ಸುರಿಯುವ ಮಳೆಯಲ್ಲಿ 300 ಕಿಮಿ ಸೈಕ್ಲಿಂಗ್ ಮಾಡಿದ ಎಸ್ಪಿ ಅಣ್ಣಾಮಲೈ!
ಚಿಕ್ಕಮಗಳೂರು: ಸೈಕ್ಲಿಂಗ್ ಇವರ ಹುಚ್ಚು, ಸೈಕಲ್ ಹತ್ತಿ ಹೊರಟರೆಂದರೆ ಎಷ್ಟು ದೂರ ಬೇಕಾದರೂ ಕ್ರಮಿಸುತ್ತಾರೆ. ಅವರು ಬೇರ್ಯಾರು ಅಲ್ಲ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು. ಉಡುಪಿಯಲ್ಲಿ ಎಸ್ಪಿಯಾಗಿದ್ದಾಗ ಪ್ರತಿ ಭಾನುವಾರ ತನ್ನ ಅಧಿಕಾರಿಗಳೊಂದಿಗೆ ಹಾಗೂ ಇತರ ಸೈಕ್ಲಿಂಗ್ ಕ್ಲಬ್ ಜೊತೆಗೆ ಬೇರೆ ಬೇರೆ ಪ್ರದೇಶಗಳಿಗೆ ಸೈಕ್ಲಿಂಗ್ ಮಾಡುತ್ತಿದ್ದ ಅಣ್ಣಾಮಲೈ ಚಿಕ್ಕಮಗಳೂರಿಗೆ ಹೋದ ಮೇಲೂ ಕೂಡ ಅದನ್ನು ಮುಂದುವರೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಳೆಯ ನಡುವೆಯೇ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೈಕ್ಲಿಂಗ್ ಮಾಡಿದ್ದಾರೆ.
ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ನಿಂದ ಆಯೋಜನೆಗೊಂಡು ಶನಿವಾರ ನಡೆದ ಮೂರನೇ ವರ್ಷದ ಮಾನ್ಸೂನ್ ಬ್ರಿವೇ ಸೈಕ್ಲಿಂಗ್ನಲ್ಲಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಎರಡನೇ ವರ್ಷವೂ ಭಾಗವಹಿಸಿದರು.
ಬೆಳಗ್ಗೆ ಆರು ಗಂಟೆಗೆ ನಗರದ ಟೌನ್ ಕ್ಯಾಂಟೀನ್ನಿಂದ ಆರಂಭವಾದ ಸೈಕಲ್ ಜಾಥಾದಲ್ಲಿ 20ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ ಮಾರ್ಗವಾಗಿ ಸಕ್ರೆಬೈಲಿನ ಮೂಲಕ ಒಟ್ಟು 300 ಕಿ.ಮೀ. ಕ್ರಮಿಸಿ ಅದೇ ಮಾರ್ಗವಾಗಿ ಚಿಕ್ಕಮಗಳೂರಿಗೆ ಹಿಂದಿರುಗಿದ್ದಾರೆ.
ಸುರಿಯೋ ಧಾರಾಕಾರ ಮಳೆ ಭಾರೀ ಗಾಳಿಯ ನಡುವೆಯೇ ಎಸ್ಪಿ, ಸೈಕ್ಲಿಂಗ್ ಮಾಡಿರೋದನ್ನು ಕಂಡು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಎಸ್ಪಿಯವರು ಮಾರ್ಗ ಮಧ್ಯೆ ಊಟ, ತಿಂಡಿ ಹಾಗೂ ಕಾಫಿಗೆ ಸೈಕಲ್ ನಿಲ್ಲಿಸಿದಾಗ ಜನರು ಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಖುಷಿಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಡಕ್ ನಿಲುವಿಗೆ ಮಾತ್ರವಲ್ಲದೆ ಮಾನವೀಯ ಮುಖದಿಂದಲೂ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ನಡೆ, ನುಡಿಯಿಂದ ಯುವ ಸಮೂಹದ ಮನಗೆದ್ದಿರುವ ಅಣ್ಣಾಮಲೈ ಪ್ರತಿ ಭಾನುವಾರ ಸೈಕ್ಲಿಂಗ್‌ನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಕನಿಷ್ಠ 25ಕಿ.ಮೀ. ಸೈಕ್ಲಿಂಗ್ ಮಾಡುವ ಅವರು ಸೈಕಲ್ ರೇಸ್‌ಗಳು ಇದ್ದಾಗ ತಪ್ಪದೆ ಭಾಗವಹಿಸುತ್ತಾರೆ. ಈ ಹಿಂದೆ ಚಿಕ್ಕಮಗಳೂರಿನಿಂದ ಕುಪ್ಪಳಿವರೆಗೆ ಆಯೋಜಿಸಿದ್ದ ಸೈಕಲ್ ರ‍್ಯಾಲಿಯಲ್ಲೂ ಅವರು ಪಾಲ್ಗೊಂಡಿದ್ದರು.