಳನ್ನೂ ಸಮಾನ ವೈರಿ ದೇಶಗಳೆಂದು ಪರಿಗಣಿಸಿದ್ದರೆ ಇಂಡಿಯಾ ಪಾಕಿಸ್ತಾನದ ನೆಲೆಯಲ್ಲಿ ಹಿಂದೂ ಮುಸ್ಲಿಂ ಎಂಬ ಭಿನ್ನತೆ ಸೃಷ್ಠಿಸುತ್ತದೆ. ಒಂದು ಭೂಭಾಗದ ಹಂಚಿಕೆ ಎಷ್ಟೊಂದು ಘೋರ ಎಂದು ದಿನೇಶ್ ಅಮೀನ್ ಮಟ್ಟು ಕಳವಳ ವ್ಯಕ್ತಪಡಿಸಿದರು.

ಖಿಲಾಪತ್ ಚಳುವಳಿಯ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂಗಳು ಕಾಣಿಸಿಕೊಂಡರು. ಇಂದು ದೇಶಪ್ರೇಮದ ಬಗ್ಗೆ ಪಾಠ ಮಾಡುವ ಜನ ಅವರ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟು ಜನ ಭಾಗವಹಿಸಿದರೆಂಬ ಬಗ್ಗೆ ಇನ್ನೂ ಅಂಕಿ ಅಂಶ ಕೊಟ್ಟಿಲ್ಲ ಎಂದು ನುಡಿದರು.

ದೇಶದ ಬಹುಸಂಖ್ಯಾತರ ಕೋಮುವಾದ ದೇಶವನ್ನು ನಾಶ ಮಾಡಿದರೆ, ಅಲ್ಪಸಂಖ್ಯಾತರ ಕೋಮುವಾದ ಅಲ್ಪಸಂಖ್ಯಾತರನ್ನೇ ನಾಶ ಮಾಡುತ್ತದೆ ಎಂದು ಸಂವಾದದ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸೇರಿದ್ದ ಸಭಿಕರ ಪೈಕಿ ಹಲವು ಜನ ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಿದರು.


Spread the love