ಸೇನೆಗೆ ಸೇರ್ಪಡೆ: ದ.ಕ.ದಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಹೆಚ್ಚಳ

Spread the love

ಸೇನೆಗೆ ಸೇರ್ಪಡೆ: ದ.ಕ.ದಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಹೆಚ್ಚಳ

ಮ0ಗಳೂರು: ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಈ ವರ್ಷ ನಡೆಯುವ ಸೇನಾ ನೇಮಕಾತಿ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಳೆದ ವರ್ಷಕ್ಕಿಂತ 10 ಪಟ್ಟು ಹೆಚ್ಚಳವಾಗಿದೆ.

ಈ ವರ್ಷದ ರ್ಯಾಲಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 25 ಅಂತಿಮ ದಿನವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 368 ಯುವಕರು ಅರ್ಜಿ ಸಲ್ಲಿಸಿರುತ್ತಾರೆ. 2016ರಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಗೆ ದ.ಕ. ಜಿಲ್ಲೆಯಿಂದ ಕೇವಲ 34 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. 2015ರಲ್ಲಿ 118 ಮಂದಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಸ್ಥಳೀಯ ಸೇನಾ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.

ಭಾರತೀಯ ಸೇನೆಯು ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸೇನಾ ನೇಮಕಾತಿಗೆ ಭಾರತೀಯ ಸೇನೆಯು ಪ್ರತೀ ವರ್ಷ ರಾಜ್ಯದ ವಿವಿದೆಡೆ ನೇಮಕಾತಿ ರ್ಯಾಲಿ ನಡೆಸುತ್ತಿದೆ. ಈ ವರ್ಷ ಮೇ 12 ರಿಂದ ಬಿಜಾಪುರದಲ್ಲಿ ರ್ಯಾಲಿ ನಡೆಯಲಿದೆ. ಸೇನಾ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ. ಬಿಜಾಪುರದಲ್ಲಿ ನಡೆಯುವ ರ್ಯಾಲಿಗೆ ಸುಮಾರು 18600 ಆಕಾಂಕ್ಷಿಗಳು ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸೇನೆಗೆ ಆಯ್ಕೆಯಾಗಲು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಪ್ರಸಕ್ತ ವರ್ಷ ಈ ನಿಟ್ಟಿನಲ್ಲಿ ಮಂಗಳೂರು ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಸೇನಾ ನೇಮಕಾತಿ ರ್ಯಾಲಿ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತ್ತು. ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ, ಮಾಧ್ಯಮಗಳ ಮೂಲಕ ನೇಮಕಾತಿಯ ಪ್ರಚಾರ ನಡೆಸಿತ್ತು. ಈ ವರ್ಷದ ಮಾರ್ಚ್ 12ರಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿತ್ತು.

ಸಾಮಾನ್ಯ ಸೈನಿಕ, ಸೈನಿಕ ಟ್ರೇಡ್ಸ್‍ಮೆನ್ (ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವವರು), ತಾಂತ್ರಿಕ ಸೈನಿಕ(ದ್ವಿತೀಯ ಪಿಯುಸಿ ಪಿಸಿಎಂ), ನರ್ಸಿಂಗ್ ಸಹಾಯಕ (ದ್ವಿತೀಯ ಪಿಯುಸಿ ಪಿಸಿಬಿ) ಹಾಗೂ ಸೈನಿಕ ಗುಮಾಸ್ತ(ದ್ವಿತೀಯ ಪಿಯುಸಿ ಇಂಗ್ಲಿಷ್, ಅಕೌಂಟ್ಸ್/ಗಣಿತ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮೇ 12ರಿಂದ ಬಿಜಾಪುರದಲ್ಲಿ ನಡೆಯುವ ಸೇನಾ ನೇಮಕಾತಿ ಕೇಂದ್ರ, ಮಂಗಳೂರು ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯುವಕರು ಭಾಗವಹಿಸಬಹುದು.

ಆನ್‍ಲೈನ್‍ನಲ್ಲಿ ನೋಂದಾಯಿಸಿರುವ ಎಲ್ಲಾ ಅಭ್ಯರ್ಥಿಗಳು ಮೇ 2ರಿಂದ ವೆಬ್‍ಸೈಟ್‍ನಿಂದ ತಮ್ಮ ಪ್ರವೇಶಪತ್ರ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮಗೆ ಸೂಚಿಸಿದ ದಿನ ಮತ್ತು ಸಮಯದಂದೇ ಬಿಜಾಪುರದ ಸೈನಿಕ ಶಾಲೆಯಲ್ಲಿ ವರದಿ ಮಾಡಿಕೊಳ್ಳಬೇಕಿದೆ. ಹಾಜರಾಗಲು ವಿಳಂಭವಾದರೆ ನೇಮಕಾತಿಗೆ ಅನರ್ಹಗೊಳ್ಳಲಿದ್ದಾರೆ.

ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯಥಿಗಳು ಮೊದಲ ಹಂತದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು, ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಎರಡು ಹಂತದಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆ ಬರೆಯಬೇಕಾಗಿದ್ದು, ಇದರಲ್ಲಿ ಪಾಸಾದವರು ಸೇನೆಗೆ ಆಯ್ಕೆಯಾಗಿ ತರಬೇತಿಗೆ ಕಳುಹಿಸಲ್ಪಡಲಿದ್ದಾರೆ.

ರ್ಯಾಲಿಗೆ ಕೆಲವೇ ದಿನಗಳಿರುವುದರಿಂದ ಅರ್ಜಿ ಹಾಕಿರುವ ಅಭ್ಯರ್ಥಿಗಳು ಈಗಿಂದಲೆ ದೈಹಿಕ ಸಾಮಥ್ರ್ಯ ತರಬೇತಿ ಕೈಗೊಳ್ಳುವಂತೆ ಸೇನಾ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ ಹಾಗೂ ಸಾಧನೆಗಳೇ ನೇಮಕಾತಿಯಲ್ಲಿ ಪರಿಶೀಲನೆಗೊಳಪಡಲಿದ್ದು, ಈ ಬಗ್ಗೆ ಯಾವುದೇ ಬಾಹ್ಯ ವ್ಯಕ್ತಿಗಳ, ಏಜೆಂಟರ ಮಾತಿಗೆ ಮರುಳಾಗದಂತೆ ಮತ್ತು ದಾಖಲೆಗಳನ್ನು ನೀಡದಂತೆ ಮಂಗಳೂರು ಸೇನಾ ನೇಮಕಾತಿ ಕೇಂದ್ರದ ನಿರ್ದೇಶಕ ಕರ್ನಲ್ ಪ್ರಶಾಂತ್ ಪೇಟ್ಕರ್ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದವರ ಜಿಲ್ಲಾವಾರು ವಿವರ:
ದಕ್ಷಿಣ ಕನ್ನಡ-368, ಉಡುಪಿ-136, ಉತ್ತರ ಕನ್ನಡ- 1250, ಶಿವಮೊಗ್ಗ-328, ಹಾವೇರಿ-921, ಗದಗ-1770, ದಾವಣಗೆರೆ-1641, ಧಾರವಾಡ-1726, ಚಿಕ್ಕಮಗಳೂರು-201, ಬಿಜಾಪುರ-4175, ಬಾಗಲಕೋಟೆ-5938.


Spread the love