Home Mangalorean News Kannada News ಸುಧಾಮೂರ್ತಿಗೆ ಫಿದಾ ಆದ ಯು.ಟಿ.ಖಾದರ್ ಪುತ್ರಿ ಹವ್ವ ನಸೀಮಾ

ಸುಧಾಮೂರ್ತಿಗೆ ಫಿದಾ ಆದ ಯು.ಟಿ.ಖಾದರ್ ಪುತ್ರಿ ಹವ್ವ ನಸೀಮಾ

Spread the love

ಸುಧಾಮೂರ್ತಿಗೆ ಫಿದಾ ಆದ ಯು.ಟಿ.ಖಾದರ್ ಪುತ್ರಿ ಹವ್ವ ನಸೀಮಾ

ಇನ್ಫೋಸಿಸ್ ಸಾಧಕಿಯ ಮನೆಗೆ ತೆರಳಿ ಬರ್ತ್’ಡೇ ಗಿಫ್ಟ್ ನೀಡಿದ ಯು.ಟಿ.ಖಾದರ್ ಪುತ್ರಿ..!

ಬೆಂಗಳೂರು: ಇನ್ಫೋಸಿಸ್ ನ ಸುಧಾಮೂರ್ತಿಯವರ ಸರಳತೆ, ವೈಚಾರಿಕತೆ ಹಾಗೂ ಅವರ ಜೀವನಕ್ರಮ, ಸಾಹಿತ್ಯಾಭಿರುಚಿಗೆ ಮಾಜಿ ಸಚಿವ, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಮತ್ತು ಲಾಮಿಸ್ ದಂಪತಿಯ ಏಕೈಕ ಪುತ್ರಿ ಹತ್ತನೇ ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿನಿ ಹವ್ವ ನಸೀಮಾ ಫಿದಾ ಆಗಿದ್ದಾರೆ. ಬುಧವಾರ ಬೆಳಿಗ್ಗೆ  ಸುಧಾಮೂರ್ತಿಯವರ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಿವಾಸಕ್ಕೆ ತಂದೆ ಯು.ಟಿ.ಖಾದರ್ ಜೊತೆಗೆ ತೆರಳಿ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಪ್ರಾರಂಭದಲ್ಲಿ ಸುಧಾಮೂರ್ತಿ ಯಾರು, ಹೇಗೆ ಮತ್ತವರ ವ್ಯಕ್ತಿತ್ವದ ಬಗ್ಗೆ ತಿಳಿದಿರದ ಹವ್ವಳಿಗೆ ಅವರ ಪುಸ್ತಕ ಅಂದರೆ ಪಂಚಪ್ರಾಣ. ಸುಧಾಮೂರ್ತಿ ಅವರು ಬರೆದ ಅಥವಾ ಅವರ ಬಗ್ಗೆ ಪ್ರಕಟವಾದ ಪುಸ್ತಕ, ಲೇಖನಗಳನ್ನು ಹವ್ವ ನಸೀಮಾ ಆಸಕ್ತಿಯಿಂದ ಓದುತ್ತಿದ್ದರು. ಆದರೆ ಈ ವಿಚಾರ ಹೆತ್ತವರಿಗೆ ಗೊತ್ತಿರಲಿಲ್ಲ. ಒಂದಿನ ವಿಮಾನ ನಿಲ್ದಾಣದಲ್ಲಿ ಸುಧಾಮೂರ್ತಿಯವರ ಸಾಹಿತ್ಯ ಪುಸ್ತಕವನ್ನು ಹವ್ವ ಎತ್ತಿಕೊಂಡು ಓದುವಾಗ ತಂದೆ ಯು.ಟಿ.ಖಾದರ್ ಮಗಳನ್ನು ಕುತೂಹಲದಿಂದ ವಿಚಾರಿಸಿದರು. ಸುಧಾಮೂರ್ತಿಯನ್ನು ಭೇಟಿಯಾಗಬೇಕೆಂಬ ಅದಮ್ಯ ಬಯಕೆ ಹೊಂದಿದ್ದ ಪುತ್ರಿಯ ಕನಸನ್ನು ಯು.ಟಿ.ಖಾದರ್ ಬುಧವಾರ ಈಡೇರಿಸಿದ್ದಾರೆ.

ಹವ್ವ ಹಾಗೂ ಸುಧಾಮೂರ್ತಿ ಅವರ ಜನ್ಮದಿನಕ್ಕೆ ಎರಡೇ ದಿನದ ವ್ಯತ್ಯಾಸ. ಸುಧಾಮೂರ್ತಿಯವರದ್ದು ಆಗಸ್ಟ್ 19 ಆದರೆ ಹವ್ವ ಜನ್ಮದಿನ ಆಗಸ್ಟ್ 22. ಪ್ರತಿವರ್ಷ ತಂದೆ ಯು.ಟಿ.ಖಾದರ್ ಹವ್ವ ಬರ್ತ್’ಡೇಗೆ ಏನು ಬೇಕೆಂದು ವಿಚಾರಿಸುತ್ತಿದ್ದರು. ಆಕೆ ಪವಿತ್ರ ಮಕ್ಕಾ ಯಾತ್ರೆ ಅಥವಾ ಬೇರೆ ಯಾವುದಾದರೂ ಧಾರ್ಮಿಕ ಹಿನ್ನೆಲೆಯ ಗಿಫ್ಟ್ ಕೇಳುತ್ತಿದ್ದಳು. ಆದರೆ ಈ ವರ್ಷದ ಜನ್ಮದಿನಕ್ಕೆ ಸುಧಾಮೂರ್ತಿಯವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು. ಪುತ್ರಿಯ ಬೇಡಿಕೆಯನ್ನು ಯು.ಟಿ.ಖಾದರ್ ಈಡೇರಿಸುವ ಭರವಸೆ ನೀಡಿದ್ದರು. ಸುಧಾಮೂರ್ತಿ ಮನೆಗೆ ತೆರಳಿದ ಹವ್ವ ಸ್ವರಚಿಸಿದ ಬರಹದ ಸ್ಮರಣಿಕೆಯನ್ನು ವಿತರಿಸಿದ್ದಾರೆ.

“ನನ್ನ ಪ್ರೀತಿಯ ಸುಧಾಮೂರ್ತಿಯವರಿಗೆ, ಹೆಚ್ಚಿಸಿರುವಿರಿ ನೀವು ನಮ್ಮ ನಾಡಿನ ಕೀರ್ತಿ; ನೀಡುತಿರುವಿರಿ ನೀವು ಹಲವರಿಗೆ ಸ್ಪೂರ್ತಿ. ನಿಮ್ಮ ನಡೆ ನುಡಿ ಬರಹ ನಮಗೆ ದಾರಿದೀಪ; ಸದಾ ನಗುಮುಖ ನಿಮ್ಮದು ನಿಮಗಿಲ್ಲ ಕೋಪ. ನಿಮ್ಮನ್ನು ನೋಡುವ ಆಸೆ ಬಂದಿತ್ತು ನನಗೆ; ಇದೋ ಇಂದು ನಿಮ್ಮೆದುರು ನಮಸ್ಕಾರ ನಿಮಗೆ.” ಎಂದು ಬರೆದ ಸ್ಮರಣಿಕೆಯನ್ನು ಹವ್ವ ಸುಧಾಮೂರ್ತಿಯವರಿಗೆ ಹಸ್ತಾಂತರ ಮಾಡಿದ್ದಾರೆ.

ಇದಕ್ಕೆ ಸಂತೋಷದಿಂದಲೇ ಸ್ವಾಗತಿಸಿ ಪ್ರತಿಕ್ರಿಯಿಸಿದ ಸುಧಾಮೂರ್ತಿಯವರು, ಮೌಲ್ಯಯುತ ಶಿಕ್ಷಣವನ್ನು ಮನೋಜ್ಞವಾಗಿ ಕಲಿತು ಜೀವನದಲ್ಲಿ ಅಳವಡಿಸಿರುವ ಹವ್ವಳ ಸರಳತೆಯನ್ನು ಶ್ಲಾಘಿಸಿದರಲ್ಲದೆ ಎಳೆಯದರಲ್ಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ತಂದೆಯಂತೆ ಮಗಳು ಕೂಡಾ ಸಿಂಪ್ಲಿಸಿಟಿಗೆ ಮಾರುಹೋಗಿರುವುದನ್ನು ಪ್ರಶಂಸಿಸಿದರು. ಧಾರ್ಮಿಕ ಮತ್ತು ಲೌಕಿಕ ವಿಧ್ಯಾಭ್ಯಾಸ ಜೊತೆಜೊತೆಗೆ ಕಲಿಯುವ ಅನುಭವವನ್ನು ಸುಧಾಮೂರ್ತಿ ಹವ್ವರಲ್ಲಿ ಕೇಳಿದರು. ಹಿಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ ವಂಚಿತರಾಗುತ್ತಿದ್ದರು. 1968 ರಲ್ಲಿ ಎಂಜಿನಿಯರಿಂಗ್ ವಿಧ್ಯಾಭ್ಯಾಸ ಮಾಡುವಾಗ ಇಡೀ ಕ್ಲಾಸಿಗೆ ತಾನೊಬ್ಬಳೇ ಹುಡುಗಿ ಇದ್ದೆ. ಉಳಿದವರೆಲ್ಲಾ ಹುಡುಗರೇ. ಆದರೆ ಈಗ ಬದಲಾಗಿದೆ. ಶಿಕ್ಷಣದಲ್ಲಿ ಮಹಿಳೆಯರು ಆಸಕ್ತರಾಗಿದ್ದಾರೆ ಮತ್ತು ಪ್ರೋತ್ಸಾಹ ಕೂಡಾ ಸಿಗುತ್ತಿದೆ ಎಂದು ಸುಧಾಮೂರ್ತಿ ಹವ್ವ ಮತ್ತು ಯು.ಟಿ.ಖಾದರ್ ಅವರಲ್ಲಿ ಹೇಳಿದರು. ಸುಮಾರು ಅರ್ಧ ತಾಸುಗಳ ಕಾಲ ಹವ್ವ ನಸೀಮಾ ಮತ್ತು ಸುಧಾಮೂರ್ತಿ ಮಾತುಕತೆ ನಡೆಸಿದರು.

ಸುಧಾಮೂರ್ತಿಯವರು ಬರೆದ “ತ್ರೀ ತೌಸೆಂಡ್ ಸ್ಟಿಚಸ್”, “ದಿ ಮ್ಯಾಜಿಕ್ ಆಫ್ ದಿ ಲೋಸ್ಟ್ ಟೆಂಪಲ್”, “ಮ್ಯಾಜಿಕ್ ಡ್ರಮ್”, “ಹೌ ದ ಸೀ ಬಿಕಾಮ್ ಸಾಲ್ಟಿ” ಎಂಬ ನಾಲ್ಕು ಆಂಗ್ಲ ಕೃತಿಗಳನ್ನು ಹವ್ವ ನಸೀಮಾ ಅವರಿಗೆ ನೀಡಿದರು.

ಹವ್ವ ನಸೀಮಾ ಎಳೆಯದರಲ್ಲೇ ಧಾರ್ಮಿಕ ಕಲಿಕೆಗಾಗಿ ಕಾಸರಗೋಡಿನ ಅಡ್ಕತ್ತಬೈಲ್ ಹಾಗೂ ದೇರಳಕಟ್ಟೆಯ “ಮದ್ರಸತ್ತಿಬಿಯಾನ್” ಸಂಸ್ಥೆಯಲ್ಲಿ ಕುರ್ಆನ್ ಕಂಠಪಾಠ ಮಾಡಿ “ಹಾಫಿಝಾ” ಬಿರುದು ಪಡೆದರು. ನಂತರ ಉನ್ನತ ಇಸ್ಲಾಮಿಕ್ ವಿಧ್ಯಾಭ್ಯಾಸಕ್ಕಾಗಿ ಹಾಗೂ ಅತೀ ಕಿರಿಯ ಕುರ್ಆನ್ ಶಿಕ್ಷಕಿಯಾಗಿ ಕೇರಳದ ಮಲಪ್ಪುರಂ ನಲ್ಲಿರುವ ಕಡಲುಂಡಿ ಖಲೀಲ್ ತಂಙಳ್ ರವರ ಮಅದಿನ್ ವಿದ್ಯಾಸಂಸ್ಥೆಯ “ಕ್ಯೂ ಲ್ಯಾಂಡ್” ಗೆ ದಾಖಲಾಗಿದ್ದಾರೆ. ಪ್ರಸ್ತುತ ಅಲ್ಲೇ ಸಮೀಪದ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಹವ್ವ ನಸೀಮಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏತನ್ಮಧ್ಯೆ 2018ರಲ್ಲಿ ವಿಶ್ವಪ್ರಸಿದ್ಧ “ದುಬೈ ಹೋಲಿ ಕುರ್ಆನ್ ಅವಾರ್ಡ್” ಸ್ಪರ್ಧೆಯಲ್ಲಿಯೂ ಹವ್ವ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಯು.ಟಿ.ಖಾದರ್ ಅವರು ತನ್ನ ತಾಯಿಯ ಹೆಸರನ್ನೇ ಏಕೈಕ ಮಗಳಿಗೆ ನಾಮಕರಣ ಮಾಡಿದ್ದಾರೆ.


Spread the love
2 Comments
Inline Feedbacks
View all comments
Thirthappa
5 years ago

All is well.but so much of cover is nothing but opression.

drona
5 years ago

Thirthappa, that is her choice. We are a free country.

wpDiscuz
Exit mobile version