ಸೇನಾಪುರದಲ್ಲಿ ಎಕ್ಸ್ ಪ್ರೆಸ್ ರೈಲು ನಿಲ್ಲಿಸದಿದ್ದರೆ ತೀವ್ರ ಸ್ವರೂಪದ ಹೋರಾಟ – ರಾಜೀವ ಪಡುಕೋಣೆ ಎಚ್ಚರಿಕೆ
ಕುಂದಾಪುರ: ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಎಲ್ಲಾ ರೀತಿಯ ಸಾಧ್ಯತೆಗಳಿದ್ದು, ಇಲಾಖೆ ಈ ಬಗ್ಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇವಲ ಮೂರು ತಿಂಗಳ ಗಡುವನ್ನು ನೀಡುತ್ತೇವೆ. ಮೂರು ತಿಂಗಳೊಳಗೆ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಅವಕಾಶ ನಿರಾಕರಿಸಿದರೆ 25 ಗ್ರಾಮಗಳನ್ನು ಒಳಗೊಂಡು ಅನಿರ್ಧಿಷ್ಟಾವಧಿಯ ಹಗಲು-ರಾತ್ರಿ ಮಹಾಧರಣಿಗೆ ಸಜ್ಜಾಗುತ್ತೇವೆ ಎಂದು ಎಕ್ಸ್ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿಯ ಸಂಚಾಲಕ ರಾಜೀವ ಪಡುಕೋಣೆ ಎಚ್ಚರಿಕೆ ನೀಡಿದರು.
ಎಕ್ಸ್ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಜರುಗಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
15 ಗ್ರಾ.ಪಂ ನಿಂದ ಈಗಾಗಲೇ ನಿರ್ಣಯ ಮಾಡಿ ಕಾರವಾರದ ರೈಲ್ವೆ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಬೇಡಿಕೆ ಇಟ್ಟು ಹೋರಾಟ, ಚಳವಳಿಗಳನ್ನು ರೂಪಿಸಿದಾಗ ಆಳುವ ಸರ್ಕಾರಗಳು ನಮಗೆ ಪೂರಕವಾಗಿ ಕೆಲಸ ಮಾಡಲೇಬೇಕು. ಸೇನಾಪುರದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಯಾದರೆ 15 ಗ್ರಾ.ಪಂ ವ್ಯಾಪ್ತಿಯ, 24 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಸೇನಾಪುರ ರೈಲು ನಿಲ್ದಾಣ ನಿರ್ಮಾಣವಾಗುವ ಹೊತ್ತಿಗೆ ಮೂರು ಟ್ರ್ಯಾಕ್ಗಳನ್ನು ಮಾಡಲಾಗಿದ್ದು, ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಆದರೆ ಜನರ ಬೇಡಿಕೆಯ ಕೊರತೆಯಿಂದಾಗಿ ಇಂದು ಎಕ್ಸ್ಪ್ರೆಸ್ ರೈಲುಗಳು ನಿಲ್ಲುತ್ತಿಲ್ಲ. ರೈಲು ಇಲಾಖೆಗೆ ಮನವಿ ಕೊಟ್ಟರೆ ಪ್ರಮುಖ ರೈಲು ನಿಲ್ದಾಣವಲ್ಲ ಎನ್ನುವ ಉತ್ತರ ಅಧಿಕಾರಿಗಳು ಕೊಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ದೂರದೂರುಗಳಾದ ಮುಂಬೈ, ಬೆಂಗಳೂರು ನಗರಗಳಿಗೆ ಪ್ರಯಾಣಿಸುಯವವರೇ ಹೆಚ್ಚು. ಹೀಗಾಗಿ ಲೋಕಲ್ ಟ್ರೈನ್ಗಳಲ್ಲಿ ಜನರು ಸಂಚರಿಸುವುದಿಲ್ಲ. ಇದನ್ನು ಮನಗಂಡು ಇಲಾಖೆ ಪ್ರಮುಖ ರೈಲು ನಿಲ್ದಾಣ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ ಎಂದರು.
ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ ಮಾತನಾಡಿ, ರೈಲ್ವೆ ಇಲಾಖೆಗೆ ಮೂರು ತಿಂಗಳಲ್ಲಿ 24 ಗ್ರಾಮಗಳ ಜನರಿಗೆ ಅನುಕೂಲ ಮಾಡಲು ಸಾಧ್ಯವಾಗದಿದ್ದರೆ ಇದೇ ಸ್ಥಳದಲ್ಲಿ ಟೆಂಟ್ ಹಾಕಿ ಹಗಲು-ರಾತ್ರಿ ಧರಣಿ ನಡೆಸಿ ಅಧಿಕಾರಿಗಳನ್ನು ಬಗ್ಗಿಸುತ್ತೇವೆ. ಇಂತಹ ತಾಕತ್ತು ನಮ್ಮ ಹೋರಾಟಕ್ಕಿದೆ. ಸೇನಾಪುರ ಗ್ರಾಮದ ಮಧ್ಯೆ ಹತ್ತಾರು ರೈಲುಗಳು ಓಡಾಡುತ್ತಿದ್ದರೂ ಕೂಡ ಸೇನಾಪುರ ಮತ್ತು ಸುತ್ತಮುತ್ತಲಿನ 24 ಗ್ರಾಮಗಳ ಜನರಿಗೆ ಇವತ್ತು ಕೂಡ ರೈಲ್ವೆ ಸೇವೆ ಪಡೆಯಲು ಸಾಧ್ಯವಾಗದಿರುವುದಕ್ಕೆ ರೈಲ್ವೆ ಇಲಾಖೆಯ ಘೋರ ವೈಫಲ್ಯ ಕಾರಣ. ಇಲಾಖೆಯ ವಿರುದ್ದ ನಾವೆಲ್ಲರೂ ಮೌನ ಮುರಿಯಬೇಕಿದೆ. ನಮ್ಮ ಹಕ್ಕನ್ನು ನಾವು ಪಡೆಯಲೇಬೇಕು. ಅಧಿಕಾರಿಗಳು ನಮಗೆ ಹಿಂಭಾರ ಕೊಡುವಾಗ ಏನೇನೊ ಸಬೂಬು ಹೇಳಬಹುದು. ಸಾರ್ವಜನಿಕ ಸಂಸ್ಥೆ ಎಂದಾಗ ಅದರಿಂದ ಜನರಿಗೆ ಸೇವೆ ದೊರಕುವ ಕೆಲಸ ಆಗಬೇಕು. ಆದರೆ ಇಂದು ರೈಲ್ವೆ ಇಲಾಖೆ ಸೇನಾಪುರದಲ್ಲಿ ರೈಲು ನಿಲ್ಲಿಸಿದರೆ ನಮಗೆ ನಷ್ಟ ಎನ್ನುತ್ತಿದೆ. ಆದರೆ ಸೇನಾಪುರದಲ್ಲಿ ಎಕ್ಸ್ಪ್ರೆಸ್ ರೈಲು ನಿಂತರೆ ಅದರಿಂದ ಪ್ರವಾಸೋಧ್ಯಮವೂ ಅಭಿವೃದ್ದಿಯಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ನಾಡ ಪಂಚಾಯತ್ ಸದಸ್ಯ ಅರವಿಂದ ಪೂಜಾರಿ, ಪಿಲಿಪ್ ಡಿಸಿಲ್ವ, ಕೆಂಚನೂರು ಸೋಮಶೇಖರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕೆನಡಿ ಪಿರೇರಾ, ಸತೀಶ್ ಎಮ್ ನಾಯಕ್, ಪತ್ರಕರ್ತ ಜಾನ್ ಡಿಸೋಜಾ, ನಾಗರತ್ನ ನಾಡ ಮಾತನಾಡಿದರು.
ಸೇನಾಪುರ ರೈಲ್ವೆ ನಿಲ್ದಾಣದ ಸ್ಟೇಶನ್ ಮಾಸ್ಟರ್ ಸುಕುಮಾರ್ ಶೆಟ್ಟಿಯವರ ಮೂಲಕ ಕಾರವಾರದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಹರ್ಕೂರು ಚಿತ್ತರಂಜನ್ ಶೆಟ್ಟಿ, ಹೊಳ್ಮಗೆ ಸುಭಾಶ್ ಶೆಟ್ಟಿ, ಎಚ್ ನರಸಿಂಹ, ವೆಂಕಟೇಶ್ ಕೋಣಿ, ಅಭಿನಂದನ ಶೆಟ್ಟಿ, ಸಂತೋಷ ಹೆಮ್ಮಾಡಿ, ಶೀಲಾವತಿ ಪಡುಕೋಣೆ, ಪಾರ್ವತಿ ನಾಡ ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
ಪ್ರತಿಭಟನಾ ಸಭೆ ಆರಂಭಕ್ಕೂ ಮುನ್ನ ನಾಡ ಗ್ರಾ.ಪಂಚಾಯತ್ ಬಳಿಯಿಂದ ಸೇನಾಪುರ ರೈಲು ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.