ಸುವರ್ಣ ತ್ರಿಭುಜ ಬೋಟಿನ ವಿಚಾರದಲ್ಲಿ ಬಿಜೆಪಿಗರು ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ – ಪ್ರಮೋದ್ ಮಧ್ವರಾಜ್

Spread the love

ಸುವರ್ಣ ತ್ರಿಭುಜ ಬೋಟಿನ ವಿಚಾರದಲ್ಲಿ ಬಿಜೆಪಿಗರು ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ – ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳು ಕಳೆದಿದ್ದು ಸುವರ್ಣ ತ್ರಿಭುಜ ಬೋಟಿಗೆ ನೌಕಾಸೇನೆಗೆ ಸೇರಿದ ಐಎನ್ ಎಸ್ ಕೊಚ್ಚಿನ್ ನೌಕೆ ಡಿಕ್ಕಿ ಹೊಡೆದಿದ್ದು ಈ ಪ್ರಕರಣದಲ್ಲಿ ಕೇಂದ್ರ ಸರಕಾರವು ಹಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ಸು ,ಮೃತ ಮೀನುಗಾರಿಗೆ ಸೂಕ್ತ ಪರಿಹಾರ ಕಲ್ಪಿಸದೇ ಇದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳ ಬಳಿಕ ಬೋಟ್ ನ ಅವಶೇಷಗಳು ಮೊನ್ನೆ ಪತ್ತೆಯಾಗಿದ್ದವು.ಮೀನುಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿದ್ದು ನೌಕಾಸೇನೆಗೆ ಸೇರಿದ ಐಎನ್ ಎಸ್ ಕೊಚ್ಚಿನ್ ನೌಕೆ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಢಿಕ್ಕಿ ಹೊಡೆದಿದೆ.ಆದರೆ ಢಿಕ್ಕಿ ಹೊಡೆದ ವಿಷಯವನ್ನು ನೌಕಾಸೇನೆ ನಾಲ್ಕು ತಿಂಗಳ ತನಕ ಮುಚ್ಚಿಟ್ಟಿದೆ.ಮೊನ್ನೆ ಚುನಾವಣೆ ಮುಗಿದ ಬಳಿಕ ಬೋಟ್ ನ ಅವಶೇಷ ಸಿಕ್ಕಿರುವ ಬಗ್ಗೆ ನಾಟಕವಾಡುತ್ತಿದೆ ಎಂದರು.

2018ರ ಡಿ.15-16ರ ರಾತ್ರಿ ನಡೆದ ಈ ಅಪಘಾತದ ಬಗ್ಗೆ, ಸುವರ್ಣ ತ್ರಿಭುಜ ಬೋಟು ಮುಳುಗಿದ ಬಗ್ಗೆ ನೌಕಾ ಪಡೆಗೆ ಮಾಹಿತಿ ಇರಲಿಕ್ಕಿಲ್ಲ. ಆದರೆ ಡಿ.22ರಂದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಬೋಟು ಮತ್ತು ಮೀನುಗಾರರ ನಾಪತ್ತೆ ಪ್ರಕರಣ ದಾಖಲಾಗಿ ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕವಾದರೂ ನೌಕಾ ಸೇನೆ ಇದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೀನುಗಾರ ಸಮುದಾಯದ ಓಟು ಕಳೆದುಕೊಳ್ಳುವ ಭೀತಿಯಿಂದ ಸುದ್ದಿಯನ್ನು ಬಹಿರಂಗ ಪಡಿಸದೇ ಮತ್ತೂ ಹುಡುಕುವ ನಾಟಕವಾಡಿದ್ದು ಮೀನುಗಾರರಿಗೆ ಬಗೆದ ದ್ರೋಹವಾಗಿದೆ. ಇದು ನಿಜವಾಗಿಯೂ ದೇಶದ್ರೋಹ ಕೆಲಸ ಎಂದು ಅವರು ಹೇಳಿದರು.

ಇದೀಗ ನೌಕಾ ಪಡೆ ಮೃತ 7 ಮೀನುಗಾರರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು ಮಾತ್ರವಲ್ಲದೆ ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿಯ ಇನ್ಯುರೆನ್ಸ್ ಕ್ಲೇಮ್ ಬಳಿಕದ ಬಾಕಿ ಉಳಿದ ಮೊತ್ತದ ಪರಿಹಾರವನ್ನು ನೀಡಬೇಕು. ಇವೆಲ್ಲವನ್ನೂ ನೌಕಾಪಡೆಯೇ ನೀಡಬೇಕು ಎಂದವರು ತಾಕೀತು ಮಾಡಿದರು.

ಒಂದು ವೇಳೆ ಪರಿಹಾರ ನೀಡಲು ಹಾಗೂ ತಪ್ಪೊಪ್ಪಿಕೊಳ್ಳಲು ನೌಕಾಪಡೆ ಒಪ್ಪಿಕೊಳ್ಳದಿದ್ದಲ್ಲಿ ನೌಕಾಪಡೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನುರಿತ ವಕೀಲರನ್ನು ನೇಮಿಸಿಕೊಂಡು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇನೆ. ಈ ಪ್ರಕರಣದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಜವಾಬ್ದಾರರಾಗಿದ್ದು, ಅವರು ಕಾನೂನಿಗಿಂತ ದೊಡ್ಡವರಲ್ಲ. ಹೀಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧ ಎಂದು ಪ್ರಮೋದ್ ನುಡಿದರು.

ಡಿ.14ರಿಂದ 16ರ ನಡುವಿನ ಅವಧಿಯಲ್ಲಿ ಐಎನ್‌ಎಸ್ ಕೊಚ್ಚಿನ್ ಸಾಗಿರುವ ಮಾರ್ಗದ ದಾಖಲೆಯನ್ನು ಪರಿಶೀಲಿಸಿದಾಗ ಅದು 15ರ ರಾತ್ರಿ ಮಹಾರಾಷ್ಟ್ರದ ಮಾಲ್ವಾನ್ ಸಮುದ್ರದಲ್ಲಿರುವುದು ಹಾಗೂ ಅದೇ ಹೊತ್ತಿನಲ್ಲಿ ಸುವರ್ಣ ತ್ರಿಭುಜ ಬೋಟಿನಿಂದ ಕೊನೆಯ ಸಂದೇಶ ಅಲ್ಲಿಂದಲೇ ಬಂದಿರುವುದು ಸಾಬೀತಾಗಿದೆ. ಇದರಿಂದ ಐಎನ್‌ಎಸ್ ಕೊಚ್ಚಿನ್ ಹಡಗು ಸುವರ್ಣ ತ್ರಿಭುಜಕ್ಕೆ ಢಿಕ್ಕಿ ಹೊಡೆದಿರುವುದು ಖಚಿತ. ಅಲ್ಲದೇ ಡಿ.16-17ರ ಆಸುಪಾಸಿನಲ್ಲಿ ಮಹಾರಾಷ್ಟ್ರ ಸಮುದ್ರದಲ್ಲಿ ಯಾವುದಾದರೂ ಬೋಟಿಗೆ ಹಾನಿಯಾಗಿದೆಯೇ, ಮುಳುಗಿದೆಯೇ ಎಂದು ವಯರ್‌ಲೆಸ್ ಸಂದೇಶದಲ್ಲಿ ನೌಕಾಪಡೆ ವಿಚಾರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂದರು.

ಹೀಗೆ ನೌಕಾ ಪಡೆ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದ ಬಳಿಕವಾದರೂ ನಿಜವಾದ ಸಂಗತಿಯನ್ನು ಬಹಿರಂಗ ಪಡಿಸದೇ ಅದನ್ನು ಮುಚ್ಚಿಟ್ಟು ನಾಟಕ ವಾಡಿದೆ. ಇದನ್ನು ನಾನು ಸಮಸ್ತ ಮೀನುಗಾರರ ಪರವಾಗಿ ಖಂಡಿಸುತ್ತೇನೆ ಎಂದರು.

ಉಡುಪಿ ಶಾಸಕರು ಐದು ದಿನಗಳ ಹಿಂದೆ ಮೀನುಗಾರ ಕುಟುಂಬದವರ ಜೊತೆ ಸೇರಿ ಬೋಟ್ ಹುಡುಕಾಟ ಮಾಡುವ ನಾಟಕ ಮಾಡಿದ್ದಾರೆ. ಶಾಸಕರು ಹೋದ ಎರಡೇ ದಿನದಲ್ಲಿ ಬೋಟ್ ನ ಅವಶೇಷ ಸಿಕ್ಕಿದೆ.ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಪ್ರಮೋದ್ ,ಚುನಾವಣೆ ಮುಗಿಯುವ ತನಕ ಕೇಂದ್ರ ಸರಕಾರ ಢಿಕ್ಕಿಯಾದ ವಿಷಯವನ್ನು ಮುಚ್ಚಿಟ್ಟತ್ತು.ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದರು.ಹೀಗಾಗಿ ಕೇಂದ್ರ ಸರಕಾರ ಮೃತ ಮೀನುಗಾರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ನೀಡಬೇಕು.ಜೊತೆಗೆ ಅವಘಡಕ್ಕೀಡಾದ ಸುವರ್ಣ ತ್ರಿಭುಜ ಬೋಟ್ ಗೂ ಸಂಪೂರ್ಣ ಪರಿಹಾರ ನೀಡಬೇಕು.ಇದು ತಪ್ಪಿದ್ದಲ್ಲಿ ತಾವು ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ಹೇಳಿದರು.

ಉಡುಪಿ ಶಾಸಕರು ,ಸಂಸದೆ ಶೋಭಾ ಕರಂದ್ಲಾಜೆ ಮತ್ತು ರಕ್ಷಣಾ ಸಚಿವೆ ಸೇರಿ ಚುನಾವಣೆ ಲಾಭಕ್ಕಾಗಿ ಮೀನುಗಾರರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಮೀನುಗಾರ ಸಮುದಾಯದವನಾಗಿ ನಾನು ಮೀನುಗಾರರ ಪರವಾಗಿ ದನಿ ಎತ್ತುತ್ತೇನೆ. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.ಮೃತ ಮೀನುಗಾರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ನೀಡಬೇಕು. ಆಗ ಐಎನ್‌ಎಸ್ ಕೊಚ್ಚಿನ್‌ನಲ್ಲಿದ್ದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗೆ ಒಪ್ಪದಿದ್ದರೆ ಬಡ ಮೀನುಗಾರ ಕುಟುಂಬಕ್ಕೆ ನ್ಯಾಯ ದೊರಕಿಸಲು ನಾನು ಸುಪ್ರೀಂ ಕೋರ್ಟಿನ ಮೆಟ್ಟಲೇರುತ್ತೇನೆ ಎಂದು ಪ್ರಮೋದ್ ಹೇಳಿದರು. ಇದು ತಪ್ಪಿದ್ದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಪ್ರಮೋದ್ ತಿಳಿಸಿದರು.ಜೊತೆಗೆ ಮುಖ್ಯಮಂತ್ರಿ ,ರಾಷ್ಟ್ರಪತಿ ,ಮತ್ತು ರಕ್ಷಣಾ ಸಚಿವರಿಗೆ ಶೀಘ್ರ ಪತ್ರ ಬರೆಯುವುದಾಗಿಯೂ ಪ್ರಮೋದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಸತೀಶ್ ಅಮೀನ್ ಪಡುಕೆರೆ, ಗಣೇಶ್ ನೇರ್ಗಿ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love