ಸಾಹಿತ್ಯದಿಂದ ಜ್ಞಾನದ ವೃದ್ಧಿ ಸಾಧ್ಯ – ವಂ|ಡೆನಿಸ್ ಡೆಸಾ
ಉಡುಪಿ: ಸಾಹಿತ್ಯದಿಂದ ನಮ್ಮಲ್ಲಿನ ಬೌದ್ಧಿಕ ಚಿಂತನಾ ಮಟ್ಟವನ್ನು ಹಾಗೂ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತುದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಯುವಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಅಗತ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.
ಅವರು ಶನಿವಾರ ತೊಟ್ಟಂ ವಿದ್ಯಾದಾಯಿನಿ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಸಾಮಾಜಿಕ ಸಂಪರ್ಕ ಸಾಧನ ಆಯೋಗ ತೊಟ್ಟಂ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮಲೋಕ ಸಾಹಿತ್ಯ ಗೋಷ್ಠೀಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಲೋಕ ಸಾಹಿತ್ಯಗೋಷ್ಠಿಯ ಮೂಲಕ ಗ್ರಾಮ ಮಟ್ಟದಲ್ಲಿರುವ ಸಾಹಿತಿಗಳಿಗೆ, ಅವರುಗಳ ಪ್ರತಿಭೆಯನ್ನು ತೋರಿಸಲು ಅವಕಾಶ ಲಭಿಸಿದಂತಾಗುತ್ತದೆ. ಈ ಮೂಲಕ ಅವರು ತಮ್ಮ ಜ್ಞಾನದ ವೃದ್ಧಿಯೊಂದಿಗೆ ತಮ್ಮ ಸಾಹಿತ್ಯದ ಅಭಿರುಚಿಯನ್ನು ಜೀವಂತವಾಗಿರಿಸಲಿ ಸಹಕಾರಿಯಾಗುತ್ತದೆ. ಆಧುನಿಕ ತಲೆಮಾರಿಗೆ ಹೊಸ ಚಿಂತನೆಗಳು ಬೇಕು. ಸಾಹಿತಿಯಾಗಲು ದೊಡ್ಡ ಕೃತಿಗಳನ್ನೇ ಬರೆಯಬೇಕಿಲ್ಲ. ಕಥೆ, ಕವಿತೆ, ಹಾಸ್ಯದ ಮೂಲಕ ತಮ್ಮ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಕೂಡ ಒಂದು ಉತ್ತಮ ಅವಕಾಶವಾಗಿದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ಕೊಂಕಣಿ ವಿಭಾಗ ಸಲಹಾ ಸಮಿತಿ ಸದಸ್ಯರು, ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸ್ಥಳೀಯ ಮಟ್ಟದ ಸಾಹಿತ್ಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಗ್ರಾಮಲೋಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದರು.
ಕೊಂಕಣಿ ಲೇಖಕರು ಹಾಗೂ ವಿಮರ್ಶಕರೂ ಆಗಿರುವ ಕ್ಲಾರೆನ್ಸ್ ಫೆರ್ನಾಂಡಿಸ್, (ನಾನು ಮರೋಲ್) ಗ್ರಾಮಲೋಕದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಹಿತಿಗಳಾದ ಸನ್ನು ಮೋನಿಸ್, ಕ್ಯಾಥರಿನ್ ರೊಡ್ರಿಗಸ್, ಜ್ಞಾನದೇವ್ ಮಲ್ಯ, ದೊನಾತ್ ಡಿ’ಆಲ್ಮೇಡಾ, ಕಿಶೋರ್ ಗೊನ್ಲಾಲ್ವಿಸ್ ಇವರುಗಳು ಗ್ರಾಮಲೋಕದಲ್ಲಿ ತಮ್ಮ ಸಾಹಿತ್ಯಗಳನ್ನು ಪ್ರಚುರಪಡಿಸಿದರು.
ಕಾರ್ಯಕ್ರಮದಲ್ಲಿ ತೊಟ್ಟಂ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಾಮಾಜಿಕ ಸಂಪರ್ಕ ಸಾಧನ ಆಯೋಗ ತೊಟ್ಟಂ ಇದರ ಸಂಚಾಲಕರಾದ ರೇಮಂಡ್ ಫೆರ್ನಾಂಡಿಸ್ ವಂದಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಸದಸ್ಯ ಎಚ್. ಎಮ್ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.