Home Mangalorean News Kannada News ಸಾಲ ಮನ್ನಾ, ಬೆಂಬಲ ಬೆಲೆಗಾಗಿ ರೈತ ಕಾರ್ಮಿಕರ ಪ್ರತಿಭಟನೆ

ಸಾಲ ಮನ್ನಾ, ಬೆಂಬಲ ಬೆಲೆಗಾಗಿ ರೈತ ಕಾರ್ಮಿಕರ ಪ್ರತಿಭಟನೆ

Spread the love

ಸಾಲ ಮನ್ನಾ, ಬೆಂಬಲ ಬೆಲೆಗಾಗಿ ರೈತ ಕಾರ್ಮಿಕರ ಪ್ರತಿಭಟನೆ

ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ಕೇಂದ್ರದಲ್ಲಿ ಆಡಳಿತಕ್ಕೆ ಬಂದಂದಿನಿಂದ ರೈತರ ಕಾರ್ಮಿಕರ ಪರಿಸ್ಥಿತಿ ಅತ್ಯಂತ ದುಸ್ಥಿತಿಗಿಳಿದಿದ್ದು, ರೈತರು ಸಾಲ ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇರಳ ರಾಜ್ಯ ಸರಕಾರವು ಜಾರಿಗೆ ತಂದಿರುವ ಋಣಮುಕ್ತ ಕಾಯಿದೆ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಆಗ್ರಹಿಸಿದರು.

ರೈತ ಕಾರ್ಮಿಕರು ಅಖಿಲ ಭಾರತ ಕಿಸಾನ್ ಸಭಾ ಹಾಗೂ ಸಿಐಟಿಯುಗಳ ನೇತೃತ್ವದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೋದಿ ಆಡಳಿತ ನೀತಿಗಳನ್ನು ವಿರೋಧಿಸಿ ಆಗಸ್ಟ್ 9 ರಂದು ಹಮ್ಮಿಕೊಂಡಿರುವ ಪ್ರತಿಭಟನಾ ಪ್ರದರ್ಶನದ ಭಾಗವಾಗಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿಂದಿನ ಯುಪಿಎ 2ನೇ ಸರಕಾರವು ರೈತ ಕಾರ್ಮಿಕರ ತೀವ್ರ ವಿರೋಧವನ್ನು ಮನಗಂಡು, 1893ರ ಬ್ರಿಟಿಷರ ಭೂಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡಿ, ದೊಡ್ಡ ಶ್ರೀಮಂತರು ಸಲೀಸಾಗಿ ಭೂಮಿಯನ್ನು ರೈತರಿಂದ ಕೊಳ್ಳಲಾಗದಂತಹ ಕಾನೂನನ್ನು ಅನುಷ್ಟಾನಕ್ಕೆ ತಂದಿದ್ದರು. ಆದರೆ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದ ಹೊಸದರಲ್ಲೇ ಅದನ್ನು ಉದ್ಯಮಪತಿಗಳು ಸುಲಭವಾಗಿ ಖರೀದಿಸಬಹುದಾದ ತಿದ್ದುಪಡಿಗಳನ್ನು ಅದಕ್ಕೆ ತರಲು ಅವರು ಪ್ರಯತ್ನಿಸಿದರು. ಪರಿಣಾಮವಾಗಿ ಕಾರ್ಪರೇಟ್‍ಗಳು ಕೇಂದ್ರ ಸರಕಾರದ ಬೆಂಬಲದೊಂದಿಗೆ ವಿವಿಧ ಯೋಜನೆಯ ಹೆಸರಿನಲ್ಲಿ ರೈತರ ಭೂಮಿಗಳನ್ನು ವಶಪಡಿಸುತ್ತಿದ್ದಾರೆ. ಕೆಲವು ಸಾವಿರ ಕೋಟಿ ರೂಪಾಯಿಗಳಲ್ಲಿ ರೈತರ ಸಾಲ ಮನ್ನಾ ಕೇಂದ್ರ ಸರಕಾರ ಮನ್ನಾ ಮಾಡಬಹುದಾಗಿದ್ದು, ಅದನ್ನು ಮಾಡದೆ 5ಲಕ್ಷ ಕೋಟಿ ರೂಪಾಯಿಗಳ ಔದ್ಯಮಿಕ ಸಾಲಮನ್ನಾ ಬೆರಳೆಣಿಕೆಯ ಶ್ರೀಮಂತ ಉದ್ಯಮಿಗಳಿಗೆ ಮನ್ನಾ ಮಾಡಿದೆ ಎಂಬುದಾಗಿ ಅವರು ಟೀಕಿಸಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ರೈತ ಕಾರ್ಮಿಕರಿಗೆ ಮಾಸಿಕ ಕನಿಷ್ಟ ರೂ.18,000 ವೇತನ ಸಿಗಬೇಕೆಂದು ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಗಳು ಹೋರಾಡುತ್ತಿವೆ. ನೂರು ವರ್ಷಗಳಿಂದ ಕಾರ್ಮಿಕರು ಹೋರಾಟ ಮಾಡಿದ ಪರಿಣಾಮವಾಗಿ ಕಾರ್ಮಿಕರಿಗೆ ಹಲವಾರು ಸವಲತ್ತುಗಳು ದೊರಕಿದ್ದು, ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳನ್ನು ತಿದ್ದುಪಡಿಗಳ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ಕಾರ್ಮಿಕರು ಹೋರಾಟಗಳಿಂದ ಗಳಿಸಿದ ಸವಲತ್ತುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ಎಂ.ಎಸ್.ಸ್ವಾಮಿನಾಥನ್ ಆಯೋಗವು ರೈತರು ಬೆಳೆದ ಫಸಲಿಗೆ ಸಮಗ್ರ ವೆಚ್ಚದ ಅಂದಾಜು ಮಾಡಿ, ಆ ವೆಚ್ಚದ ಒಂದೂವರೆ ಪಟ್ಟು ಬೆಲೆಯನ್ನು ಕನಿಷ್ಟ ಬೆಂಬಲ ಬೆಲೆಯಾಗಿ ನೀಡಬೇಕೆಂದು ರೈತ ಸಂಘಟನೆಗಳು ಒತ್ತಾಯ ಮಾಡುತ್ತಿದ್ದು, ಚುನಾವಣೆಯಲ್ಲಿ ಆ ಬಗ್ಗೆ ಆಶ್ವಾಸನೆ ಕೊಟ್ಟ ಬಿಜೆಪಿ ಸರಕಾರ ಈಗ ಹಿಂದೆ ಸರಿಯುತ್ತಿದೆ ಎಂಬುದಾಗಿ ಅವರು ಖಂಡಿಸಿದರು.

ಪ್ರತಿಭಟನೆಗೂ ಮೊದಲು ಮಂಗಳೂರಿನ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಜಿಲ್ಲಾ ಸಮಿತಿ ಮುಖಂಡರು ಭಾಗವಹಿಸಿದ್ದರು. ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಾಂತ ರೈತ ಸಂಘದ ಕೋಶಾಧಿಕಾರಿ ವಾಸುದೇವ ಉಚ್ಚಿಲ ವಂದಿಸಿದರು.


Spread the love

Exit mobile version