Home Mangalorean News Kannada News ಸೆ1: ಕಲ್ಲಡ್ಕ ಭಟ್ ಮೂಡಿಗೆರೆಗೆ; ಕಟ್ಟು ನಿಟ್ಟಿನ ಕಾನೂನು ಪಾಲಿಸಲು ಅಣ್ಣಾಮಲೈ ಆದೇಶ

ಸೆ1: ಕಲ್ಲಡ್ಕ ಭಟ್ ಮೂಡಿಗೆರೆಗೆ; ಕಟ್ಟು ನಿಟ್ಟಿನ ಕಾನೂನು ಪಾಲಿಸಲು ಅಣ್ಣಾಮಲೈ ಆದೇಶ

Spread the love

ಸೆ1: ಕಲ್ಲಡ್ಕ ಭಟ್ ಮೂಡಿಗೆರೆಗೆ; ಕಟ್ಟು ನಿಟ್ಟಿನ ಕಾನೂನು ಪಾಲಿಸಲು ಅಣ್ಣಾಮಲೈ ಆದೇಶ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಗಣೇಶೋತ್ಸವ ಹಾಗೂ ಬಕ್ರೀದ್ ಆಚರಣೆಗೆ ಸಂಬಂಧಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವೊಂದು ಕಲಂ 34(ಎ) ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಭದ್ರತೆಗೆ ಸಂಬಂಧಿಸಿ ಆದೇಶ ಹೊರಡಿಸಿದ್ದಾರೆ

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು  ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಮೂಡಿಗೆರೆ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾಸಮಿತಿ ಅಧ್ಯಕ್ಷರಾದ ಶ್ರೀ ಜಿ.ಬಿ.ಧರ್ಮಪಾಲ್‍ರವರ ನೇತೃತ್ವದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿದ್ದು, ಇದರ ಅಂಗವಾಗಿ ಸಪ್ಟೆಂಬರ್ 1 ರಂದು ಬೆಳಿಗ್ಗೆ 8:00 ಗಂಟೆಯಿಂದ ಏಕದಶ ರುದ್ರಹೋಮ, ಅನ್ನಸಂತರ್ಪಣೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಸದರಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಕ್ಕೆ ಆರ್.ಎಸ್.ಎಸ್. ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಆಗಮಿಸುತ್ತಿದ್ದು, ಸದರಿಯವರನ್ನು ಮೂಡಿಗೆರೆ ಹ್ಯಾಂಡ್‍ಪೋಸ್ಟ್‍ನಿಂದ  ಅಡ್ಯಂತಾಯ ರಂಗಮಂದಿರದವರೆಗೆ ಸುಮಾರು 100 ಬೈಕ್‍ಗಳಲ್ಲಿ 150 ಜನರು ಬೈಕ್ ಜಾಥಾದ ಮೂಲಕ ಕರೆತರಲಿರುತ್ತಾರೆ. ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಸಂದರ್ಭದಲ್ಲಿ ಸುಮಾರು 15000 ಜನರು ಸೇರುವ ಸಾಧ್ಯತೆ ಇರುತ್ತದೆ.

ಸಪ್ಟೆಂಬರ್ 1 ಮತ್ತು 2 ರಂದು ಮೂಡಿಗೆರೆ ಪಟ್ಟಣದಲ್ಲಿ  ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸಲಿದ್ದು, ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಎಲ್ಲರೂ ಒಟ್ಟಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿರುತ್ತಾರೆ. ಅದೇ ದಿನ ಮೂಡಿಗೆರೆ ಪಟ್ಟಣದಲ್ಲಿ ವಾರದ ಸಂತೆ ಸಹ ಇದ್ದು, ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಸದರಿ ಸಂತೆಗೆ ಆಗಮಿಸಿ ಜನದಟ್ಟಣೆ ಉಂಟಾಗಲಿರುತ್ತದೆ. ಅಲ್ಲದೆ ಈ ಹಿಂದೆ ಮೂಡಿಗೆರೆ ಪಟ್ಟಣದಲ್ಲಿ ಹಲವು ಕೋಮು ಘಟನೆಗಳು ನಡೆದಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುತ್ತದೆ. ಸಪ್ಟೆಂಬರ್ 2 ರಂದು ಮೂಡಿಗೆರೆ ಪಟ್ಟಣದ ಚೌಡೇಶ್ವರಿ ದೇವಾಲಯದ ಪಕ್ಕ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಯಲಿರುತ್ತದೆ. ಈ ಹಿನ್ನೆಲೆಯಲ್ಲಿ ಮೇಲ್ಕಂಡ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ  ಎರಡೂ ದಿನದಂದು  ಮೂಡಿಗೆರೆ ಪಟ್ಟಣದಲ್ಲಿ ಯಾವುದೇ ಸಂಘಟನೆಯ ಸದಸ್ಯರು ಅಥವಾ ಸಾರ್ವಜನಿಕರು ಈಗಾಗಲೇ ಮೂಡಿಗೆರೆ ಹ್ಯಾಂಡ್‍ಪೋಸ್ಟ್ ನಿಂದ ಅಡ್ಯಂತಾಯ ರಂಗ ಮಂದಿರದ ವರೆಗೆ ಗಣಪತಿ ಸಮಿತಿಯವರು ನಡೆಸುವ ಬೈಕ್ ರ್ಯಾಲಿ ಹೊರೆತುಪಡಿಸಿ ಯಾವುದೇ ರೀತಿಯ ಬೈಕ್ ರ್ಯಾಲಿ ನಡೆಸುವುದನ್ನು, ಮೂರು ಬೈಕುಗಳಿಗಿಂತ ಹೆಚ್ಚು ಬೈಕುಗಳು ಒಂದು ಕಡೆ ಸೇರುವುದನ್ನು ಇತರೆ ಮೆರವಣಿಗೆ ಮಾಡುವುದನ್ನು ನಿಷೇಧಿಸಿದೆ.

ಗಣಪತಿ ಸಮಿತಿಯವರು ನಡೆಸುವ ಬೈಕ್ ರ್ಯಾಲಿಯು ಮೂಡಿಗೆರೆ ಪಟ್ಟಣದ ಕೈಮರ ಹ್ಯಾಂಡ್ ಪೋಸ್ಟ್‍ನಿಂದ ಹೊರಟು-ಕೆ.ಎಂ. ರಸ್ತೆ-ಹಳೇ ಮೂಡಿಗೆರೆ ಗಣಪತಿ ದೇವಸ್ಥಾನ–ಗಂಗನಮಕ್ಕಿ– ಮಟನ್ ಮಾರ್ಕೆಟ್-ಮುದ್ರೆ ಮನೆ ಕಾಫಿ ಕ್ಯೂರಿಂಗ್-ಎಸ್‍ಬಿಎಂ ಕ್ರಾಸ್-ಕೆ.ಎಸ್.ಆರ್.ಟಿ.ಸಿ. ಸರ್ಕಲ್-ಅಡ್ಯಂತಾಯ ರಂಗ ಮಂದಿರಕ್ಕೆ ತಲುಪುವುದು ಮಾತ್ರ ಆಗಿರುತ್ತದೆ. ಇದನ್ನು ಹೊರೆತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಅಥವಾ ಬೇರೆ ಯಾವುದೇ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸುವಂತಿಲ್ಲ.

ಸಪ್ಟೆಂಬರ್ 1 ರಂದು ನಡೆಯಲಿರುವ ಧಾರ್ಮಿಕ ಸಭೆ ಹಾಗೂ ಬೈಕ್ ರ್ಯಾಲಿ ವೇಳೆ ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಡ್ರಮ್ ಭಾರಿಸುವುದನ್ನು, ಟಾಂಟಾಂ ಹೊಡೆಯುವುದನ್ನು, ಹೆಚ್ಚಿನ ಸಂಗೀತ ವಾದ್ಯ ಬಳಸುವುದನ್ನು, 30 ಡೆಸಿಬಲ್‍ಗಿಂತ ಹೆಚ್ಚಿಗೆ ಶಬ್ದದ ಧ್ವನಿ ವರ್ಧಕ ಬಳಸುವುದನ್ನು ನಿಷೇಧಿಸಿದೆ.

ಸಿಪಿಐ ಮೂಡಿಗೆರೆ ವೃತ್ತ ರವರು ಕಲಂ 37 ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಯಾವ ಸಂಘಟನೆಗೆ ಮೈಕ್ ಬಳಸಲು ಅನುಮತಿ ನೀಡಲಾಗಿದೆಯೋ ಅದನ್ನು ಹೊರೆತುಪಡಿಸಿ ಬೇರೆ ಯಾರೂ ಸಹ ಅಡ್ಯಾಂತಯ ರಂಗಮಂದಿರ ಹೊರತುಪಡಿಸಿ ಬೇರೆ ಕಡೆಗಳಲ್ಲಿ, ಮೆರವಣಿಗೆ ಅಥವಾ ಬೈಕ್ ರ್ಯಾಲಿಗಳಲ್ಲಿ ಧ್ವನಿ ವರ್ಧಕ ಬಳಸುವಂತಿಲ್ಲ.

ಮೇಲ್ಕಂಡ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಬೈಕ್‍ಗಳ ಸವಾರರು ಕಡ್ಡಾಯವಾಗಿ ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿನ ಕಲಂ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು, ನಿಗಧಿಪಡಿಸಿದ ವೇಗಕ್ಕಿಂತ ಹೆಚ್ಚಿಗೆ ವೇಗದಲ್ಲಿ ಚಲಿಸತಕ್ಕದ್ದಲ್ಲ, ಬೈಕ್‍ಗಳಲ್ಲಿ ನಿಗಧಿಗಿಂತ ಹೆಚ್ಚು ವ್ಯಕ್ತಿಗಳು ಪ್ರಯಾಣಿಸುವಂತಿಲ್ಲ ಮತ್ತು ಸದರಿ ಬೈಕ್‍ಗಳ ದಾಖಲಾತಿಗಳಾದ ಆರ್.ಸಿ., ವಿಮಾ ಪತ್ರ, ಮತ್ತು ಚಾಲಕರ ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.

ಸಪ್ಟೆಂಬರ್ 1 ರಂದು ಮೂಡಿಗೆರೆ ಪಟ್ಟಣದ ಅಡ್ಯಾಂತಯ ರಂಗ ಮಂದಿರದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ, ಬೈಕ್ ರ್ಯಾಲಿ ಅಥವಾ ಮೆರವಣಿಗೆ ಸಂದರ್ಭಗಳಲ್ಲಿ ಯಾವನೇ ವ್ಯಕ್ತಿ ಅನ್ಯ ಕೋಮಿನ ವಿರುದ್ಧ ಘೋಷಣೆ ಕೂಗುವಂತಿಲ್ಲ, ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ, ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲ.

ಮೇಲೆ ತಿಳಿಸಿರುವ ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಲಂ 188 ಭಾರತೀಯ ದಂಢ ಸಂಹಿತೆ, ಕಲಂ 70, 71 ಮತ್ತು 74 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಭಾರತೀಯ ಮೋಟಾರು ವಾಹನ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

Exit mobile version