Home Mangalorean News Kannada News ಸಾರ್ವಜನಿಕರಿಗೂ ಮೀಡಿಯಾ ಹೆಲ್ತ್ ಕ್ಲಿನಿಕ್ ನಲ್ಲಿ ಉಚಿತ ಅರೋಗ್ಯ ತಪಾಸಣೆ ಉದ್ಘಾಟನೆ

ಸಾರ್ವಜನಿಕರಿಗೂ ಮೀಡಿಯಾ ಹೆಲ್ತ್ ಕ್ಲಿನಿಕ್ ನಲ್ಲಿ ಉಚಿತ ಅರೋಗ್ಯ ತಪಾಸಣೆ ಉದ್ಘಾಟನೆ

Spread the love

ಸಾರ್ವಜನಿಕರಿಗೂ ಮೀಡಿಯಾ ಹೆಲ್ತ್ ಕ್ಲಿನಿಕ್ ನಲ್ಲಿ ಉಚಿತ ಅರೋಗ್ಯ ತಪಾಸಣೆ ಉದ್ಘಾಟನೆ

‘ ಆರೋಗ್ಯವೇ ಭಾಗ್ಯ’ ನಾಣ್ನುಡಿಯಂತೆ ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಆರೋಗ್ಯ ಸುದೃಢವಾಗಿದ್ದಾಗ ಸುಸ್ಥಿರ ಕುಟುಂಬ, ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎ.ಜೆ. ಆಸ್ಪತ್ರೆ ಸಾಮಾಜಿಕ ಕಳಕಳಿಯೊಂದಿಗೆ ವಿಶೇಷ ಸೇವೆ ನೀಡುತ್ತಾ ಬರುತ್ತಿದೆ ಎಂದು ಲಕ್ಷ್ಮೀ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಾರ್ವಜನಿಕರಿಗೂ ಮೀಡಿಯಾ ಹೆಲ್ತ್ ಕ್ಲಿನಿಕ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಸೇರಿದಂತೆ ಎಲ್ಲರೂ ತಮ್ಮ ಒತ್ತಡ ಕೆಲಸದಿಂದ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಮನೆಯಲ್ಲಿ ಯಾವುದೇ ವ್ಯಕ್ತಿಯ ಆರೋಗ್ಯ ಕೆಟ್ಟಾಗ ಇಡೀ ಕುಟುಂಬ ನೆಮ್ಮದಿ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕಷ್ಣ ರಾವ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಳಜಿವಹಿಸಿ ಕನಿಷ್ಠ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಬಾಧೆಯನ್ನು ತಡೆಗಟ್ಟಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ಪೂರಕ, ಅಗತ್ಯವೂ ಹೌದು ಎಂದರು.

ಮುಖ್ಯ ಅತಿಥಿಗಳಾಗಿ ಎ.ಜೆ. ವೆದ್ಯಕೀಯ ಮಹಾ ವಿದ್ಯಾಲಯದ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಅಶೋಕ್ ಹೆಗ್ಡೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಕರ್ತ ಹಿಲರಿ ಕ್ರಾಸ್ತ ವಂದಿಸಿದರು. ಜೀತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ನಗರದ ಲೇಹಿಹಿಲ್‌ನಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಮೀಡಿಯಾ ಹೆಲ್ತ್ ಕ್ಲಿನಿಕ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಇದರಲ್ಲಿ ಪತ್ರಕರ್ತರು, ಅವರ ಕುಟುಂಬಿಕರು ಹಾಗೂ ಸಾರ್ವಜನಿಕರು ಸೌಲಭ್ಯ ಪಡೆದುಕೊಳ್ಳಬಹು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹೇಳಿದರು. ಮಂಗಳವಾರ ಮಣ್ಣಗುಡ್ಡ ಗಾಂಧಿನಗರ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಯಿತು.


Spread the love

Exit mobile version