ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿ ಚರ್ಚೆ ಮಾಡಲು ನಾನು ಸಿದ್ಧ – ಜೆಪಿ ಹೆಗ್ಡೆ

Spread the love

ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿ ಚರ್ಚೆ ಮಾಡಲು ನಾನು ಸಿದ್ಧ – ಜೆಪಿ ಹೆಗ್ಡೆ

ಉಡುಪಿ: ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧ ಇದ್ದೇನೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಸರಕಾರ ಒಪ್ಪದೆ ಈ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ 1300ಕ್ಕಿಂತ ಹೆಚ್ಚು ಜಾತಿಗಳು ಇರುವಾಗ 10 ಜಾತಿಗಳ ಹೆಸರುಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸರಕಾರ ಈ ವರದಿ ಬಗ್ಗೆ ಅಧಿಕೃತವಾಗಿ ತೀರ್ಮಾನ ಮಾಡಿದ ಮೇಲೆ ಈ ವಿಚಾರದಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಸರಕಾರದ ಬಿಡುಗಡೆ ಮಾಡದೆ ಯಾವುದನ್ನು ಅಧಿಕೃತ ದತ್ತಾಂಶ ಎಂದು ಒಪ್ಪಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಿಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ನಾನು ಸದ್ಯಕ್ಕೆ ಯಾವುದೇ ಪಕ್ಷದ ಸದಸ್ಯ ಅಲ್ಲ. ಆಯೋಗದಲ್ಲಿದ್ದಾಗ ನಾನು ಯಾವುದೇ ಪಕ್ಷದ ಸದಸ್ಯನಾಗಿರಲು ಸಾಧ್ಯವಿಲ್ಲ. ಮುಂದಿನ ನಿರ್ಧಾರ ಬಗ್ಗೆ ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡುತ್ತೇನೆ. ಸ್ನೇಹಿತರು ಆಪ್ತರ ಜೊತೆ ಮುಂದಿನ ರಾಜಕೀಯದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿಯಿಂದ ಅಧಿಕೃತವಾಗಿ ಯಾರೂ ಸಂಪರ್ಕ ಮಾಡಿಲ್ಲ. ಬಿಜೆಪಿಯ ಕೆಲ ಸ್ನೇಹಿತರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಬೇಕು ಬೇಡವೋ ಎಂದು ಮೊದಲು ಚರ್ಚೆ ಮಾಡುತ್ತೇನೆ. ಯಾವ ಪಕ್ಷದಿಂದ ಎಂಬುದು ಆಮೇಲೆ ಚರ್ಚೆಗೆ ಬರುತ್ತದೆ. ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂದು ಒಂದು ವಾರದ ಒಳಗೆ ತೀರ್ಮಾನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು. ಪತ್ರಕರ್ತ ಚೇತನ್ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು


Spread the love