ಸಿಕ್ಕ ಬಂಗಾರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಲಾರಿ ಚಾಲಕ ಮಹಮದ್ ಅಲಿ

Spread the love

ಸಿಕ್ಕ ಬಂಗಾರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಲಾರಿ ಚಾಲಕ ಮಹಮದ್ ಅಲಿ

ಮಂಗಳೂರು: ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಮುಹಮ್ಮದ್ ಅಲಿ ತಮಗೆ ಸಿಕ್ಕ 15 ಪವನ್ ಚಿನ್ನ ಇದ್ದ ವ್ಯಾನಿಟಿ ಬ್ಯಾಗ್‌ನ್ನು ವಾರಸುದಾರರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಮುಹಮ್ಮದ್ ಅಲಿ ಅವರು ಚಾರ್ಮಾಡಿ ಪೋಸ್ಟ್ ಆಫೀಸ್ ಬಳಿ ಮಂಗಳವಾರ ಬೆಳಗ್ಗೆ 5:30ರಿಂದ 6 ಗಂಟೆ ಸಮಯದಲ್ಲಿ ಮಸೀದಿಗೆ ರಸ್ತೆ ಬದಿ ನಡೆದುಕೊಂಡು ತೆರಳುತ್ತಿದ್ದರು. ಈ ವೇಳೆ ರಸ್ತೆಬದಿ ವ್ಯಾನಿಟಿ ಬ್ಯಾಗ್‌ವೊಂದು ಬಿದ್ದಿರುವುದು ಕಂಡುಬಂದಿದೆ. ಬ್ಯಾಗ್ ಎತ್ತಿಕೊಂಡು ತೆರೆದು ನೋಡಿದಾಗ ಅದರಲ್ಲಿ 15 ಪವನ್ ಚಿನ್ನ, ಮೊಬೈಲ್ ಹಾಗೂ ನಗದು ಹಣ ಸಿಕ್ಕಿದೆ.

ಮೊಬೈಲ್‌ನ್ನು ಆನ್ ಮಾಡಿ ಅದರಲ್ಲಿನ ನಂಬರ್‌ಗಳನ್ನು ಸಂಪರ್ಕಿಸಿದಾಗ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ. ಬಳಿಕ ಸೊತ್ತುಗಳ ಸಮೇತ ವ್ಯಾನಿಟಿ ಬ್ಯಾಗ್‌ನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾರಸುದಾರರಿಗೆ ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ.

ಕುಂದಾಪುರ ರಾಮಚಂದ್ರ ಕುಟುಂಬ ತಿರುಪತಿಯಿಂದ ಕುಂದಾಪುರಕ್ಕೆ ವಾಪಸಾಗುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್ ಬಳಿ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಬ್ಯಾಗ್ ನಾಪತ್ತೆಯಾಗಿರುವ ಕುರಿತು ರಾಮಚಂದ್ರ ಕುಟುಂಬ ದೂರು ನೀಡಿತ್ತು.

ರಸ್ತೆ ಬದಿ ಸಿಕ್ಕಿದ್ದ ಲಕ್ಷಾಂತರ ರೂ. ಮೌಲ್ಯದ ವ್ಯಾನಿಟಿ ಬ್ಯಾಗ್‌ನ್ನು ಲಾರಿ ಚಾಲಕ ಮುಹಮ್ಮದ್ ಅಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅವಿನಾಶ್ ಗೌಡ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ದುಲ್ಲಾ ಪುತ್ತಕ್ಕ ಮೆಡಿಶಿನ್, ಹನೀಫ್ ಇಂಡಿಯಾನ, ಸರ್ದಾರ್ ಮತ್ತಿತರರು ಇದ್ದರು.


Spread the love