ಸರ್ಕಾರದ ಜನಪರ ಯೋಜನೆಗಳು ಅರ್ಧಕ್ಕೆ ನಿಲ್ಲಬಾರದು : ಕೆ.ಗೋಪಾಲ ಪೂಜಾರಿ
ಗುಡೆ ದೇವಸ್ಥಾನದ ಏತ ನೀರಾವರಿ ಯೋಜನಾ ಪ್ರದೇಶಕ್ಕೆ ಮಾಜಿ ಶಾಸಕರ ಭೇಟಿ
ಕುಂದಾಪುರ : ಜನಪರ ಉದ್ದೇಶಗಳನ್ನು ಇರಿಸಿಕೊಂಡು ಅನುಷ್ಠಾನವಾಗುವ ಸರ್ಕಾರಿ ಯೋಜನೆಗಳು ಯಾವುದೇ ಕಾರಣದಿಂದಲೂ ಅರ್ಧಕ್ಕೆ ನಿಲ್ಲಬಾರದು. ಯೋಜನೆಯ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಏನಾದರೂ ಗೊಂದಲಗಳಿದ್ದಲ್ಲಿ ಅದನ್ನು ಪರಿಹರಿಸುವ ಹಾಗೂ ಮನವರಿಕೆ ಮಾಡುವ ಕೆಲಸಗಳು ಇಲಾಖೆಯ ಅಧಿಕಾರಿಗಳಿಂದ ಆಗಬೇಕು. ಉದ್ದೇಶಿತ ಅಣೆಕಟ್ಟಿನಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುವ ನೀರನ್ನು ಮಾತ್ರ ಹೊರಕ್ಕೆ ಹಾಯಿಸುವ ಕೆಲಸವಾಗಬೇಕು ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಇಲ್ಲಿಗೆ ಸಮೀಪದ ಗುಡೆ ದೇವಸ್ಥಾನದ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ, ಯೋಜನಾ ಪ್ರದೇಶವನ್ನು ವೀಕ್ಷಣೆ ಮಾಡಿ, ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹಿಂದೆ ಬಿ.ಎಂ.ಸುಕುಮಾರ ಶೆಟ್ಟಿಯವರು ಶಾಸಕರಾಗಿದ್ದಾಗ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ದೊರಕಿತ್ತು. ವರಾಹಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಿಗೆ ನೀರು ಒದಗಿಸುವ ಯೋಜನೆಗಳು ಯಶಸ್ವಿಯಾಗಿದೆ. ದೊಡ್ಡ ಮೊತ್ತದ ನೀರಾವರಿ ಯೋಜನೆಗಳಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಬೇಕು. ಯಾರಿಗೂ ನೋವಾಗದಂತೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಯೋಜನೆ ಪೂರ್ತಿಯಾಗಿ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಳಕೆದಾರರ ಸಂಘವನ್ನು ಮಾಡಬೇಕು. ಬಳಕೆದಾರರ ಸಂಘದ ಬೈಲಾದಂತೆ, ಅಧ್ಯಕ್ಷರು, ಪದಾಧಿಕಾರಿ ಹಾಗೂ ಸದಸ್ಯರನ್ನು ಒಳಗೊಂಡ ಬಳಕೆದಾರರ ಸಂಘವನ್ನು ರಚನೆ ಮಾಡುವ ಕೆಲಸ ಇಲಾಖೆಯ ಮುತುವರ್ಜಿಯಿಂದ ಆಗಬೇಕು. ಆಗಮಾತ್ರ ಇಲ್ಲಿನ ಭಿನ್ನಾಭಿಪ್ರಾಯ ಶಾಶ್ವತವಾಗಿ ಪರಿಹಾರವಾಗುತ್ತದೆ. ಸ್ಥಳೀಯರ ಸಮಸ್ಯೆಗಳು ಏನು ಎನ್ನುವುದನ್ನು ಅರ್ಥೈಯಿಸಿಕೊಂಡು, ಪರಿಹಾರ ನೀಡುವ ಕೆಲಸವಾಗಬೇಕು. ನೀರಿನ ಸಂಗ್ರಹ ಹಾಗೂ 1.8 ಮೀಟರ್ ಎತ್ತರದ ಮಟ್ಟವನ್ನು ನಿರ್ದಿಷ್ಟ ಮಾನದಂಡದಲ್ಲಿ ಗುರುತಿಸುವ ಕೆಲಸವಾಗಬೇಕು. ಯೋಜನೆಯ ಉದ್ದೇಶವನ್ನು ಭವಿಷ್ಯದಲ್ಲಿ ಕಾರ್ಯನಿರ್ವಹಿಸುವ ಕೆಲಸವೂ ಬಳಕೆದಾರರ ಸಂಘದಿಂದಲೇ ಆಗಬೇಕು. ಸ್ಥಳೀಯರಿಗೆ ನೀರು ಕಡಿಮೆಯಾಗದಂತೆ ನೋಡಿಕೊಳ್ಳುವ ಹೊಣೆಯೂ ಇದೇ ಸಂಘದ್ದಾಗಿರಬೇಕು ಎಂದರು.
ಯೋಜನೆಯ ಕುರಿತಂತೆ ಪ್ರಕಾಶ್ಚಂದ್ರ ಶೆಟ್ಟಿ ಅವರೊಂದಿಗೂ ಮಾತನಾಡಿದ್ದೇನೆ, ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಹಕ್ಕು ಇದೆ. ಸಮಾಲೋಚನೆ, ವಿಸ್ತ್ರತ ಚರ್ಚೆ ಹಾಗೂ ಪರಿಹಾರದ ತಿಳುವಳಿಕೆಗಳು ಸಮಂಜಸವಾಗಿ ಮನದಟ್ಟಾದಾಗ ಸಮಸ್ಯೆಗಳಿಗೆ ಖಂಡಿತ ಪರಿಹಾರ ದೊರಕುತ್ತದೆ. ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಶಾಸಕರಾಗಲಿ, ನಾನಾಗಲಿ ಪ್ರತಿ ದಿನ ಬಂದು ಪರಿಹಾರ ಕಾರ್ಯಕ್ಕೆ ಕುಳಿತುಕೊಳ್ಳಲು ಆಗೋದಿಲ್ಲ. ಸ್ಥಳೀಯರ ಬೇಡಿಕೆಯ ಬಗ್ಗೆ ವಿಚಾರ ವಿಮರ್ಶೆ ಮಾಡಿ, ಸಣ್ಣ ಪುಟ್ಟ ಬದಲಾವಣೆ ಇದ್ದಲ್ಲಿ ಅದಕ್ಕೆ ಸ್ಪಂದಿಸಬೇಕು. ಇದಕ್ಕೆ ಹೆಚ್ಚುವರಿ ಅನುದಾನದ ಅವಶ್ಯಕತೆ ಇದ್ದಲ್ಲಿ, ಸರ್ಕಾರದಿಂದ ಕೊಡಿಸುವ ಬಗ್ಗೆಯೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೊಲ್ಲೂರು ಸೌಪರ್ಣಿಕ ನದಿಯಿಂದ 10 ರಿಂದ 15 ಟಿಎಂಸಿ ನೀರು, ಬಳಕೆಯಾಗದೆ ಸಮುದ್ರ ಸೇರುತ್ತಿದೆ. ಅರೆಹೊಳೆ ಅಸು-ಪಾಸಿನಲ್ಲಿ ಅಣೆಕಟ್ಟು ನಿರ್ಮಿಸಿ, ಪಂಪ್ ಮೂಲಕ ಮೇಲಕ್ಕೆ ಎತ್ತಿ, ಹೇರೂರು ಭಾಗದ ಕೆರೆಗಳಿಗೆ ಹಾಯಿಸಿದರೆ, ಇಲ್ಲಿಂದ ಹೆಚ್ಚುವರಿ ನೀರು ಎಡಮಾವಿನ ಹೊಳೆಗೆ ಬರುವುದರಿಂದ, ಅಣೆಕಟ್ಟಿನಲ್ಲಿ ನೀರಿನ ಹರಿವು ಹೆಚ್ಚಾಗಿ, ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ ಎಂದು ಸ್ಥಳೀಯ ಪ್ರಮುಖರು ಹೇಳಿದ ಸಲಹೆಗೆ ಸ್ಪಂದಿಸಿದ ಮಾಜಿ ಶಾಸಕರು, ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಸಾಧಕ-ಬಾಧಕಗಳ ಅಭಿಪ್ರಾಯ ಪಡೆದುಕೊಂಡು, ಸಚಿವರೊಂದಿಗೆ ಮಾತನಾಡುವುದಾಗಿ ನೀಡಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್ ಭಂಡಾರಿ, ಡ್ಯಾಂನಲ್ಲಿ ಮೂರು ಮೀಟರ್ ನೀರಿನ ಸಂಗ್ರಹದ ಧಾರಣ ಸಾಮರ್ಥ್ಯ ಅಂದಾಜಿಸಲಾಗಿದ್ದು, ಇದರಲ್ಲಿ 1.8 ಮೀಟರ್ ನೀರು ಶಾಶ್ವತ ಸಂಗ್ರಹವಾಗಿ ಅಣೆಕಟ್ಟಿನಲ್ಲಿಯೇ ಇರುತ್ತದೆ. 1.8 ಮೀಟರ್‌ಗಿಂತ್ ಜಾಸ್ತಿ ಸಂಗ್ರಹವಾದ ನೀರನ್ನು ಮಾತ್ರ ಪಂಪ್ ಮೂಲಕ ಎತ್ತಿ, ಇತರ ಉದ್ದೇಶಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ. 1.8 ಮೀಟರ್‌ಗಿಂತ ಕಡಿಮೆ ಸಂಗ್ರಹವಾದಲ್ಲಿ ಪಂಪ್ ಕಾರ್ಯವೇ ಮಾಡೋದಿಲ್ಲ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸುಕೇಶ್ ಶೆಟ್ಟಿ, ಗಣೇಶ್ ಆಚಾರ್, ಸತೀಶ್ ಶೆಟ್ಟಿ ಉಪ್ರಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ್‌ಕುಮಾರ ಶೆಟ್ಟಿ ಕಾಲ್ತೋಡು, ರಮೇಶ್ ಗಾಣಿಗ ಹೇರಂಜಾಲು, ಸುಭಾಶ್ ಶೆಟ್ಟಿ ಹಳಗೇರಿ, ಮಾಲಿಂಗ ಪೂಜಾರಿ ಹೇರಂಜಾಲು, ನರಸಿಂಹ ಹಳಗೇರಿ, ಮಾಚ ಪೂಜಾರಿ, ರಮೇಶ್ ದೇವಾಡಿಗ ಹಳಗೇರಿ ಇದ್ದರು