ಸರ್ಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಿ: ಪ್ರಮೋದ್ ಮಧ್ವರಾಜ್

Spread the love

ಉಡುಪಿ: ಜನರಿಗೋಸ್ಕರ ಸರ್ಕಾರಗಳಿದ್ದು, ಜನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮೀನುಗಾರಿಕೆ ಇಲಾಖೆಯ ಸವಲತ್ತು ವಿತರಿಸಿ ಉಡುಪಿ ಶಾಸಕರು ಹಾಗೂ ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿಗಳಾಗಿರುವ ಪ್ರಮೋದ್ ಮಧ್ವರಾಜ್ ಹೇಳಿದರು.

fisheries-mla-malpe

ಅವರಿಂದು ಮೀನುಗಾರಿಕಾ ಇಲಾಖೆಯ ಆವರಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನುಗಾರರಿಗೆ ಸವಲತ್ತು ವಿತರಿಸಿ ಮಾತನಾಡುತ್ತಿದ್ದರು. ಮೀನುಗಾರಿಕಾ ವೃತ್ತಿಯು ಸವಾಲಿನ ಕೆಲಸವಾಗಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವವರು ಪ್ರತಿಯೊಬ್ಬರು ವಿಮೆಯ ಜೊತೆ ಕೇಂದ್ರ ಸರ್ಕಾರದ ಸೂಚನೆಯಂತೆ ಸೊಸೈಟಿ ಸದಸ್ಯರಾಗಿರಬೇಕು. ಇದರಿಂದ ಸಂಕಷ್ಟ ಪರಿಹಾರ ಯೋಜನೆಯಡಿ ಗಮನೀಯ ಪರಿಹಾರ ಸಿಗಲು ಸಾಧ್ಯ ಎಂದರು.

ಸರ್ಕಾರ ಸಂಕಷ್ಟ ಪರಿಹಾರವನ್ನು ಒಂದು ಲಕ್ಷ ರೂ.ಗಳಿಂದ ಎರಡು ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು ಇನ್ನೂ ಹೆಚ್ಚಿನ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಇದರ ಜೊತೆಗೆ ಮೀನುಗಾರಿಕೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಇಲಾಖೆಯಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಿ; ಬಯೋಮೆಟ್ರಿಕ್ ಕಾರ್ಡ್‍ಗಳನ್ನು ಮಾಡಿಸಿಕೊಳ್ಳಿ ಎಂದ ಶಾಸಕರು, ಔಟ್‍ಬೋರ್ಡ್ ಇಂಜಿನ್ ಸಬ್ಸಿಡಿಯನ್ನು ಹೆಚ್ಚಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಡಿ ಇಬ್ಬರು ಫಲಾನುಭವಿಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು.

ನಾಡದೋಣಿ ಯಾಂತ್ರೀಕರಣಕ್ಕೆ ಸಹಾಯಧನ ಯೋಜನೆಯಡಿ 25 ಫಲಾನುಭವಿಗಳಿಗೆ 7.50 ಲಕ್ಷ ರೂ.ಗಳ ಸಹಾಯಧನ ವಿತರಿಸಲಾಯಿತು. ಬಲೆ ಕಿಟ್ ಯೋಜನೆಯಡಿ 13 ಫಲಾನುಭವಿಗಳಿಗೆ 1.30 ಲಕ್ಷ ರೂ. ಗಳ ಸಲಕರಣೆಗಳನ್ನು ವಿತರಿಸಲಾಯಿತು.

ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್, ಅಂಜನಾದೇವಿ, ಚಂದನ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love