Home Mangalorean News Kannada News ಸಾಂಸ್ಕೃತಿಕ ಹಬ್ಬ ಮೈಸೂರು ದಸರೆಗೆ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಚಾಲನೆ

ಸಾಂಸ್ಕೃತಿಕ ಹಬ್ಬ ಮೈಸೂರು ದಸರೆಗೆ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಚಾಲನೆ

Spread the love

ಸಾಂಸ್ಕೃತಿಕ ಹಬ್ಬ ಮೈಸೂರು ದಸರೆಗೆ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಚಾಲನೆ

ಮೈಸೂರು: ಸಂಸ್ಕೃತಿ ಬೆಸೆಯುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಗುರುವಾರ ಇಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಚಾಮುಂಡಿಬೆಟ್ಟದಲ್ಲಿ ಬೆಳಿಗ್ಗೆ 8.45ಕ್ಕೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ದೇಗುಲದ ಆವರಣದ ವೇದಿಕೆಯಲ್ಲಿ ಬೆಳ್ಳಿ ಮಂಟಪದಲ್ಲಿದ್ದ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹಾಗೂ ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಮಹಿಷಾಸುರ ಪ್ರತಿಮೆ ಬಳಿಯಿಂದ ಚಾಮುಂಡೇಶ್ವರಿ ದೇಗುಲದವರೆಗೆ ನಿಸಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಪಂಚ ಕಳಸದ ನಂದಿಧ್ವಜ ಕುಣಿತ, ನಗಾರಿ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎಂ.ಎಸ್‌.ತೇಜ್‌ಕುಮಾರ್‌ ಅವರು ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು. ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಇದ್ದರು.
ಸೆ. 30ರವರೆಗೆ ನಿತ್ಯ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳಲಿದೆ. ಅರಮನೆಗಳ ನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕಲೆ, ನಾಟಕ, ನೃತ್ಯ, ಸಂಗೀತ, ಸಿನಿಮಾದ ಆಸ್ವಾಧವನ್ನು ಸವಿಯುವ ಅಪೂರ್ವ ಅವಕಾಶ ಪ್ರವಾಸಿಗರಿಗೆ ಲಭಿಸಿದೆ.


Spread the love

Exit mobile version