‘ಸಾಕ್ಷಿ ಬಹಿರಂಗಪಡಿಸಿ, ಇಲ್ಲದಿದ್ದರೆ ಆಣೆ-ಪ್ರಮಾಣಕ್ಕೆ ಸಿದ್ದರಾಗಿ’ ನಳಿನ್ ಆರೋಪಗಳಿಗೆ ಸವಾಲು ಹಾಕಿದ ಜೆ ಆರ್ ಲೋಬೊ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೊ ಅವರ ಸ್ವಸಮುದಾಯದ ಮೇಲಿನ ಪ್ರೀತಿಯೇ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಸೂಕ್ತ ದಾಖಲೆ ನೀಡಬೇಕು ಅಲ್ಲದೆ ಅವರು ಹೇಳಿದ ಹೇಳಿಕೆ ನಿಜವಾದಲ್ಲಿ ಅವರು ನಂಬುವ ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಅದರಂಥೆ ನಾನು ಕೂಡ ನಾನು ನಂಬುವ ದೇವರ ಮುಂದೆ ಪ್ರಮಾಣ ಮಾಡಲು ಸಿದ್ದವಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಅವರು ಮಂಗಳವಾರ ದಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಜೆ ಆರ್ ಲೋಬೊ ತಾನು ಶಾಸಕನಾಗಿದ್ದ ವೇಳೆ ನಂತೂರು ಅಥವಾ ಪಂಪ್ ವೆಲ್ ಸೇತುವೆಗಳ ಕಾಮಗಾರಿಗಳ ಕುರಿತು ಸಂಸದ ನಳಿನ್ ಕುಮಾರ್ ಎಷ್ಟು ಸಭೆಗಳನ್ನು ನಡೆಸಿದ್ದಾರೆ ಮತ್ತು ಎಷ್ಟು ಸಭೆಗಳಿಗೆ ನನ್ನನ್ನು ಕರೆದಿದ್ದಾರೆ ಎಂಬ ಕುರಿತು ದಾಖಲೆ ನೀಡಬೇಕು. ಹತ್ತು ವರ್ಷಗಳಿಂದ ಸೇತುವೆಗಳ ವಿನ್ಯಾಸ ಬದಲಾಗಿದ್ದು ಇವರಿಗೆ ತಿಳಿದಿರಲಿಲ್ಲವಾ? ನಾನು ಎರಡು ಸೇತುವೆಯ ಭೂಸ್ವಾಧೀನ ಅಥವಾ ಯಾವುದೇ ವಿನ್ಯಾಸ ಬದಲಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದೇ ಸತ್ಯವಾದರೆ ನೇರವಾಗಿ ಪ್ರಮಾಣ ಮಾಡಲಿ ಎಂದು ಅವರು ಹೇಳಿದರು. ಸಂಸದ ನಳಿನ್ ಅವರೇ ನಿಮ್ಮ ವೈಫಲ್ಯಕ್ಕೆ ನಮ್ಮ ಕಾಲೆಳೆಯಲು ಬರಬೇಡಿ.
ಕಳೆದ 10 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೇನು ಕೊಡುಗೆ ನೀಡಿಲ್ಲ ಹೊಸ ಯೋಜನೆ ಬಿಡಿ ಹಳೆಯ ಯೋಜನೆಗಳಿಗೆ ಪುನರುಜ್ಜೀವನ ನೀಡಲೂ ವಿಫಲರಾಗಿದ್ದಾರೆ. ತನ್ನ ಈ ವೈಫಲ್ಯವನ್ನು ಮರೆಮಾಚಲು ಮತ್ತು ಮುಂದಿನ ಚುನವಾಣೆಯ ದೃಷ್ಟಿಕೋನದಿಂದ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತಲು ನೋಡುತ್ತಿದ್ದಾರೆ ಎಂದು ಹೇಳಿದರು.