Home Mangalorean News Kannada News ಸಿಆರ್‌ಜೆಡ್‌: ಜೂನ್ 1 ರಿಂದ ಜುಲೈ 31 ರವರೆಗೆ ಮರಳು ತೆಗೆಯುವಂತಿಲ್ಲ – ಜಿಲ್ಲಾಧಿಕಾರಿ ಹೆಪ್ಸಿಬಾ...

ಸಿಆರ್‌ಜೆಡ್‌: ಜೂನ್ 1 ರಿಂದ ಜುಲೈ 31 ರವರೆಗೆ ಮರಳು ತೆಗೆಯುವಂತಿಲ್ಲ – ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ  

Spread the love

ಸಿಆರ್‌ಜೆಡ್‌: ಜೂನ್ 1 ರಿಂದ ಜುಲೈ 31 ರವರೆಗೆ ಮರಳು ತೆಗೆಯುವಂತಿಲ್ಲ – ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ  

ಉಡುಪಿ: ಜೂನ್ 1 ರಿಂದ ಜುಲೈ 31 ರವರಿಗೆ ಮೀನು ಸಂತಾನೋತ್ಪತ್ತಿ ಅವಧಿ ಆಗಿರುವುದರಿಂದ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಇಲ್ಲ. ಈ ಅವಧಿ ಕಳೆದ ನಂತರ ಮರಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಕಚೇರಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನೀತಿ ಸಂಹಿತೆ ಇದ್ದಿದ್ದರಿಂದ ಮರಳು ತೆಗೆಯಲು ಅವಕಾಶ ಇರಲಿಲ್ಲ. ಜುಲೈ ನಂತರ ಜಿಲ್ಲೆಯಲ್ಲಿ ಮರಳು ತೆಗೆಯುವ ಸಂಬಂಧ ಮೇ 15 ರಂದು ನಡೆದ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ನಿಯಮಾನುಸಾರ ಮರಳು ಗಣಿಗಾರಿಕೆಗೆ ಇರುವ ಅವಕಾಶ, ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಇರುವ ನಿಯಮಗಳು, ಯಾವ ತಾಲ್ಲೂಕು ವ್ಯಾಪ್ತಿಯಲ್ಲಿ ಎಷ್ಟು ಪರವಾನಗಿದಾರರು ಇದ್ದಾರೆ. ಎಷ್ಟು ಪ್ರಮಾಣದ ಮರಳು ತೆಗೆಯಲು ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದೆ ಎಂಬ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದರು.

ಮರಳು ತೆಗೆಯದಿದ್ದರೆ ನೆರೆ ಅಪಾಯ ಇದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆ ಎದುರಿಸಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಸ್ವರ್ಣಾ ನದಿ ಪಾತ್ರದಲ್ಲಿ ಸಂಗ್ರಹವಾಗಿರುವ ನೀರನ್ನು ಡ್ರೆಜಿಂಗ್ ಮೂಲಕ ಜಾಕ್‌ವೆಲ್‌ಗೆ ಹರಿಸುವ ಕಾರ್ಯ ಮುಂದುವರಿದಿದೆ. ಗಂಭೀರ ಸಮಸ್ಯೆಗಳು ಇರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆ ಪ್ರಕ್ರಿಯೆ ಶಾಂತಿಯುತ

ಲೋಕಸಭಾ ಚುನಾವಣೆಯ ಮತ ಎಣಿಕೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 27ರಂದು ನೀತಿ ಸಂಹಿತೆ ಕೊನೆಗೊಳ್ಳಲಿದೆ. ಮತ ಎಣಿಕೆ ಮುಗಿದ ನಂತರದ ದಿನ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇವಿಎಂ, ವಿವಿ ಪ್ಯಾಟ್‌ ಹಾಗೂ ಇತರ ಪರಿಕರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತರಲಾಗಿದೆ. 45 ದಿನ ಬಿಗಿ ಭದ್ರತೆಯಲ್ಲಿ ಇಡಲಾಗುವುದು. ನಂತರ ಚುನಾವಣಾ ಆಯೋಗದ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಾರ್ಚ್‌ 10ರಿಂದ ಮೇ 23ರವರೆಗೂ ನೀತಿ ಸಂಹಿತೆ ಜಾರಿಯಲ್ಲಿತ್ತು. ಜಿಲ್ಲೆಯಲ್ಲಿ 2 ಹಂತದ ಮತದಾನ ನಡೆದು, 23ರಂದು ಮತ ಎಣಿಕೆಯೂ ಮುಗಿದಿದೆ. ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮತ ಎಣಿಕೆಯ ದಿನ ಆಯೋಗದ ಸೂಚನೆಯಂತೆ ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಯಿತು. 8ಕ್ಕೆ ಅಂಚೆಮತಗಳ ಎಣಿಕೆ, ಬಳಿಕ ಇವಿಎಂಗಳ ಮತ ಎಣಿಕೆ ನಡೆಯಿತು. ಮೊದಲ ಎರಡು ಸುತ್ತು ನಿಧಾನಗತಿಯಲ್ಲಿ ಸಾಗಿ ಉಳಿಕೆ ಸುತ್ತುಗಳು ವೇಗವಾಗಿ ಮುಕ್ತಾಯಗೊಂಡವು. ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

21 ಸುತ್ತುಗಳಲ್ಲಿ ಎಣಿಕೆ ನಡೆದು ಸಂಜೆ 6.30ಕ್ಕೆ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿ 7ಕ್ಕೆ ವಿಜೇತರ ಹೆಸರನ್ನು ಘೋಷಿಸಿ, ಅಂದೇ ಗೆದ್ದವರಿಗೆ ಚುನಾವಣಾ ದೃಢಪತ್ರ ವಿತರಿಸಲಾಯಿತು. ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಮತಗಟ್ಟೆಯಂತೆ 80 ಮತಗಟ್ಟೆಯ ವಿವಿ ಪ್ಯಾಟ್‌ ಸ್ಲಿಪ್‌ ಹಾಗೂ ಚಿಕ್ಕಮಗಳೂರಿನ ಒಂದು ಮತಗಟ್ಟೆಯ ವಿವಿ ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಯಿತು. ಎಣಿಕೆಯ ವರದಿಗಳನ್ನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲೆಯಾದ್ಯಂತ ಮಿಂಚಿನ ನೋಂದಣಿ ಮಾಡಿಕೊಳ್ಳಲಾಗಿತ್ತು. ಮನೆಮನೆಗೆ ತೆರಳಿ ಫೋಟೊ ವೋಟರ್ ಸ್ಲಿಪ್‌ ನೀಡಲಾಗಿತ್ತು. ಜತೆಗೆ, ಸ್ವೀಪ್ ಸಮಿತಿ ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌, ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕೃಷಿ ಇಲಾಖೆ ಅಧಿಕಾರಿ ಕೆಂಪೇಗೌಡ ಅವರು ಉಪಸ್ಥಿತರಿದ್ದರು.


Spread the love

Exit mobile version