ಸಿರಿಧಾನ್ಯಗಳೇ ವರದಾನ : ಡಾ.ಖಾದರ್
ಮೂಡುಬಿದಿರೆ: ಆಹಾರದ ಬಗ್ಗೆ ಚೆನ್ನಾಗಿ ಅರಿತಿರುವ ಮನುಷ್ಯನಿಗೆ ಔಷದಿಯ ಅಗತ್ಯವಿಲ್ಲ. ಆಹಾರದ ಅರಿವಿಲ್ಲದಿದ್ದರೆ ಔಷದಿಯೇ ಆತನ ಆಹಾರವಾಗುವುದು ಎಂದು ಮೈಸೂರಿನ ಖ್ಯಾತ ಆಹಾರ ತಜ್ಞ, ಆರೋಗ್ಯ ವಿಜ್ಞಾನ ಸಂತರಾದ ಡಾ.ಖಾದರ್ ಹೇಳಿದರು.
ಆಳ್ವಾಸ್ ಕಾಲೇಜಿನ ಡಾ.ವಿ ಎಸ್ ಆಚಾರ್ಯ ಸಂಭಾಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ “ ಮನುಕುಲದ ಶ್ರೆಯಸ್ಸಿಗೆ ನೆಮ್ಮದಿಯ ಬದುಕಿಗೆ ಸಿರಿದಾನ್ಯಗಳ ವರದಾನ” ಎಂಬ ವಿಷಯದ ಕುರಿತು ಮಾತನಾಡಿದರು.
ನಮ್ಮ ಆಹಾರವೇ ಜಗತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯಲು ಕಾರಣವಾಗುತ್ತಿದೆ. ಪ್ರಸ್ತುತ ರೋಗಗಳಿಗೆ ನಾವು ಸೇವಿಸುವ ಆಹಾರವೇ ಪ್ರಮುಖ ಕಾರಣ. ನಿಸರ್ಗಕ್ಕೆ ತೊಂದರೆ ನೀಡದೆ ಮನುಷ್ಯ ಬದುಕಬೇಕು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಎಲ್ಲ ಅಹಾರ ಪದಾರ್ಥಗಳ ಕವಚವಾಗಿದೆ. ಅದನ್ನು ನಾವು ಸಂಪೂರ್ಣವಾಗಿ ತ್ಯಜಿಸಬೇಕು. ನಮಗೆ ದೊರಕದ ಪಾಶ್ಚಿಮಾತ್ಯ ಹಣ್ಣುಗಳಿಗಿಂತ ದೇಶದಲ್ಲಿ ಬೆಳೆಯುವ ಸಿರಿಧಾನ್ಯಗಳೇ ನಮ್ಮ ಆರೋಗ್ಯದ ಸಮತೋಲನವನ್ನು ಕಾಪಾಡಲು ಸಹಾಯಕವಾಗಿದೆ. ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಆಸ್ಪತ್ರೆಯ ಅವಶ್ಯಕತೆ ಇಲ್ಲ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಆಳ್ವಾಸ ಶಿಕ್ಷಣ ಪ್ರತಿಷ್ಟಾನದ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ನಮ್ಮ ಆರೋಗ್ಯದ ವಿಷಯದಲ್ಲಿ ತುಂಬಾ ಜಾಗೃತರಾಗಬೇಕು. ಉತ್ತಮ ಜೀವನಕ್ಕೆ ಆಹಾರ ಸೇವನೆಯೇ ಅತ್ಯಗತ್ಯ ಎಂದರು.
ಸುಪ್ರಿಯ ಶಿರೋಳ ಕಾರ್ಯಕ್ರಮ ಸ್ವಾಗತಿಸಿ, ಜೇಸನ್ ನಿರೂಪಿಸಿದರು.