ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ವ್ಯಾಪಕ ಪ್ರಚಾರ ಅಗತ್ಯ – ಜಾವೇದ್ ಅಖ್ತರ್
ಉಡುಪಿ: ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧಿಕಾರಿಗಳಿಗೆ ತಿಳಿಸಿದರು.
ಅರಿವು ಮೂಡಿಸುವ ಕಾರ್ಯಕ್ರಮವು ಸಮಾಜದ ತಳಮಟ್ಟದಲ್ಲಿ ಸಹ ಆಗಬೇಕಿದೆ ಎಂದರು. ಇದಕ್ಕಾಗಿ ಮಾಧ್ಯಮಗಳು ಸೇರಿದಂತೆ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಪ್ರಚಾರಗಳನ್ನು ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ನಡೆಸಬೇಕು ಎಂದರು.
ವಾರ್ತಾ ಇಲಾಖೆಯ ಆಯುಕ್ತರಾದ ಡಾ. ಪಿ. ಹರ್ಷ ಅವರು ಮಾತನಾಡಿ, ಕೋವಿಡ್ ಸೋಂಕು ತಡೆಯಲು ಕೋವಿಡ್ನ ಸರಳ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತಿತರ ಕ್ರಮಗಳ ಬಗ್ಗೆ ಸ್ಥಳೀಯ ಕೇಬಲ್ ನೆಟ್ವರ್ಕ್ನಲ್ಲಿ ಪ್ರಸಾರ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಹಾಗೆ ಪ್ರಚಾರ ಮಾಡಬಹುದಾಗಿದೆ, ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯಮಂತ್ರಿಗಳು ಹಾಗೂ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳು ಕೋವಿಡ್ ನಿಯಂತ್ರಣದ ಬಗ್ಗೆ ವೀಡಿಯೋ ಸಂದೇಶಗಳನ್ನು ಹೆಚ್ಚು ಪ್ರಚಾರ ಮಾಡುವುದರಿಂದ ಹಾಗೂ ಹೆದ್ದಾರಿ ಫಲಕಗಳಲ್ಲಿ ರೋಗದ ನಿಯಂತ್ರಣದ ಬಗ್ಗೆ ಪ್ರಚಾರ ವ್ಯಾಪಕವಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿವೆ, ಅವುಗಳ ಬಗ್ಗೆ ಸ್ಪಷ್ಟೀಕರಣ ನೀಡುವುದರ ಜೊತೆಗೆ, ಕೋವಿಡ್ ಉತ್ತಮ ಮಟ್ಟದ ಚಿಕಿತ್ಸೆ ನೀಡಲು ಅನೇಕ ಅಭಿವೃಧ್ದಿ ಕಾರ್ಯಗಳೂ ಸೇರಿದಂತೆ, ವೈದ್ಯರೊಂದಿಗೆ ಅಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಬೆರಳ ತುದಿಯಲ್ಲಿಯೇ ಮೊಬೈಲ್ ಮೂಲಕ ಉಚಿತ ಆರೋಗ್ಯ ನೆರವು ಪಡೆಯುವುದು ಸೇರಿದಂತೆ, ಕೋವಿಡ್ನಿಂದ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳ ಯಶೋಗಾಥೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದರು.
ವೀಡಿಯೋ ಕಾನ್ಫರೆನ್ಸ್ನಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಅಭಿಯಾನ ನಿರ್ದೇಶಕಿ ಅರುಂಧತಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಡಿಹೆಚ್ಓ ಡಾ. ಸುಧೀÃರ್ ಚಂದ್ರ ಸೂಡಾ, ಕೋವಿಡ್ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಮತ್ತಿತರರು ಉಪಸ್ಥಿತರರಿದ್ದರು.