ಸಿ.ಆರ್.ಝಡ್ ಮರಳುಗಾರಿಕೆ ತಡೆಗಟ್ಟಲು ಬಿ.ಜೆ.ಪಿ ಹುನ್ನಾರ- ಕಾಂಗ್ರೆಸ್ ಆರೋಪ
ಉಡುಪಿ: ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿತವಾದರೂ ಕೂಡಾ ಕೇಂದ್ರ ಸರ್ಕಾರದ ವಿಶೇಷ ಅನುಮತಿಯೊಂದಿಗೆ ಹಲವಾರು ಷರತ್ತುಗಳನ್ನು ವಿಧಿಸಿ, ಕೇಂದ್ರ ಸರ್ಕಾರದ ಹಸಿರು ನ್ಯಾಯ ಪೀಠ ನೀಡಿದ ತೀರ್ಪನ್ನು ಗಮನಿಸಿ, ಮರಳುಗಾರಿಕೆ ಪರ್ಮಿಟ್ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸಿನ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ನಾರಾಯಣ ಕುಂದರ್, ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಜನಾರ್ದನ ಭಂಡಾರ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ರವರು ಉಡುಪಿ ಜಿಲ್ಲಾಡಳಿತಕ್ಕೆ, ಉಡುಪಿ ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ಉಡುಪಿ ಜಿಲ್ಲೆಯ ಜನತೆಗೆ ಕಡಿಮೆ ಬೆಲೆಯಲ್ಲಿ ಯಥೇಚ್ಛ ಮರಳು ಸಿಗುತ್ತದೆ ಎಂಬ ಆತಂಕದ ನಿಮಿತ್ತ ಬಿಜೆಪಿಯವರು ಶತಾಯಗತಾಯ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಪ್ರಯತ್ನಿಸುತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಜನರಿಗೆ ಮರಳು ಸಿಗದಂತೆ ಮಾಡಿ ರಾಜಕೀಯ ದುರ್ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಸಚಿವ ಪ್ರಮೋದ್ ಮಧ್ವರಾಜ್ರವರ ಸಲಹೆ ಸೂಚನೆ, ಕೇಂದ್ರ ಸರ್ಕಾರದ ಆದೇಶ ಹಾಗೂ ರಾಜ್ಯ ಸರ್ಕಾರದ ಆದೇಶ ಹಾಗೂ ಹಸಿರು ಪೀಠದ ತೀರ್ಪಿಗೆ ಯಾವುದೇ ಚ್ಯುತಿ ಬರದಂತೆ ಸ್ಥಳೀಯರು ಹಾಗೂ ಮರಳುಗಾರಿಕೆ ಮಾಡುವವರ ಮಧ್ಯೆ ಸಂಘರ್ಷವಾಗದಂತೆ, ದೊಡ್ಡ ದೊಡ್ಡ ವಾಹನಗಳು ಹೋಗಿ ಜನರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಮರಳುಗಾರಿಕೆಗೆ ಪರ್ಮಿಟ್ ನೀಡಲು ಪ್ರಯತ್ನ ಮಾಡಿದೆ. ಅರ್ಹತೆ ಇಲ್ಲದೇ ಮರಳುಗಾರಿಕೆ ಮಾಡುತ್ತಿರುವವರನ್ನು ಜಿಲ್ಲಾಡಳಿತ ಹೊರಗಿಟ್ಟಿರುವುದರ ಬಗ್ಗೆ ಬಿಜೆಪಿ ಆಕ್ಷೇಪಿಸುವುದು ಸರಿಯಲ್ಲ. ಏಕೆಂದರೆ ಪರ್ಮಿಟ್ ಸಿಗುವ ಹಾಗೂ ಸಿಗದ ಫಲಾನುಭವಿಗಳಲ್ಲಿ ಕಾಂಗ್ರೆಸಿಗರೂ ಇದ್ದಾರೆ; ಬಿಜೆಪಿಗರೂ ಇದ್ದಾರೆ. ಯಾವುದೇ ಒಳ್ಳೆಯ ಕೆಲಸಗಳು ಆಗುವಾಗ ಆ ದಿನಾಂಕವನ್ನು ತಿಳಿದು ಬಿಜೆಪಿಯವರು ಗಡುವು ನೀಡುವುದು ಫ್ಯಾಶನ್ ಆಗಿದೆ.
ಈ ಹಿಂದೆ ಪಡುಕೆರೆ ಸೇತುವೆ ಉದ್ಘ್ಘಾಟನೆ ಸಂದರ್ಭದಲ್ಲಿ ಗಡುವು ನೀಡಲಾಗಿದ್ದು, ಈಗ ಮರಳುಗಾರಿಕೆ ಪರ್ಮಿಟ್ ನೀಡುವಾಗ ಗಡುವು ನೀಡುವುದು ಬಿಜೆಪಿಗರ ಫ್ಯಾಶನ್ ಆಗಿದೆ. ಎಂ.ಸ್ಯಾಂಡ್, ಮರಳು ಲಾಭಿ, ಬಸ್ ಲಾಬಿಯಂತಹ ಯಾವುದೇ ಲಾಭಿಗಳಿಗೆ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ರವರು ಎಂದೂ ಮಣಿಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಪತ್ರ್ರಿಕಾ ಪ್ರಕಟಣೆ ತಿಳಿಸಿದೆ.