ಸುನ್ನತ್ ಕರ್ಮದ ಬಗ್ಗೆ ಈಶ್ವರಪ್ಪ ಅಪಸ್ವರ ಖಂಡನೀಯ: ಎಸ್ಸೆಸ್ಸೆಫ್
ಬೆಂಗಳೂರು: ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ತಮ್ಮ ರಾಜಕೀಯ ಭಾಷಣದಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಂ ಪದ್ದತಿಯಾಗಿರುವ ಸುನ್ನತಿ ಕರ್ಮವನ್ನು ನಿಷೇಧ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ ಅಪಸ್ವರ ಎತ್ತಿರುವುದನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ತೀವ್ರವಾಗಿ ಖಂಡಿಸಿದ್ದಾರೆ.
ಸುನ್ನತೀ ಕರ್ಮ ವೈದ್ಯಶಾಸ್ತ್ರವೂ ಅಂಗೀಕರಿಸುತ್ತಿದ್ದು ಏಡ್ಸ್ ನಂತಹ ಮಾರಕ ರೋಗಗಳು ವ್ಯಾಪಿಸುತ್ತಿರುವ ಕೆಲವು ದೇಶಗಳಲ್ಲಿ ತಡೆಗಟ್ಟಲು ಸುನ್ನತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
2012ರಲ್ಲಿ ಜಿಂಬಾಬ್ವೆ ಯಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 170ಕ್ಕೂ ಹೆಚ್ಚು ಸಂಸದರು ಹಾಗೂ ಸಂಸತ್ತಿನ ನೌಕರರು ಸುನ್ನತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದು ವರದಿಯಾಗಿತ್ತು. .ಜಿಂಬಾಬ್ವೆಯಲ್ಲಿ ಶೇ.15ರಷ್ಟು ಜನರಿಗೆ ಎಚ್‌ಐವಿ ಸೋಂಕು ತಗುಲಿದ್ದಾಗ ಈ ಪ್ರಮಾಣವನ್ನು ಕಡಿಮೆಗೊಳಿಸುವ ನಿರ್ಧಾರದೊಂದಿಗೆ ನಡೆದ ಎಚ್‌ಐವಿ/ಏಡ್ಸ್‌ನ ವಿರುದ್ಧ ಜಿಂಬಾಬ್ವೆ ಸಂಸದರ ಅಭಿಯಾನದಲ್ಲಿ(ಜೆಡ್‌ಐಪಿಎಎಚ್) ಸಂಸದರು ಈ ಘೋಷಣೆ ಮಾಡಿದ್ದರು.
150 ಪುರುಷ ಸಂಸದರು ಸುನ್ನತಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಮಿಕ್ಕ ಮಹಿಳಾ ಸಂಸದರು ಪತಿರಾಯರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಲು ಮನವೊಲಿಸುವುದಾಗಿ ಶಪಥ ಮಾಡಿದ್ದರೆಂದೂ ವರದಿಯಾಗಿತ್ತು.
ಇದರಿಂದ 2010ರಲ್ಲಿ ಜಿಂಬಾಬ್ವೆಯ ಶೇ.80ರಷ್ಟು ಯುವಕರಿಗೆ(ಸುಮಾರು 3 ಕೋಟಿ) ಸುನ್ನತಿ ಮಾಡಲಾಗಿತ್ತು. ಈ ಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜೂಮಾ ಅವರು ದೇಶದ ಯುವಕರು ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು.
ಸುನ್ನತಿ ಎಂಬುದು ಹಲವು ರೋಗಗಳಿಗೆ ಮುಂಜಾಗೃತಾ ಚಿಕಿತ್ಸಾ ಕ್ರಮವಾಗಿರುತ್ತದೆ. ಲೋಕಜ್ಞಾನವಿಲ್ಲದವರು ಮಾತ್ರ ಮೂಢನಂಬಿಕೆಗಳಿಗೂ ಸುನ್ನತಿಗೂ ತಳುಕು ಹಾಕಬಲ್ಲರು.
ಸುನ್ನತಿ(ಸರ್ಕಮ್‌ಸಿಷನ್) ಒಂದು ಸರಳವಾದ ಶಸ್ತ್ರ ಚಿಕಿತ್ಸೆಯಾಗಿದೆ. ಇಸ್ಲಾಂ ಸೇರಿದಂತೆ ಕೆಲವು ಧರ್ಮಗಳಲ್ಲಿ ಸುನ್ನತಿಯು ಸಂಪ್ರದಾಯದ ಭಾಗವಾಗಿಯೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಸುನ್ನತಿ ಶಸ್ತ್ರ ಚಿಕಿತ್ಸೆ ಒಂದು ಉತ್ತಮ ವಿಧಾನ. ಸುನ್ನತಿಗೆ ಒಳಗಾಗಿರುವ ಪುರುಷರು ಏಡ್ಸ್‌ಗೆ ತುತ್ತಾಗುವ ಪ್ರಮಾಣ ಶೇ.60ರಷ್ಟು ಕಡಿಮೆಯಿರುತ್ತದೆ ಎಂದು ಪುರಾವೆಗಳಿಂದ ಸಾಬೀತಾಗಿದೆ. ಇಂತಹ ಸಂಪ್ರದಾಯ ಮತ್ತು ಧರ್ಮದಾಚರಣೆಯನ್ನು ನಿಷೇಧ ಮಾಡುವ ಪ್ರಸ್ತಾಪದ ಹಿಂದೆ ವೋಟ್ ಬ್ಯಾಂಕ್ ಚಿಂತನೆ ಮಾತ್ರ ವಾಗಿದ್ದು ಒಡೆದು ಆಳುವ ನೀಚ ಕೃತ್ಯಕ್ಕೆ ಈಶ್ವರಪ್ಪ ಕೈಹಾಕಿರುದು ಹತಾಶೆಯನ್ನು ತೋರಿಸುತ್ತದೆ ಎಂದು ಇಸ್ಮಾಈಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.