Home Mangalorean News Kannada News ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ

Spread the love

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ

ಉಡುಪಿ: ರಾಜ್ಯ ಸರಕಾರ 94ಸಿ ಹಾಗೂ 94ಸಿಸಿ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಸೆ. 11 ರಂದು ಹೆಜಮಾಡಿಯಿಂದ ಕಾಪುವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಪ್ರಾರಂಭವಾಗಲಿದ್ದು, ಕಾಪುವಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ಮೋದಿಯವರ ಬಗ್ಗೆ ಹೇಳಿಕೆ ನೀಡುತ್ತಿರುವುದು ಖಂಡನೀಯ. ರಾಜ್ಯ ಸರಕಾರದ ವೈಫಲ್ಯ ಮುಚ್ಚಿಡಲು ಈ ರೀತಿ ಹೇಳುತ್ತಿದ್ದಾರೆ. ಎಸ್‍ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಗಣಪತಿ ಆತ್ಮಹತ್ಯೆ ಪ್ರಕರಣ ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ. ಹೀಗಾಗಿ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮರಳುಗಾರಿಕೆಗೆ ಜಿಲ್ಲೆಯಲ್ಲಿ ಅನುಮತಿ ನೀಡುವ ಸಂದರ್ಭದಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ. ಎನ್‍ಜಿಟಿಯ ಆದೇಶ ಉಲ್ಲಂಘಿಸಿ ಕೆಲವು ಮಾರ್ಪಾಡುಗಳನ್ನು ಜಿಲ್ಲಾಡಳಿತ ಮಾಡುತ್ತಿದ್ದು, ಸಮಸ್ಯೆ ಉದ್ಭವವಾಗುತ್ತಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ನಾನ್ ಸಿಆರ್‍ಝಡ್ ವ್ಯಾಪ್ತಿಯಲ್ಲಿ ಮರುಗಾರಿಕೆಗೆ ಸಣ್ಣ ತಿದ್ದುಪಡಿ ಮಾಡಿದರೆ ಸಾಧ್ಯವಿತ್ತು. ಆದರೆ ಎರಡು ವರ್ಷ ಕಾಲಹರಣ ಮಾಡಿದ ಸರಕಾರ ಇತ್ತೀಚೆಗೆ ಕ್ಯಾಬಿನೆಟ್‍ನಲ್ಲಿ ಮಂಜೂರಾತಿ ನೀಡಿದೆ. ಇನ್ನಾದರೂ ಶೀಘ್ರ ಜಾರಿ ಮಾಡಬೇಕು. 2 ಭಾಗದಲ್ಲಿ ಮರಳು ತೆಗೆಯಲು ಪ್ರಾರಂಭ ಮಾಡಿದರೆ ಅತೀ ಕಡಿಮೆ ಬೆಲೆಗೆ ಜನರಿಗೆ ಮರಳು ಲಭ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ಕೇವಲ 40 ಮಂದಿಗೆ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ಡಿಸಿಯವರು ಬಿಜೆಪಿಗೆ ಭರವಸೆ ನೀಡಿದಂತೆ 164 ಮಂದಿಗೆ ಕೂಡಲೇ ಅನುಮತಿ ನೀಡಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದ 170 ಮಂದಿಗೂ ಅನುಮತಿ ನೀಡಲು ಎನ್‍ಜಿಟಿ ಒಪ್ಪಿಗೆ ಸೂಚಿಸಿದೆ. ಆದರೆ ಜಿಲ್ಲಾಡಳಿತಕ್ಕೆ ಇಚ್ಛಾ ಶಕ್ತಿಯ ಕೊರತೆ ಇದೆ. ಸಚಿವ ಪ್ರಮೋದ್ ಮಧ್ವರಾಜ್ ಎಂ ಸ್ಯಾಂಡ್ ಲಾಬಿಗೆ ಮಣಿದಿದ್ದಾರೆ. ಮರಳುಗಾರಿಕೆಗೆ ಪರವಾನಗಿ ನೀಡುವ ಸಂದರ್ಭ ಪಕ್ಷಪಾತ ಧೊರಣೆ ಅನುಸರಿಸಿ, ಅವರು ಮತ್ತೆ ಕೋರ್ಟ್‍ಗೆ ಹೋಗಿ ಸ್ಟೇ ತರುವಂತೆ ಆಗಬೇಕು ಎಂಬುದು ಅವರ ಇಚ್ಛೆ. ಈ ಮೂಲಕ ಎಂ ಸ್ಯಾಂಡ್‍ನತ್ತ ಜನರ ಒಲವು ಮೂಡಿಸುವ ಹುನ್ನಾರ ಸಚಿವರದ್ದು ಎಂದು ಭಟ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ನಗರಸಭಾ ಸದಸ್ಯ ಯಶ್‍ಪಾಲ್ ಸುವರ್ಣ, ನಾಯಕರಾದ Pಕಟಪಾಡಿ ಶಂಕರ ಪೂಜಾರಿ, ಶ್ಯಾಮಲಾ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version