ಸಾಗರದಾಳದಲ್ಲಿ ಸುವರ್ಣ ತ್ರಿಭುಜ ಬೋಟಿನ ಅವಶೇಷ ಪತ್ತೆ?
ಉಡುಪಿ: ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಮುಳುಗಿರಬಹುದು ಎಂದು ಅಂದಾಜಿಸಲಾದ ಮಲ್ಎ ಬಂದರಿನ ಮೀನುಗಾರಿಕಾ ಬೋಟು ಸುವರ್ಣ ತ್ರಿಭುಜವನ್ನು ಸೋನಾರ್ ತಂತ್ರಜ್ಞಾನದ ಮೂಲಕ ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಬೋಟು ಮಹತ್ವದ ವಿಚಾರವನ್ನು ಪತ್ತೆ ಮಾಡಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಯುದ್ದನೌಕೆಯ ಸೋನಾರ್ ತಂತ್ರಜ್ಞಾನಕ್ಕೆ ಸಮುದ್ರದ ಆಳದಲ್ಲಿ ಬೋಟಿನಂತಹ ಕೆಲವು ಭಗ್ನಾವಶೇಷಗಳು ಪತ್ತೆಯಾಗಿದ್ದು ಆದರೆ ಅವುಗಳು ಸುವರ್ಣ ತ್ರಿಭುಜದ ಅವಶೇಷಗಳು ಎಂಬುದು ಇನ್ನಷ್ಠೆ ಖಚಿತವಾಗಬೇಕಾಗಿದೆ.
ಭಾರತೀಯ ನೌಕಾಪಡೆ, ಕೋಸ್ಟ್ಗಾರ್ಡ್ ಮತ್ತು ಕೋಸ್ಟಲ್ ಪೊಲೀಸರು ‘ಸುವರ್ಣ ತ್ರಿಭುಜ’ ಬೋಟ್ಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಸಂದರ್ಭ ಸುಮಾರು 23 ಮೀಟರ್ ಉದ್ದದ ಬೋಟ್ನ ತುಂಡೊಂದು ಅರಬ್ಬಿ ಸಮುದ್ರದ ಗೋವಾ-ಮಹಾರಾಷ್ಟ್ರ ಮಾಲ್ವಾನ್ ಜಿಲ್ಲೆಯ ವ್ಯಾಪ್ತಿಯ ಸಮುದ್ರದಲ್ಲಿ ಪತ್ತೆಯಾಗಿದೆ. ಸೋನಾರ್ ತಂತ್ರಜ್ಞಾನ ಬಳಸಿ ನೌಕಾಪಡೆ ಯುದ್ಧ ಹಡಗಿನ ಮೂಲಕ ಶೋಧಿಸುತ್ತಿದ್ದಾಗ ಸಾಗರದಾಳದಲ್ಲಿ ಈ ವಸ್ತು ಸಿಕ್ಕಿದೆ.
ಈ ತಂತ್ರಜ್ಞಾನದ ಸೌಂಡ್ ನೇವಿಗೇಶನ್ ವ್ಯವಸ್ಥೆಯಿಂದ ಮುಳುಗಿದ ವಸ್ತುಗಳನ್ನು ಪತ್ತೆ ಹಚ್ಚಲಾಗುತ್ತದೆ. ಅವಶೇಷ 23 ಮೀಟರ್ ಉದ್ದವಿರುವುದು ಸೋನಾರ್ ತಂತ್ರಜ್ಞಾನದ ಮೂಲಕ ತಿಳಿದುಬಂದಿದೆ. ಸಮುದ್ರದ ಭಾರಿ ಆಳದಲ್ಲಿ ಅವಶೇಷ ಇರುವ ಲೆಕ್ಕಾಚಾರವನ್ನು ಅದು ತೋರಿಸಿದ್ದು, ಅದನ್ನು ಮೇಲಕ್ಕೆತ್ತುವುದು ತಕ್ಷಣಕ್ಕೆ ಕಷ್ಟದ ಕೆಲಸ. ಕೆಲವು ದಿನ ಬೇಕಾಗಬಹುದು.
ಪತ್ತೆಯಾಗಿರುವ ಬೋಟ್ನ ತುಂಡು 23 ಮೀಟರ್ ಉದ್ದವಿದೆ, ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಕೂಡ ಹೆಚ್ಚುಕಡಿಮೆ ಇಷ್ಟೇ ಉದ್ದ ಇರುವುದರಿಂದ ಅದೇ ಬೋಟ್ನದ್ದಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಇದು ಖಚಿತವಾಗಿಲ್ಲ. ಈಗ ಸೋನಾರ್ ತಂತ್ರಜ್ಞಾನ ನೀಡಿದ ಸುಳಿವು ಆಧರಿಸಿ ಬೋಟ್ ತುಂಡಿನ 3ಡಿ ಮ್ಯಾಪಿಂಗ್ ಮಾಡಲಾಗುತ್ತಿದ್ದು, ವಾರದೊಳಗೆ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂದು ನೌಕಾಪಡೆ ಮೂಲಗಳು ಹೇಳಿವೆ.
ಮಹಾರಾಷ್ಟ್ರ ಸಮುದ್ರ ತೀರದಲ್ಲಿ ಎರಡು ಪ್ಲಾಸ್ಟಿಕ್ ಕ್ರೇಟ್ಗಳು ದೊರೆತಿದ್ದು, ಇದು ಸುವರ್ಣ ತ್ರಿಭುಜ ಬೋಟ್ನದ್ದೇ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆಲದಿನಗಳ ಹಿಂದಷ್ಟೇ ಖಚಿತಪಡಿಸಿದ್ದರು.
ಸುವರ್ಣ ತ್ರಿಭುಜ ಬೋಟ್ 5.700 ಮೀಟರ್ ಅಗಲ, 23.600 ಮೀ. ಉದ್ದ, 3.400 ಮೀಟರ್ ಎತ್ತರ ಹೊಂದಿದ್ದು, 2016ರಲ್ಲಿ ನಿರ್ಮಾಣವಾಗಿತ್ತು. ಮಲ್ಪೆ ಬಡಾನಿಡಿಯೂರಿನ ಚಂದ್ರಶೇಖರ ಕೋಟ್ಯಾನ್ ಇದರ ಮಾಲೀಕರು. ಅವರ ಸಹಿತ ದಾಮೋದರ ಬಡಾನಿಡಿಯೂರು, ಲಕ್ಷ್ಮಣ ಕುಮಟಾ, ರವಿ ಮಂಕಿ, ಹರೀಶ್ ಕುಮಟಾ, ಸತೀಶ್ ಕುಮಟಾ, ರಮೇಶ್ ಕುಮಟಾ ಬೋಟ್ನಲ್ಲಿದ್ದು, ನಾಪತ್ತೆಯಾಗಿದ್ದಾರೆ.