ಸರಕಾರದ ಮಾರ್ಗಸೂಚಿ ಬಳಸಿಕೊಂಡು ಭಕ್ತರ ದರ್ಶನಕ್ಕೆ ತೆರೆದುಕೊಂಡ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ
ಕುಂದಾಪುರ: ಕೋವಿಡ್ 19 ಹಿನ್ನೆಲೆ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಸಂಕ್ರಮಣ ದಿನವಾದ ಜೂ.15 ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದೇವಸ್ಥಾನಕ್ಕೆ ಆಗಮಿಸುವ ಮುಖ್ಯದ್ವಾರದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ನೀಡಿ ಕೈಶುಚಿಗೊಳಿಸಿದ ಬಳಿಕ ಥರ್ಮೋಮೀಟರ್ ನಿಂದ ದೇಹದ ಉಷ್ಣಾಂಶ ಪರೀಕ್ಷೆ ನಡೆಸಿದ ನಂತರ ದೇವಾಲಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವರಿಗೆ ಕೈಮುಗಿಯುವ ಸ್ಥಳದಲ್ಲೂ ಇನ್ನೊಮ್ಮೆ ಸ್ಯಾನಿಟೈಸರ್ ನೀಡಿ ಕೈಶುಚಿಗೊಳಿಸಿದ ಬಳಿಕ ಪ್ರಾರ್ಥನೆಗೆ ಹಾಗೂ ಕಾಣಿಕೆ ಹುಂಡಿಗೆ ಹಣ ಹಾಕಲು ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಯಾವುದೇ ಮಂಗಳಾರತಿ, ಹಣ್ಣುಕಾಯಿ ಸಾಮಾಗ್ರಿಗಳನ್ನು ತರಬೇಡಿ ಎಂದು ಮನವರಿಕೆ ಮಾಡಲಾಗುತ್ತಿದ್ದು, ಮೊದಲ ದಿನವಾದ್ದರಿಂದ ಮಾಹಿತಿ ಕೊರತೆಯಿಂದಾಗಿ ಕೆಲ ಭಕ್ತರು ತಂದಿರುವ ಮಂಗಳಾರತಿ ಹಾಗೂ ಹಣ್ಣುಕಾಯಿ ಸಾಮಗ್ರಿಗಳನ್ನು ವಾಪಾಸು ಕಳುಹಿಸದೆ ಮಂಗಳಾರತಿ ಸಾಮಗ್ರಿಗಳನ್ನು ಪಡೆಯುತ್ತಿದ್ದಾರೆ. ಭಕ್ತರಿಂದ ಪಡೆದ ಹಣ್ಣುಕಾಯಿ, ಮಂಗಳಾರತಿ ಸಾಮಗ್ರಿಗಳನ್ನು ಸ್ಯಾನಿಟೈಸರ್ ಮಾಡಿದ ಬಳಕವಷ್ಟೇ ದೇವರಿಗೆ ಅರ್ಪಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಸಿದೆ. ಇನ್ನು ಎಲ್ಲಾ ದೇವಾಲಯಗಳಂತೆ ಭಕ್ತರಿಗೆ ತೀರ್ಥಪ್ರಸಾದಕ್ಕೆ ನಿರ್ಬಂಧ ಹೇರಲಾಗಿದ್ದು, ಸ್ಯಾನಿಟೈಸ್ ಮಾಡಿರುವ ಪ್ಯಾಕೆಟ್ ನಲ್ಲಿರುವ ವಿಭೂತಿ ಪ್ರಸಾದವನ್ನು ಮಾತ್ರ ಭಕ್ತರಿಗೆ ಕೊಡಲಾಗುತ್ತಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ದೇವಸ್ಥಾನದ ಒಳಗಡೆ ಅಲ್ಲಲ್ಲಿ ವೃತ್ತ ಬಿಡಿಸಿದ್ದು, ವೃತ್ತದೊಳಗೆ ಭಕ್ತರಿಗೆ ನಿಲ್ಲಲು ಸೂಚನೆ ನೀಡಲಾಗುತ್ತಿದೆ. ಅಲ್ಲಲ್ಲಿ ಸಿಬ್ಬಂದಿಗಳು ಕೋವಿಡ್-19 ನಿಯಮಗಳನ್ನು ಅನುಸರಿಸಲು ಭಕ್ತರಿಗೆ ಸೂಚನೆ ನೀಡುತ್ತಿದ್ದಾರೆ.
ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದ್ದು, ಕಳೆದ ಒಂದು ವಾರಗಳಿಂದ ರಾಜ್ಯದ ಎಲ್ಲಾ ದೇವಾಲಯಗಳನ್ನು ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೂ ಮಾರಣಕಟ್ಟೆ ದೇವಾಲಯ ಆಡಳಿತ ಮಂಡಳಿ ಸಂಕ್ರಾಂತಿ ದಿನದಂದು ಭಕ್ತರಿಗೆ ಅವಕಾಶ ಮಾಡಿಕೊಡುವ ತೀರ್ಮಾನ ಕೈಗೊಂಡ ಹಿನ್ನೆಲೆ ಸಂಕ್ರಾಂತಿ ದಿನವಾದ ಇಂದು ಮಾರಣಕಟ್ಟೆ ದೇವಾಲಯದಲ್ಲಿ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಹಲವು ದಿನಗಳಿಂದ ಬ್ರಹ್ಮಲಿಂಗೇಶ್ವನ ದರ್ಶನ ಭಾಗ್ಯಕ್ಕೆ ಹಾತೊರೆಯುತ್ತಿದ್ದ ಭಕ್ತರು ದೇವರ ದರ್ಶನಕ್ಕಾಗಿ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂದಿತು.