Home Mangalorean News Kannada News ಸಿ ಫೋರ್ ಚುನಾವಣಾ ಪೂರ್ವ ಸಮೀಕ್ಷೆ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಸಿ ಫೋರ್ ಚುನಾವಣಾ ಪೂರ್ವ ಸಮೀಕ್ಷೆ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

Spread the love

ಸಿ ಫೋರ್ ಚುನಾವಣಾ ಪೂರ್ವ ಸಮೀಕ್ಷೆ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಬೆಂಗಳೂರು: ಸಿ ಫೋರ್ ಸಂಸ್ಥೆ 2017 ರ ಜುಲೈ 19 ರಿಂದ ಅಗಸ್ಟ್ 10ರವರೆಗೆ ಕರ್ನಾಟಕದಲ್ಲಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎನ್ನಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ರಾಜ್ಯಾದ್ಯಂತ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳನ್ನು ಹಾಗೂ ವಿವಿಧ ಧರ್ಮ, ಜಾತಿಯ ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಿ ಫೋರ್ ತಿಳಿಸಿದೆ. 2008 ಹಾಗೂ 2013 ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ 99% ನಿಜವಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸಿಗೆ 43%, ಬಿಜೆಪಿಗೆ 32%, ಜೆಡಿಎಸ್ಸಿಗೆ 17% ಹಾಗೂ ಇತರರಿಗೆ 8% ಮತಗಳು ಸಿಗಲಿವೆ. ಕಾಂಗ್ರೆಸ್ 120 ರಿಂದ 132 ರವರೆಗೆ ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿಗೆ ಕೇವಲ 60 ರಿಂದ 72 ಸ್ಥಾನಗಳು ಸಿಗಲಿವೆ. ಜೆಡಿಎಸ್ 24 ರಿಂದ 30 ಸ್ಥಾನಗಳನ್ನು ಮಾತ್ರ ಪಡೆಯಲಿದೆ. ಇತರರಿಗೆ 1 ರಿಂದ 6 ಸ್ಥಾನಗಳು ಬರಲಿವೆ.

46% ಮತದಾರರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. 27% ಮತದಾರರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದಿದ್ದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ 17 % ಮತದಾರರು ಮಾತ್ರ ಒಲವು ವ್ಯಕ್ತಪಡಿಸಿದ್ದಾರೆ. 44% ಮತದಾರರ ಪೈಕಿ ಈಗಿನ ಕಾಂಗ್ರೆಸ್ ಸರಕಾರ ಈ ಹಿಂದಿನ ಸರಕಾರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 18% ಮತದಾರರು ಈ ಸರಕಾರದ ಬಗ್ಗೆ ಅತ್ಯಂತ ಸಂತಪ್ತಿ ವ್ಯಕ್ತಪಡಿಸಿದ್ದರೆ, 53% ಮತದಾರರು ಈ ಸರಕಾರದ ಬಗ್ಗೆ ಹೆಚ್ಚು ಕಡಿಮೆ ಸಂತೃಪ್ತಿ ಹೊಂದಿದ್ದಾರೆ. 29% ಮತದಾರರಿಗೆ ಈ ಸರಕಾರದ ಕಾರ್ಯವೈಖರಿ ತೃಪ್ತಿ ತಂದಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.


Spread the love

Exit mobile version