ಸಿಪಿಎಂ, ಸಿಪಿಐ ಪಕ್ಷದ 11 ಮಂದಿ ಮುಖಂಡರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ಸಿಪಿಎಂ ಮತ್ತು ಸಿಪಿಐ ಪಕ್ಷದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದ ಪಕ್ಷದ 11 ಮಂದಿ ಮುಖಂಡರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಎಎಸ್ಸೈ ಪ್ರವೀಣ್ ನೀಡಿದ ದೂರಿನಂತೆ ಸಿಪಿಎಂ ಮತ್ತು ಸಿಪಿಐ ಪಕ್ಷದ ಮುಖಂಡರಾದ ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾದವ ಶೆಟ್ಟಿ, ಸುಕುಮಾರ್ ರಾವ್, ಬಿ.ಕೆ. ಇಮ್ತಿಯಾಝ್, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜೆಪ್ಪಿನಮೊಗರು, ಹಯವದನ ರಾವ್, ಸೀತಾರಾಮ ಬೇರಿಂಜ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರೂ ಕೂಡ ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನುಮತಿ ನಿರಾಕರಿಸಿದ್ದರು. ಧ್ವನಿವರ್ಧಕ ಬಳಕೆಗೂ ಅವಕಾಶ ಕಲ್ಪಿಸಿರಲಿಲ್ಲ. ಆದಾಗ್ಯೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಇದೀಗ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪೊಲೀಸ್ ಇಲಾಖೆಯು ತಾರತಮ್ಯ ಎಸಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪಕ್ಷದ ವತಿಯಿಂದ ಪ್ರತಿಭಟನೆ ಕೋರಿ ಸಲ್ಲಿಸಿದ್ದ ಮನವಿಗೆ ಹಿರಿಯ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಧ್ವನಿವರ್ಧಕಕ್ಕೂ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ಪ್ರತಿಭಟನೆ ನಡೆಸದಂತೆ ಸೂಚನೆ ನೀಡಲಾಗಿದ್ದರೂ ಪಕ್ಷದ ಮುಖಂಡರು ಬ್ಯಾನರ್ ಹಿಡಿದು, ಅಕ್ರಮ ಕೂಟ ಕಟ್ಟಿಕೊಂಡು ಘೋಷಣೆಗಳನ್ನು ಕೂಗಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.