ಸರಕಾರ ಹಿಂದೂ ನಾಯಕರ ಹತ್ಯೆ ಸಂಚನ್ನು ಗಂಭೀರವಾಗಿ ಪರಿಗಣಿಸಲಿ ; ಸಂಸದ ನಳಿನ್
ಮಂಗಳೂರು: ಕರಾವಳಿಯ ಹಿಂದೂ ನಾಯಕರ ಹತ್ಯೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು. ಹಿಂದೂ ನಾಯಕರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಹಿಂದೂ ಸಮಾಜಕ್ಕೆ ಮಾರ್ಗದರ್ಶಕರಾಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ, ವಿಶ್ವ ಹಿಂದೂ ಪರಿಷತ್ ನ ಮುಖಂಡರಾದ ಜಗದೀಶ ಶೇಣವ ಮತ್ತು ಶರಣ್ ಪಂಪ್ ವೆಲ್ ಅವರ ಹತ್ಯೆಗೆ ರಾಷ್ಟ್ರಘಾತಕ ಶಕ್ತಿಗಳು ಸಂಚಿ ನಡೆಸಿದ್ದಾರೆ ಎನ್ನುವ ಮಾಹಿತಿಯಿಂದ ಕರಾವಳಿಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಕರಾವಳಿಯಲ್ಲಿ ಅಮಾಯಕ ಹಿಂದೂ ಯುವಕರ ಹತ್ಯೆ ನಡೆದಿತ್ತು. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಮತೀಯವಾದಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಸದರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.