ಸಾಸ್ತಾನ ಟೋಲ್ ಕೇಂದ್ರಕ್ಕೆ ಧಿಡೀರ್ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರು
ಉಡುಪಿ: ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡುತ್ತಿರುವ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಮಂಗಳವಾರ ಧಿಡೀರ್ ತೀವ್ರ ಸ್ವರೂಪ ಪಡೆದಿದ್ದು ಸುಮಾರು 500 ಕ್ಕೂ ಅಧಿಕ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾಸ್ತಾನ-ಗುಂಡ್ಮಿಯ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆ ನಡೆಯಿತು.
ಸಾಸ್ತಾನದ ಶಿವಕ್ರಪಾ ಕಲ್ಯಾಣ ಮಂಟಪದಲ್ಲಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಚರ್ಚಿಸಲು ಸುಮಾರು 500 ರಷ್ಟು ನಾಗರಿಕರು ಸೇರಿದ್ದು ಸಭೆಯಲ್ಲಿ ಪೋಲಿಸರು ಸ್ಥಳೀಯ ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನಿನ್ನೆಯ ಧರಣಿಯಲ್ಲಿ ಕೂಡ ಹೋರಾಟಗಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಸಭೆಯ ಬಳಿಕ ಧೀಡಿರ್ ಆಗಿ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಮೆರವಣಿಗೆಯ ಮೂಲಕ ಸಾಗಿ ಟೋಲ್ ಕೇಂದ್ರಕ್ಕೆ ತಲುಪಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಲುಪಿತು. ಟೋಲ್ ಕೇಂದ್ರದ ಬಳಿ ಜಮಾಯಿಸಿದ ಐನೂರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್ ಸಂಗ್ರಹಕಾರರ ವಿರುದ್ಧ ಘೋಷಣೆ ಕೂಗಿದರು.
ಅದಾಗಲೇ ಮಾಹಿತಿ ಪಡೆದ ಪೋಲಿಸ್ ತಂಡ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು ಟೋಲ್ ಕೇಂದ್ರಕ್ಕೆ ತಲುಪುವ ಮೊದಲೇ ತಡೆಯಲು ಪ್ರಯತ್ನಿಸಿದರು. ಈ ವೇಳೆ ಪೋಲಿಸರು ಮತ್ತು ಹೋರಾಟಗಾರರೊಂದಿಗೆ ತಳ್ಳಾಟ ನಡೆಯಿತು. ಬಳಿಕ ಹೋರಾಟಗಾರರು ಮೆರವಣಿಗೆ ನಡೆಸಲು ಪೊಲೀಸರು ಅನುವು ಮಾಡಿಕೊಟ್ಟರು.
ಆಗ ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಜೈಶಂಕರ್ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಪೋಲಿಸರು ಟೋಲ್ ಕೇಂದ್ರದಲ್ಲಿ ಸ್ಥಳೀಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಗ ಡಿವೈಎಸ್ಪಿ ಅವರು ಅಂತಹ ಯಾವುದೇ ದಾಖಲೆಗಳಿದ್ದಲ್ಲಿ ನೀಡಿ ಅಂತಹ ಪೋಲಿಸರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರೂ ಕೇಳದ ಪ್ರತಿಭಟನಾಕಾರರು ಡಿವೈಎಸ್ಪಿಯೊಂದಿಗೆ ವಾಗ್ವಾದಕ್ಕಿಳಿದರು. ಬಳಿಕ ಪ್ರತಿಭಟನಾಕಾರರ ಮನವೊಲಿಸಿ ಸಮಿತಿಯ ಪದಾಧಿಕಾರಿಗಳು ಅಲ್ಲಿಂದ ಕರೆದೊಯ್ದರು.
ಕಳೆದ ಕೆಲವು ದಿನಗಳಿಂದ ಹಲವು ಭಾರಿ ಸಾಸ್ತಾನ ಟೋಲ್ ಬಳಿ ಪ್ರತಿಭಟನೆ ನಡೆದಿದ್ದು ,ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕೆಂಬ ಬೇಡಿಕೆ ಪ್ರತಿಭಟನಾಕಾರರದ್ದಾಗಿದೆ.