ಸರಕಾರದ ಯೋಜನೆಗಳ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ‘ಸೆಲ್ಫೀ ಭಾಗ್ಯ’ ನೀಡಿದ ಸಚಿವ ಪ್ರಮೋದ್!
ಉಡುಪಿ: ರಾಜ್ಯ ಸರಕಾರದ ನಾಲ್ಕು ವರ್ಷದ ಆಡಳಿತದ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಫಲಾನುಭವಿಗಳು ಅನುಭವ ಹಂಚಿಕೊಳ್ಳುವ ವೇಳೆ ಫಲಾನುಭವಿ ಮಹಿಳೆಗೆ ಸಚಿವರು ಹೊಸದಾಗಿ ಸೆಲ್ಫೀ ಭಾಗ್ಯ ಕರುಣಿಸಿದ ಸ್ವಾರಸ್ಯಕರ ಘಟನೆ ಜರುಗಿತು.
ಶನಿವಾರ ಮಣಿಪಾಲ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗಿದ ಜನಮನ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಪಶುಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ವೇದಾವತಿ ಎಂಬ ಮಹಿಳೆ ತಮ್ಮ ಅನುಭವ ಹಂಚಿಕೊಳ್ಳುತ್ತಿರುವ ವೇಳೆ ಮಾತನಾಡಿದ ಅವರು ಸರಕಾರ ನೀಡಿರುವ ಪಶುಭಾಗ್ಯ ಯೋಜನೆಯ ಫಲವಾಗಿ ಸ್ವಾವಲಂಬಿಯಾಗಿ ಬದಕಲು ಅವಕಾಶ ಲಭಿಸಿದ್ದು ಇದರಿಂದ ಇಂದಿನ ಕಾರ್ಯಕ್ರಮದಲ್ಲಿ ಮಾತನಾಡುವ ಹಾಗೂ ಅನುಭವ ಹಂಚಿಕೊಳ್ಳುವ ಅವಕಾಶ ಲಭಿಸಿದೆ ಇದರ ಜೊತೆಯಲ್ಲಿ ಹಲವಾರು ವರ್ಷಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕಾಣಬೇಕೆಂಬ ಹಂಬಲ ಕೂಡ ಇತ್ತು ಅದೂ ಕೂಡ ಜನಮನ ಕಾರ್ಯಕ್ರಮದಿಂದಾಗಿ ಈಡೇರಿದೆ ಎಂದು ಸಂಭ್ರಮಿಸಿದರು.
ಬಳಿಕ ಸಚಿವರ ಬಳಿ ಬಂದು ಹಸ್ತಲಾಘವ ಮಾಡಿ ಮರಳುವ ವೇಳೆ ಸಚಿವರೊಂದಿಗೆ ಸೆಲ್ಫೀ ತೆಗೆಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ ವೇದಾವತಿಯವರ ಮನವಿಯನ್ನು ಒಪ್ಪಿದ ಸಚಿವ ಪ್ರಮೋದ್ ಮಧ್ವರಾಜ್ ವೇದಾವತಿಯವರೊಂದಿಗೆ ನಿಂತು ಸೆಲ್ಫಿಗೆ ಪೋಸ್ ನೀಡಿದರು.
ಬಳಿಕ ಮಾತನಾಡಿದ ಅವರು ನನಗೂ ಕೂಡ ಇಷ್ಟು ದೊಡ್ಡ ಅಭಿಮಾನಿಗಳಿದ್ದಾರೆ ಎನ್ನುವುದು ಇವತ್ತೇ ಗೊತ್ತಾಗಿದ್ದು ಎಂದು ಹಾಸ್ಯಚಟಾಕಿ ಬೀಸಿದರು.