ಸರಕಾರಿ ಬಸ್ ಗಳು ನಿಯಮ ಪಾಲಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಸರಕಾರಿ ಬಸ್ ಗಳು ನಿಯಮ ಪಾಲಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಜಿಲ್ಲೆಯಲ್ಲಿ ಹೊಸದಾಗಿ ಪರ್ಮಿಟ್ ಪಡೆದು ವಿವಿಧ ಭಾಗದಲ್ಲಿ ಸಂಚರಿಸುತ್ತಿರುವ ಸರಕಾರಿ ಬಸ್‍ಗಳು ತಮಗೆ ನೀಡಿರುವ ಸಮಯದ ಪ್ರಕಾರವೇ ಬಸ್‍ಗಳನ್ನು ಸಂಚಾರ ಮಾಡುವಂತೆ ಸರಕಾರಿ ಬಸ್‍ನ ಉಡುಪಿ ಘಟಕದ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಅವರು ಬುಧವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಆರ್.ಟಿ.ಎ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸದಾಗಿ ಪರ್ಮಿಟ್ ಪಡೆದಿರುವ ಸರಕಾರಿ ಬಸ್‍ಗಳು ನಿಗದಿತ ಅವಧಿಯಲ್ಲಿ ಹಾಗೂ ಮಾರ್ಗದಲ್ಲಿ ಸಂಚರಿಸದ ಕುರಿತು, ಟ್ರಿಪ್ ಕಡಿತ ಮಾಡುವ ಕುರಿತು, ಸರ್ಕಾರಿ ಬಸ್ ನಿಲ್ದಾಣಗಳಿಗೆ ಸರಕಾರಿ ಬಸ್‍ಗಳು ತೆರಳದೆ ಇರುವ ಬಗ್ಗೆ, ನಿಗದಿತ ನಿಲ್ದಾಣದಲ್ಲಿ ನಿಲ್ಲದ ಬಗ್ಗೆ ಖಾಸಗಿ ಬಸ್‍ಗಳ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್, ಬಸ್ ಮಾಲಕರಾದ ರಾಧಾ ದಾಸ್, ವಾಸುದೇವ, ಸುಧಾಕರ ಶೆಟ್ಟಿ ಮತ್ತಿತರರು ಸಲ್ಲಿಸಿದ ದೂರಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಪರ್ಮಿಟ್ ನೀಡಿದ ಬಳಿಕ ಸರಕಾರಿ ಬಸ್‍ಗಳಿಗೆ ವಿಶೇಷ ರಿಯಾಯಿತಿ ಏನೂ ಇಲ್ಲ, ನಿಗದಿತ ಅವಧಿಯಲ್ಲಿ, ಮಾರ್ಗದಲ್ಲಿ ಸರಕಾರಿ ಬಸ್‍ಗಳು ಸಹ ಸಂಚರಿಸಬೇಕು, ನಿಯಮಗಳ ಉಲ್ಲಂಘನೆ ಸಲ್ಲದು, ಈ ಕುರಿತು ಸರಕಾರಿ ಬಸ್‍ಗಳ ಚಾಲಕ ನಿರ್ವಾಹಕರಿಗೆ ಸೂಚನೆ ನೀಡುವಂತೆ ಉಡುಪಿ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಜೈ ಶಂಕರ್ ಮಾತನಾಡಿ, ಸರಕಾರಿ ಬಸ್‍ಗಳು ಸಮಯ ಪಾಲನೆ ಮತ್ತು ನಿಗದಿತ ಮಾರ್ಗದಲ್ಲಿ ಸಂಚರಿಸಿದ ಕುರಿತು ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ, ನಿಯಮಗಳನ್ನು ಪಾಲನೆ ಮಾಡುವಂತೆ ಘಟಕದ ಎಲ್ಲಾ ಚಾಲಕ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ, ಜಿಲ್ಲೆಯಲ್ಲಿ ಹೊಸದಾಗಿ ಸರಕಾರಿ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಾರಂಭದಲ್ಲಿ ಕೆಲವು ಕಡೆ ಗೊಂದಲವಾಗಿದೆ, ಒಂದು ವಾರದಲ್ಲಿ ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಆಗುಂಬೆ ಘಾಟ್ ನಲ್ಲಿ ಸರಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು ಪೈಪೋಟಿ ಯಿಂದ ಚಲಿಸುವುದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಪೈಪೋಟಿಯನ್ನು ತಡೆಯುವಂತೆ ಶೃಂಗೇರಿಯ ಲಕ್ಷ್ಮಿ ನಾರಾಯಣ ಭಟ್ ಮನವಿ ಮಾಡಿದರು.

ರಾತ್ರಿ ವೇಳೆಯಲ್ಲಿ ಖಾಸಗಿ ಬಸ್‍ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸದಂತೆ ಆರ್.ಟಿ.ಓ ಗುರುಮೂರ್ತಿ ಕುಲಕರ್ಣಿ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಉಪಸ್ಥಿತರಿದ್ದರು.


Spread the love