ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ, ಸುಭದ್ರವಾಗಿದೆ – ಸಚಿವ ಯು.ಟಿ. ಖಾದರ್
ಮಂಗಳೂರು : ಸರಕಾರ ನೀಡುತ್ತಿರುವ ಯಶಸ್ವಿ ಕಾರ್ಯಕ್ರಮಗಳಿಂದ ಗೊಂದಲಕ್ಕೀಡಾಗಿರುವ ಪ್ರತಿಪಕ್ಷ ಸಮಸ್ಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಆದರೆ ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಮತ್ತು ಸರಕಾರ ಸುಭದ್ರವಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಧಿಕಾರ ಸ್ವೀಕರಿಸಿದ ಒಂದು ವಾರದೊಳಗೆ ಸಾಲ ಮನ್ನಾ ಮಾಡಬೇಕೆಂದು ಬಿಜೆಪಿ ಹೇಳಿಕೊಂಡಿತ್ತು. ಆ ಸಮಸ್ಯೆಯನ್ನು ನೂತನ ಸರಕಾರ ಸಮರ್ಥವಾಗಿ ನಿಭಾಯಿಸಿದೆ. ಕೊಡಗು ಹಾಗೂ ದ.ಕ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಮಸ್ಯೆಯನ್ನೂ ಸಮರ್ಥವಾಗಿ ಎದುರಿಸಿದೆ. ಆದರೆ ಬಿಜೆಪಿ ಮಾತ್ರ ಅಧಿಕಾರದ ಲಾಲಸೆಯಿಂದ ತನ್ನ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅಡಿಕಲ್ಲು ಹಾಕಿರುವುದು ಅಥವಾ ಮನೆ ನಿರ್ಮಾಣ ಕಾಮಗಾರಿ ಆರಂಭ ಆಗಿ ವಿವಿಧ ಕಾರಣದಿಂದ ಅಪ್ಲೋಡ್ ಆಗದೆ ಬ್ಲಾಕ್ ಆಗಿದ್ದಲ್ಲಿ ಸಂಬಂಧಪಟ್ಟ ಪಿಡಿಒಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಸೆ. 25ರಿಂದ 15 ದಿನಗಳ ಕಾಲ ಅರ್ಹ ಫಲಾನುಭವಿಗಳ ಮನವಿಯ ಮೇರೆಗೆ ಪಿಡಿಒಗಳು ಈ ಪರಿಶೀಲನೆ ನಡೆಸಲು ಅವಕಾಶವಿರುತ್ತದೆ ಎಂದರು. ಕಳೆದ ಕೆಲ ವರ್ಷಗಳಿಂದ ವಿವಿಧ ತಾಂತ್ರಿಕ ಕಾರಣಗಳಿಂದ ವಸತಿ ನಿಗಮ ಯೋಜನೆಯಡಿ ಅರ್ಧಕ್ಕೆ ಬ್ಲಾಕ್ ಆಗಿದ್ದ ಅರ್ಜಿಗಳಿಗೆ ನಿಗಮದ ವೆಬ್ಸೈಟ್ ಮೂಲಕ ಅಪ್ ಲೋಡ್ ಮಾಡಲು ಸೆ. 20ರವರೆಗೆ ಕಾಲಾವಕಾಶ ನೀಡಲಾಗಿತ್ತು. 69,000 ಅರ್ಜಿಗಳು ಬ್ಲಾಕ್ ಆಗಿದ್ದು, ಅವುಗಳನ್ನು ತಪಾಸಣೆಗೊಳಪಡಿಸಿದಾಗ 18000 ಅರ್ಹ ಅರ್ಜಿಗಳನ್ನು ಮತ್ತೆ ಅಪ್ಲೋಡ್ ಮಾಡಲಾಗಿದೆ. ಇದೀಗ ಮತ್ತೆ ಅರ್ಹ ಫಲಾನುಭವಿಗಳಿಗೆ ಈ ಕಾಲಾವಕಾಶವನ್ನು ನೀಡಲಾಗುತ್ತಿದೆ. ಫಲಾನುಭವಿಗಳು ತಮ್ಮ ಪಂಚಾಯತ್ಗೆ ಮಾಹಿತಿ ನೀಡಿದ್ದಲ್ಲಿ ಪಿಡಿಒಗಳು ತಕ್ಷಣ ಪರಿಶೀಲನೆ ನಡೆಸಿ ವರದಿ ಕಳುಹಿಬೇಕು ಎಂದು ಅವರು ಹೇಳಿದರು.
ಪ್ರಸಕ್ತ ವರ್ಷ ವಸತಿ ಯೋಜನೆಯಡಿ ರಾಜ್ಯದಲ್ಲಿ 4 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಈವರೆಗೆ ಗ್ರಾಮೀಣ ಪ್ರದೇಶದಲ್ಲಿ ವಸತಿ ಮನೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಬಾರಿ ನಗರ ಪ್ರದೇಶಕ್ಕೂ ಒತ್ತು ನೀಡಲಾಗುವುದು ಎಂದು ಸಚಿವ ಖಾದರ್ ಹೇಳಿದರು.
ನಗರ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಸರಕಾರಿ ಜಾಗ ಗುರುತಿಸಿ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಅರ್ಹರ ಪಟ್ಟಿ ಕಳುಹಿಸಿದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ವಸತಿ ಸಂಕೀರ್ಣದ ಮಾದರಿಯಲ್ಲಿ ಸೌಲಭ್ಯವನ್ನು ಒದಗಿಸಲಾಗುವುದು. ನಗರ ಪಾಲಿಕೆ ಪ್ರದೇಶದಲ್ಲಿ ಖಾಸಗಿ ಜಮೀನಿನಲ್ಲಿ ಮನೆ ನಿರ್ಮಾಣದ ಪ್ರಸ್ತಾಪಕ್ಕೆ ಸಂಬಂಧಿಸಿ ಶೇ. 50:50ರಲ್ಲಿ ನಿವೇಶನಕ್ಕೆ ಮೂಲ ಸೌಕರ್ಯದೊಂದಿಗೆ ವಸತಿ ಯೋಜನೆಗೆ ಸರಕಾರ ಮುಂದಾಗಿದೆ. ಗೃಹ ಮಂಡಳಿಯು ಜಂಟಿ ಅಭಿವೃದ್ಧಿಗೆ ಸಂಬಂಧಿಸಿ ಸಭೆಯಲ್ಲಿ ಸಮ್ಮತಿಯನ್ನು ನೀಡಿದೆ. ಈ ಪ್ರಕಾರ ಮೂಲಸೌಕರ್ಯ, ಮಾರುಕಟ್ಟೆ ವ್ಯವಸ್ಥೆಯನ್ನು ಸರಕಾರ ಒದಗಿಸಲಿದ್ದು, ನಿರ್ಮಾಣವಾಗುವ ಮನೆಗಳಲ್ಲಿ ಶೇ. 50ರಷ್ಟನ್ನು ಜಮೀನಿನವರು ತಾವೇ ಮಾರಾಟ ಮಾಡಲು ಅವಕಾಶವಿರುತ್ತೆ ಎಂದು ಸಚಿವ ಖಾದರ್ ಹೇಳಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಭಾರೀ ಮಳೆಯ ಹೊರತಾಗಿಯೂ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿದೆ. ಪರಿಸರ ಸಂಬಂಧಿ ಗಂಭೀರ ಸಮಸ್ಯೆ ಇದಾಗಿರುವುದರಿಂದ ತಜ್ಞರ ಮೂಲಕ ಮೌಲ್ಯಮಾಪನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಸಚಿವ ಖಾದರ್ ನುಡಿದರು.
ಮರಳು ಮತ್ತು ಭೂ ಪರಿರ್ವತನೆ ಸಮಸ್ಯೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಸಭೆಯನ್ನು ಸೆ. 24ರಂದು ಕರೆದಿದ್ದಾರೆ. ಇಲ್ಲಿ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಮರಳು ಗಣಿಗಾರಿಕೆಗೆ ಸರಕಾರ ನಿಷೇಧ ವಿಧಿಸಿರುವುದರಿಂದ ಕರಾವಳಿಯಲ್ಲಿ ಮರಳಿನ ಸಮಸ್ಯೆ ಉದ್ಭವವಾಗಿದೆ. ಹಣದ ಆಸೆಗಾಗಿ ಕೇರಳಕ್ಕೆ ಅಧಿಕ ಬೆಲೆಗೆ ಮರಳನ್ನು ಸಾಗಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೇರಳದಲ್ಲಿನ ಮರಳಿನ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಬೇಕಾಗಿದೆ. ಅದಕ್ಕಾಗಿ ಬಂದರಿಗೆ ವಿದೇಶದಿಂದ ಬರುವ ಮರಳನ್ನು ಲಾರಿಯಲ್ಲಿ ಜಿಪಿಎಸ್ ಅಳವಡಿಸಿ ಪೊಲೀಸಿಂಗ್ ವ್ಯವಸ್ಥೆ ಮೂಲಕ ಕೇರಳಕ್ಕೆ ಸಾಗಿಸಲು ವ್ಯವಸ್ಥೆ ಮಾಡಲು ಸಲಹೆ ನೀಡಲಾಗಿದೆ. ಹೀಗೆ ಮಾಡಿದಾಗ ಕರಾವಳಿಯಲ್ಲಿ ಮರಳಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.