ಸಾವಿನಲ್ಲೂ ಸಾರ್ಥಕತೆ ಮೆರೆದ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್

Spread the love

ಸಾವಿನಲ್ಲೂ ಸಾರ್ಥಕತೆ ಮೆರೆದ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್

ಮಂಗಳೂರು: ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ದಾನಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಬಜ್ಪೆ ಪಡು ಪೆರಾರ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾಗಿರುವ ಗ್ಲೋರಿಯಾ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿ ಕೆಲಸಕ್ಕೆ ಸೇರಿದ್ದರು. ಕೆಲವು ದಿನಗಳ ಹಿಂದೆ ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿತ್ತು. ಬಳಿಕ ಇದು ಉಲ್ಬಣಗೊಂಡ ಪರಿಣಾಮ ಮೆದುಳಿಗೆ ಹಾನಿಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಯುವತಿಯ ರಕ್ಷಣೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಕೂಡ ಫಲಕಾರಿಯಾಗದೇ ಅವರು ಇಂದು ನಿಧನರಾಗಿದ್ದಾರೆ.

ಗ್ಲೋರಿಯಾ ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅವರ ಮನೆಯವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನಲೆ ರೋಡ್ರಿಗಸ್ ಅವರ ಯಕೃತ್ತನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲಕ್ಕೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ವೇಳೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಕೆಯ ಕುಟುಂಬ ಮತ್ತು ಸ್ನೇಹಿತರು ಹಾಜರಿದ್ದರು. ಆಕೆಯ ಅಕಾಲಿಕ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರು ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


Spread the love