ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ

Spread the love

ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೊದಲು ನೀವು ಹುದ್ದೆಗೆ ರಾಜಿನಾಮೆ ಕೊಟ್ಟು ಪಕ್ಷವನ್ನು ಕಾಪಾಡಿ, ಒಬ್ಬ ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ಪಕ್ಷವನ್ನು ಬಲಿಕೊಡಬೇಡಿ ಎಂದು ಕೇಂದ್ರದ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಅವರು ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಒರ್ವ ನ್ಯಾಯವಾದಿಯಾಗಿ ರಾಜ್ಯಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಎಫ್ ಐ ಆರ್ ನ ಮಹತ್ವ ಅರಿಯಬೇಕಿತ್ತು ಯಾವುದೇ ವ್ಯಕ್ತಿ ಸಾಯುವ ಮೊದಲು ಸುಳ್ಳು ಹೇಳುವುದಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಮುನ್ನ ನೇರವಾಗಿ ಮೂರು ಮಂದಿಯ ಹೆಸರನ್ನು ಟಿವಿ ಮಾಧ್ಯಮಕ್ಕೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಏನಾದರು ಆದರೆ ಮಾಜಿ ಗೃಹಸಚಿವ ಕೆ ಜೆ ಜಾರ್ಜ್, ಪೋಲಿಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಪ್ರಸಾದ್ ನೇರ ಹೊಣೆ ಎನ್ನುವುದನ್ನು ಅವರು ಹೇಳಿದ್ದಾರೆ.

poojary-hemanath-shetty-20160608

ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ಜಾರ್ಜ್ ಹಾಗೂ ಇತರ ಇಬ್ಬರು ಅಧಿಕಾರಗಳ ವಿರುದ್ದ ಎಫ್ ಐ ಆರ್ ದಾಖಲೆ ಮಾಡಿಲ್ಲ? ಯಾಕೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಗಣಪತಿಯವರ ಡೈಯಿಂಗ್ ಡಿಕ್ಲರೇಶನ್ ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಯಾವ ಉದ್ದೇಶದಿಂದ ಗಣಪತಿಯವರ ಪತ್ನಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪೂಜಾರಿ ಪ್ರಶ್ನಿಸಿದರು.

ಮಾಧ್ಯಮಗಳು ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಎತ್ತಿತೋರಿಸುತ್ತಿದ್ದರೂ ಕ್ಯಾರೆ ಎನ್ನದ ಮುಖ್ಯಮಂತ್ರಿಗೆ ಏನೆನ್ನಬೇಕು? ಟಿವಿ ಮಾಧ್ಯಮವೊಂದರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 99% ಮಂದಿ ಸರಕಾರದ ವಿರುದ್ದ ಮತ ಹಾಕಿದ್ದಾರೆ. ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ತಿರಸ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮೃತ ಡಿವೈಎಸ್ಪಿ ಪತ್ನಿ ಪಾವನಾ ಅವರಿಗೆ ಸರಕಾರ ಕಿರುಕುಳ ನೀಡುತ್ತಿದೆ. ಆಕೆ ಮಡಿಕೇರಿಯಲ್ಲಿ ಇದ್ದರೂ ಕೂಡ ಸರಕಾರ ಆಕೆಯ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ತನಿಖಾಧಿಕಾರಿಗಳು ಕೇವಲ ಗಣಪತಿಯ ತಂದೆ ಮತ್ತು ಸಹೋದರರ ಪ್ರತಿಕ್ರಿಯೆಗಳನ್ನು ಮಾತ್ರ ಪಡೆದಿದ್ದಾರೆ. ಮುಖ್ಯಮಂತ್ರಿ ಸ್ವತಃ ಸಚಿವ ಜಾರ್ಜ್ ಹಾಗೂ ಮೊಹಾಂತಿ, ಪ್ರಸಾದ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಸಿದ್ದರಾಮಯ್ಯ ತನ್ನ ಹುದ್ದೆಗೆ ರಾಜೀನಾಮೆ ನೀಡದೆ ಹೋದಲ್ಲಿ ಪಕ್ಷದ ಹೈಕಮಾಂಡ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಿದೆ. ಇತರ ಅನೇಕ ಉತ್ತಮ ನಾಯಕರು ಪಕ್ಷದಲ್ಲಿದ್ದು ಅವರು ಮುಖ್ಯಮಂತ್ರಿಯಾಗಲು ಅರ್ಹರು. ಮೂರು ವರ್ಷ ಪೋರೈಸಿದ ಸಿದ್ದರಾಮಯ್ಯ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆಯವರನ್ನು ಕಾರಣವಿಲ್ಲದೆ ಹುದ್ದೆಯಿಂದ ಕೈಬಿಟ್ಟರು. ಸೊರಕೆ ಮಾಡಿದ ತಪ್ಪೇನು? ಈಗ ಸಿದ್ದರಾಮಯ್ಯ ಸರದಿ ಅವರನ್ನು ಹೈಕಮಾಂಡ್ ಕೆಳಗಿಳಿಸಲಿದೆ. ಸಿದ್ದರಾಮಯ್ಯ ಆಲೋಚಿಸಿರಬಹುದು ಅಧಿಕಾರ ಶಾಶ್ವತ ಆದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ. ಅವರು ಮೂರು ವರ್ಷ ಪೊರೈಸಿದ್ದಾರೆ ಈಗ ಬೇರೆಯವರಿಗೆ ಅವಕಾಶ ಮಾಡಿಕೊಡಲಿ. ಪಕ್ಷದಲ್ಲಿ ಎಸ್ ಎಮ್ ಕ್ರಷ್ಣ, ಎಸ್ ಆರ್ ಪಾಟೀಲ್, ಉಗ್ರಪ್ಪ, ಮಲ್ಲಿಕಾರ್ಜುನ ಖರ್ಗೆಯವರಂತಹ ಅನೇಕ ನಾಯಕರಿದ್ದಾರೆ ಅವರು ಮುಖ್ಯಮಂತ್ರಿಯಾಗಲಿ ಎಂದರು.


Spread the love