Home Mangalorean News Kannada News ಸುನಾಮಿ ಅಣಕು ಕಾರ್ಯಾಚರಣೆ ಮಲ್ಪೆ ಕಡಲ ತೀರ ದಲ್ಲಿ ನೂರಾರು ಮಂದಿಯ ಸ್ಥಳಾಂತರ

ಸುನಾಮಿ ಅಣಕು ಕಾರ್ಯಾಚರಣೆ ಮಲ್ಪೆ ಕಡಲ ತೀರ ದಲ್ಲಿ ನೂರಾರು ಮಂದಿಯ ಸ್ಥಳಾಂತರ

Spread the love

ಸುನಾಮಿ ಅಣಕು ಕಾರ್ಯಾಚರಣೆ ಮಲ್ಪೆ ಕಡಲ ತೀರ ದಲ್ಲಿ ನೂರಾರು ಮಂದಿಯ ಸ್ಥಳಾಂತರ

ಉಡುಪಿ: ದಕ್ಷಿಣ ಇರಾನ್‍ನ ಮಕ್ರಾನ್ ಟ್ರೆಂಚ್ ಮತ್ತು ಪಾಕಿಸ್ತಾನ ಭಾಗದ ಸಮುದ್ರದಲ್ಲಿ ಬೆಳಿಗ್ಗೆ ಸಂಭವಿಸಿದ ಭೂಕಂಪದಿಂದ ಉಂಟಾದ ಸುನಾಮಿ ಭೀತಿ ಹಿನ್ನೆಲೆಯಲ್ಲಿ ಉಡುಪಿಯ ಮಲ್ಪೆ ಕಡಲತೀರದ ಕೊಡವೂರು ಗ್ರಾಮದ ಕೊಳ ವಾರ್ಡ್‍ನ ಮೀನುಗಾರಿಕೆ ಹಳ್ಳಿಯಿಂದ ಸುಮಾರು ಇನ್ನೂರರಷ್ಟು ಜನರನ್ನು ಗುರುವಾರ ಸ್ಥಳಾಂತರಿಸಲಾಯಿತು.

ಭೂಕಂಪ ಸಂಭವಿಸಿದ ತಕ್ಷಣ ಹೈದ್ರಾಬಾದ್‍ನಲ್ಲಿರುವ ಐಎನ್‍ಸಿಒಐಎಸ್ ಸಂಸ್ಥೆಯಿಂದ ಉಡುಪಿಯ ಕಡಲ ತೀರದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂಗೆ ತಕ್ಷಣ ಎಚ್ಚರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಂದಾಯ ಇಲಾಖೆ, ಆರೋಗ್ಯ, ಪೊಲೀಸ್, ಮೀನುಗಾರಿಕೆ, ಅಗ್ನಿಶಾಮಕ ದಳ, ವಾರ್ತಾ ಇಲಾಖೆ, ನಗರಾಭಿವೃದ್ಧಿ ಕೋಶ, ನಗರಸಭೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಬೆಳಿಗ್ಗೆ 11.30ಕ್ಕೆ ಸಂದೇಶವನ್ನು ರವಾನಿಸಲಾಯಿತು. 12.15ಕ್ಕೆ ಐಎನ್‍ಸಿಒಐಎಸ್ ಸಂಸ್ಥೆಯಿಂದ ಸುನಾಮಿ ತೀವ್ರತೆ ಬಗ್ಗೆ ಬಂದ ಇನ್ನೊಂದು ಎಚ್ಚರಿಕೆ ಸಂದೇಶದಲ್ಲಿ ಜನರ ಸ್ಥಳಾಂತರ ಕಾರ್ಯ ಆರಂಭಿಸುವಂತೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಜನರನ್ನು ಕೊಡವೂರಿನ ನಾರಾಯಣ ಗುರು ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದ ತಾತ್ಕಾಲಿಕ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಇನ್ಸಿಡೆಂಟ್ ಕಮಾಂಡೆಂಟ್ ಆಗಿ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಡೆಪ್ಯುಟಿ ಇನ್ಸಿಡೆಂಟ್ ಕಮಾಂಡೆಂಟ್ ಆಗಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಸ್ಥಳದಲ್ಲಿ ಉಪಸ್ಥಿತರಿದ್ದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು!

ಅಣಕು ಕಾರ್ಯಾಚರಣೆ: ಇದು ನಿಜವಾದ ಸುನಾಮಿಯಲ್ಲ. ಸುನಾಮಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಕೈಗೊಳ್ಳಲಾದ ಅಣಕು ಕಾರ್ಯಾಚರಣೆ ಇದು.

mock-tsunami-drill-udupi-20160908-09

ಸುನಾಮಿ ಅಪ್ಪಳಿಸುವ ಸಂದರ್ಭದಲ್ಲಿ ಸಮುದ್ರ ತೀರದ ಜನರ ಸ್ಥಳಾಂತರ ಕಾರ್ಯ, ಗಾಯಾಳುಗಳ ರಕ್ಷಣೆ ಹಾಗೂ ಸಾಗಾಟ, ಚಿಕಿತ್ಸೆ, ವಾಹನ ಸಂಚಾರ ನಿಯಂತ್ರಣ, ಸಂಪರ್ಕ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಇತ್ಯಾದಿಗಳ ಕುರಿತಾಗಿ ಜಿಲ್ಲಾಡಳಿತದ ಸಿದ್ಧತೆಯನ್ನು ಪರಿಶೀಲಿಸಲು ಈ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸಿಇಒ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮೀನುಗಾರ ಮುಖಂಡರ ಸಹಕಾರದಿಂದ ಅಣಕು ಕಾರ್ಯಾಚರಣೆ ಪರಿಣಾಮಕಾರಿ ನಿರ್ವಹಿಸಲು ನೆರವಾಯಿತು ಎಂಬುದನ್ನು ಅವರು ಹೇಳಿದರು.

ವಿಶ್ವದಾದ್ಯಂತ ಒಟ್ಟು 23 ದೇಶಗಳಲ್ಲಿ ಸುನಾಮಿ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನವನ್ನು ಗುರುವಾರ ನಡೆಸಲಾಗಿದೆ. ಅಣಕು ಪ್ರದರ್ಶನದ ಪ್ರಕಾರ ಸೆಪ್ಟಂಬರ್ 7ರಂದು ಬೆಳಿಗ್ಗೆ 8.30 ಭಾರತೀಯ ಕಾಲಮಾನ ಪ್ರಕಾರ ಇಂಡೋನೇಶ್ಯಾದ ದಕ್ಷಿಣ ಸುಮತ್ರಾ ಸಮುದ್ರದಲ್ಲಿ ಭೂಕಂಪನ ಸಂಭವಿಸಿತ್ತು. ಸೆ.8ರಂದು ಬೆಳಿಗ್ಗೆ 11.30ಗಂಟೆಗೆ ದಕ್ಷಿಣ ಇರಾನ್‍ನ ಮಕ್ರಾನ್ ಟ್ರೆಂಚ್ ಮತ್ತು ಪಾಕಿಸ್ತಾನ ಭಾಗದ ಸಮುದ್ರದಲ್ಲಿ 9ರಿಕ್ಟರ್ ಸಾಮಥ್ರ್ಯದ ಎರಡನೇ ಭೂಕಂಪನ ಉಂಟಾದ ಪರಿಣಾಮ ಕರ್ನಾಟಕ ಕರಾವಳಿಯಲ್ಲಿ ಸುನಾಮಿ ಸೃಷ್ಟಿಯಾಗಲಿದೆ ಎಂದು ಕಲ್ಪಿಸಿ ಅಣಕು ಪ್ರದರ್ಶನವನ್ನು ವ್ಯವಸ್ಥೆಗೊಳಿಸಲಾಯಿತು.

ಸುನಾಮಿಯಂತಹ ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಹಾನಿ, ಸಾವು ನೋವುಗಳನ್ನು ಗರಿಷ್ಟವಾಗಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ಇದಕ್ಕಾಗಿ ವಿವಿಧ ಇಲಾಖೆಗಳ ನಡುವಣ ಸಮನ್ವಯ, ಜನರ ಸಹಕಾರ ಇತ್ಯಾದಿಗಳನ್ನು ಪರಿಶೀಲಿಸಲು ಅಣಕು ಪ್ರದರ್ಶನವನ್ನು ಕೈಗೊಳ್ಳಲಾಗುತ್ತಿದೆ.

ಎಲ್ಲ ಇಲಾಖೆಗಳ ಸಮನ್ವಯತೆ ಹಾಗೂ ಸಮಯಮಿತಿಯೊಳಗೆ ತೋರಿದ ಕಾರ್ಯಕ್ಷಮತೆಗೆ ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮೀನುಗಾರಿಕೆ ಮುಖಂಡರು ಇದೇ ಸಂದರ್ಭದಲ್ಲಿ ಸುನಾಮಿ ವೇಳೆ ಸಂಭವಿಸುವ ಅವಘಡ ತಡೆಯಲು ವಯರ್‍ಲೆಸ್ ಬೇಸ್ ಹಾಗೂ ಉಡುಪಿಗೆ ವಿಶಾಲ ರಸ್ತೆ ನಿರ್ಮಿಸಿ ಅವಘಡ ತಡೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ , ಈ ಅಣಕು ಕಾರ್ಯಾಚರಣೆಯಲ್ಲಿ ಉಸ್ತುವಾರಿ ವಹಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಂಯೋಜಕ ಪ್ರದೀಪ್ ಅವರು, ಕಾರ್ಯಚರಣೆಯಲ್ಲಿ ಜಿಲ್ಲಾಡಳಿತ ತ್ವರಿತಗತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ಕಾರ್ಯಾಚರಣೆಗೆ ಅಗತ್ಯವಿದ್ದ ಸೇವೆಗಳ ಕುರಿತು ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದ್ದು, ನೈಜ ಸ್ಥಿತಿಯಲ್ಲಿ ಯಾವುದೇ ಕೊರತೆಯಾಗದಂತೆ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸುನಾಮಿ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಜಿಲ್ಲೆಯ ಅಧಿಕಾರಿಗಳು, ಮೀನುಗಾರರ ಮತ್ತು ಪತ್ರಕರ್ತರಿಗೆ ಪ್ರತ್ಯೇಕ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದ ಅವರು, ಸಮುದ್ರ ತೀರದಲ್ಲಿ ವಯರ್ ಲೆಸ್ ಟವರ್ ನಿರ್ಮಾಣ, ಸೈರನ್ ಅಳವಡಿಕೆ, ಸಮುದ್ರದಲ್ಲಿ ಬೋಟ್ ನಲ್ಲಿರುವ ಮೀನುಗಾರರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವ ಕುರಿತು ಮಾಹಿತಿ ನೀಡುವ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದ ಉಡುಪಿ , ಮಂಗಳೂರು, ಕಾರವಾರ ಕರಾವಳಿ ತೀರದಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಈ ರೀತಿಯ ಕಾಯಾಚರಣೆ ಕೈಗೊಳ್ಳಲಾಗುವುದು ಎಂದು ಪ್ರದೀಪ್ ತಿಳಿಸಿದರು.

ಈ ಅಣಕು ಕಾಯಾಚರಣೆಯಿಂದ, ಸುನಾಮಿ ಸಂದರ್ಭದಲ್ಲಿ ಭಯಗೊಳ್ಳದೇ ಇರಲು ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗಿದೆ ಎಂದು ಮೀನುಗಾರರು ತಿಳಿಸಿದರು.
ವಿಪತ್ತು ನಿರ್ವಹಣಾ ಕೇಂದ್ರದ ಪ್ರಭು, ವಿಜ್ಞಾನಿ ಗವಾಸ್ಕರ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version