ಸೆ.28 ಕರ್ನಾಟಕ ಬಂದ್; ಉಡುಪಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ – ಎಸ್ಪಿ ವಿಷ್ಣುವರ್ಧನ್

Spread the love

ಸೆ.28 ಕರ್ನಾಟಕ ಬಂದ್; ಉಡುಪಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ – ಎಸ್ಪಿ ವಿಷ್ಣುವರ್ಧನ್

ಉಡುಪಿ: ಸರ್ಕಾರ ಜಾರಿ ತರಲು ಇಚ್ಛಿಸಿರುವ ಕೃಷಿ ಮಸೂದೆ ವಿಚಾರವಾಗಿ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳು ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ತಿಳಿಸಿದ್ದಾರೆ.

ಅವರು ಭಾನುವಾರ ಉಡುಪಿ ಎಸ್ಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕ ಬಂದ್ ಇರುವ ಪ್ರಯುಕ್ತ ಹೆಚ್ಚುವರಿಯಾಗಿ ಒಂದು ಕೆಎಸ್ ಆರ್ ಪಿ ತುಕಡಿ ಮತ್ತು 6 ಡಿಎಆರ್ ತುಕಡಿಗಳನ್ನು ಸನ್ನದ್ದಗೊಳಿಸಲಾಗಿದೆ. ಈ ವರೆಗೆ ಯಾವುದೇ ಸಂಘಟನೆಗಳು ಬಂದ್ ಕುರಿತು ಅಧಿಕೃತವಾಗಿ ಯಾವುದೇ ರೀತಿಯ ಪರವಾನಿಗೆಯನ್ನು ಪಡೆದುಕೊಂಡಿಲ್ಲ. ಸಂಜೆಯ ಒಳಗಡೆ ಈ ಕುರಿತು ಸೂಕ್ತ ಮಾಹಿತಿ ಲಭಿಸಲಿದ್ದು ಅದರ ಆಧಾರದ ಮೇಲೆ ಬಂದ್ ಕುರಿತು ಬಂದೋಬಸ್ತಿನ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯ ರೈತ ಸಂಘಟನೆಗಳು ಕರೆ ಕೊಟ್ಟ ಕರ್ನಾಟಕ ಬಂದ್ ಗೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನತಾದಳ, ದಲಿತ ಸಂಘರ್ಷ ಸಮಿತಿ, ಭಾರತ ಕಮ್ಯುನಿಷ್ಟ್ ಪಕ್ಷ, ಸಹಬಾಳ್ವೆ, ವೆಲ್ಫೇರ್ ಪಾರ್ಟಿ, ಮುಸ್ಲಿಂ ಒಕ್ಕೂಟ, ಕ್ರಿಶ್ಚಿಯನ್ ಒಕ್ಕೂಟ, ಟ್ರೆಡ್ ಯೂನಿಯನ್, ಅಂಬೇಡ್ಕರ್ ಯುವಸೇನೆ ಸೇರಿ ಒಟ್ಟು 14ಸಂಘಟನೆಗಳು ಸಾಥ್ ನೀಡಿವೆ.

ಜಿಲ್ಲೆಯ ಕಾರ್ಮಿಕರು, ವ್ಯಾಪಾರಿಗಳು, ಬಸ್ ಮಾಲಕರು, ನೌಕರರು ಬಂದ್ ಬೆಂಬಲಿಸುವಂತೆ ಮನವೊಲಿಸು ಕೆಲಸ ನಡೆಯುತ್ತಿದ್ದು ಜಿಲ್ಲೆಯ ಬಸ್, ಆಟೋ, ಟ್ಯಾಕ್ಸಿ ಮಾಲಕರು ಬಂದ್ ಗೆ ಬೆಂಬಲ ನೀಡುವ ಕುರಿತು ಅಧಿಕೃತ ಮಾಹಿತಿಯನ್ನು ಇದುವರೆಗೆ ಸ್ಪಷ್ಟಪಡಿಸಿಲ್ಲ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಬಲ
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ, ಕಾರ್ಪೊರೇಟ್ ಪರವಾಗಿರುವ ಭೂ ಸುಧರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ. ಈ ಕಾಯ್ದೆಗಳಿಂದಾಗಿ ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಹಾಗೂ ವಿದ್ಯುತ್ ಎಲ್ಲವೂ ಖಾಸಗೀಕರಣ ಗೊಳ್ಳಲಿದ್ದು ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಯಲ್ಲಿ ಸೇರಿಕೊಳ್ಳಲಿದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸಿ ನಾಳೆ ರಾಜ್ಯದಾದ್ಯಂತ ಬಂದ್ ಆಚರಿಸಲು ರೈತ ಸಂಘಟನೆಗಳು ಕರೆ ನೀಡಿವೆ, ಈ ಬಂದ್ ಗೆ ಉಡುಪಿಯ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು ಹಾಗೂ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸಹಕರಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಅಧ್ಯಕ್ಷ ನಜೀರ್ ಅಹ್ಮದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love