Home Mangalorean News Kannada News ಸಾಮಾಜಿಕ ಕಳಕಳಿ ಹೊಂದಿದ ಚಲನಚಿತ್ರಗಳಿಂದ ಉತ್ತಮ ಸಂದೇಶ – ಮೀನಾಕ್ಷಿ ಮಾಧವ

ಸಾಮಾಜಿಕ ಕಳಕಳಿ ಹೊಂದಿದ ಚಲನಚಿತ್ರಗಳಿಂದ ಉತ್ತಮ ಸಂದೇಶ – ಮೀನಾಕ್ಷಿ ಮಾಧವ

Spread the love

ಸಾಮಾಜಿಕ ಕಳಕಳಿ ಹೊಂದಿದ ಚಲನಚಿತ್ರಗಳಿಂದ ಉತ್ತಮ ಸಂದೇಶ – ಮೀನಾಕ್ಷಿ ಮಾಧವ

ಉಡುಪಿ : ಸಾಮಾಜಿಕ ಕಳಕಳಿ ಹೊಂದಿರುವ ಉತ್ತಮ ಚಲನಚಿತ್ರಗಳು ಸಮಾಜಕ್ಕೆ ಸಂದೇಶ ನೀಡುವ ವಿಚಾರಗಳಿಂದ ಕೂಡಿದ್ದು, ಸಾರ್ವಜನಿಕರು ಇಂತಹ ಚಲನಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದ್ದಾರೆ.

ಅವರು ಶುಕ್ರವಾರ, ಉಡುಪಿಯ ಡಯಾನ ಚಿತ್ರಮಂದಿರದಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ವತಿಯಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನಗಳ ಚಲನಚಿತ್ರ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಚಲನಚಿತ್ರಗಳ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಅರಿವು ಮೂಡಿಸಲು ಸಾಧ್ಯವಿದ್ದು, ಸದಭಿರುಚಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗಲಿ ಹಾಗೂ ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿನ ಸಂದೇಶಗಳನ್ನು ಜನರು ಅರಿಯಬೇಕು ಎಂದು ಹೇಳಿದರು.

ಸಾಹಿತಿ ಕಾತ್ಯಾಯನಿ ಕುಂಜಿಬೆಟ್ಟು ಮಾತನಾಡಿ, ಚಲನಚಿತ್ರಗಳು ಭಾಷೆ ಮೀರಿದ ಭಾವಗಳ ಮೂಲಕ ಬದುಕಿಗೆ ಮೌಲ್ಯವನ್ನು ಕಟ್ಟಿಕೊಡುತ್ತವೆ. ಪಥೇರ್ ಪಾಂಚಾಲಿಯಂತಹ ಚಲನಚಿತ್ರಗಳನ್ನು ನೋಡಿ ಬೆಳೆದ ನನಗೆ ಜೀವನದ ಸೌಂದರ್ಯ, ನೋವು, ವಿಚಾರಗಳನ್ನು ಕಲಿಯುವುದಕ್ಕೆ ಚಲನಚಿತ್ರಗಳು ನೆರವಾದವು ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವ ಮಾನವತೆಯಿಂದ ಹಿಡಿದು ಎಲ್ಲ ರೀತಿಯ ಬದುಕುಗಳನ್ನು ಅರಿಯಲು ಚಲನಚಿತ್ರಗಳು ನೆರವಾಗುತ್ತವೆ ಎಂದರು. ಯಾವುದೇ ಭಾಷೆಯ ಚಲನಚಿತ್ರಗಳಾದರೂ ಅಲ್ಲಿನ ಪಾತ್ರಗಳ ಭಾವನೆಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲು ಸಾಧ್ಯವಿದ್ದು, ಆ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ, ಸದಭಿರುಚಿಯ ಚಿತ್ರಗಳನ್ನು ವೀಕ್ಷಿಸಿ ಆನಂದಿಸಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತುಳು ಚಿತ್ರ ಕಲಾವಿದ ದಿನೇಶ್ ಅತ್ತಾವರ ಅವರು ಮಾತನಾಡಿ, ಕಲೆಗಳನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕು. ಉತ್ತಮ ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿ ಕುಳಿತು ವೀಕ್ಷಿಸಬೇಕು. ಹಲವು ಕಾರಣಗಳಿಂದ ಜನರು ಥಿಯೇಟರ್‍ಗಳಿಂದ ದೂರ ಇರುವ ಸಂದರ್ಭದಲ್ಲಿ ಇಲಾಖೆ ಆಯೋಜಿಸಿರುವ ಚಲನಚಿತ್ರ ಸಪ್ತಾಹ ಜನರನ್ನು ಚಿತ್ರ ವೀಕ್ಷಣೆಗೆ ಸೆಳೆಯಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಡಯಾನ ಚಿತ್ರ ಮಂದಿರದ ಮಾಲೀಕರಾದ ಸುಲಕ್ಷಣಾ ಪೈ, ಅಲಂಕಾರ್ ಚಿತ್ರಮಂದಿರದ ಜಗದೀಶ್ ಕುಡ್ವ, ಕಲ್ಪನಾ ಚಿತ್ರಮಂದಿರದ ರಾಮಕೃಷ ್ಣಆಳ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಗ್ರೇಸಿ ಗೋನ್ಸಾಲ್ವಿಸ್, ಡಯಾನ ಚಿತ್ರಮಂದಿರದ ವ್ಯವಸ್ಥಾಪಕ ಸುಗಂದರ್ ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ ಸ್ವಾಗತಿಸಿದರು, ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿದರು, ನಾಗರಾಜ್ ನಿರೂಪಿಸಿದರು


Spread the love

Exit mobile version