Home Mangalorean News Kannada News ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ

ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ

Spread the love

ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ

ಉಡುಪಿ: ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಇನ್ನೊಂದು ಪಕ್ಷ ಹುಟ್ಟಿಲ್ಲ. ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಸರಿಸಾಟಿ ಎಂದು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದರು.

ಭಾನುವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇವರಾಜ ಅರಸ್ ಅವರ ಬಳಿಕ ಐದು ವರ್ಷಗಳ ಕಾಲ ಪರಿಪೂರ್ಣವಾದ ಮತ್ತು ಯಾವುದೇ ಕಪ್ಪುಚುಕ್ಕೆ ಇಲ್ಲದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ. ಅವರು ತಮ್ಮ ಅವಧಿಯಲ್ಲಿ ಅನೇಕ ಅತ್ಯುತ್ತಮ ಯೋಜನೆಗಳನ್ನು ನೀಡಿದ್ದರು. ಈ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಿಂದೆ ಬಿದ್ದಿದ್ದರಿಂದ ಚುನಾವಣೆಯಲ್ಲಿ ಸೋಲಾಯಿತು ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿಗಾಗಿ ಏನನ್ನು ಕೇಳಿದರೂ ಇಲ್ಲ ಎಂದು ಹೇಳುತ್ತಿರಲಿಲ್ಲ. ಪ್ರಸಕ್ತ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಾರೆ ಎಂದ ಸಚಿವೆ ಜಯಮಾಲ, ನಾವು ಮೊದಲ ಆದ್ಯತೆಯಾಗಿ ಮಾತು ಕಡಿಮೆ ಮಾಡಿ, ಹೆಚ್ಚು ಕೆಲಸ ಮಾಡಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಸಾಕಷ್ಟು ಜನ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸರಿ ಯಾಗಿ ಜನರಿಗೆ ಪೂರ್ತಿಯಾಗಿ ಸಲುಪಿಸುವಲ್ಲಿ ವಿಫಲರಾಗಿದ್ದೇವೆ. ಕೆಲವೊಂದು  ವಿಚಾರ ಹಾಗೂ ವಿವಾದ, ಅತೃಪ್ತ ಮನಸ್ಸುಗಳಿಂದ ಪಕ್ಷಕ್ಕೆ ಕೆಲ ಕಡೆಗಳಲ್ಲಿ ಸೋಲಾಗಿರಬಹುದು. ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಲು ಗೆಲುವು ಪಕ್ಷದ ನಾಯಕರು ಸಹಿಸಬಹುದು. ಆದರೆ ಕಾರ್ಯಕರ್ತರು ಸಹಿಸುವುದಿಲ್ಲ. ಯಾಕೆಂದರೆ ಅವರು ಹಗಲಿರುಳು ಪಕ್ಷಕ್ಕಾಗಿ ದುಡಿದಿರುತ್ತಾರೆ. ಈ ಕಾರ್ಯಕರ್ತರ ಋಣವನ್ನು ಯಾವುದೇ ಪಕ್ಷ ಮರೆಯುವಂತಿಲ್ಲ ಎಂದರು.

ಪಕ್ಷದಲ್ಲಿ ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು. ರಾಜಕೀಯದಲ್ಲಿನ ಸೋಲು-ಗೆಲುವು ನಮ್ಮ ಕೈಯಲ್ಲಿಲ್ಲ. ಇವತ್ತು ಸೋತರೂ ಮುಂದೊಂದು ದಿನ ಖಂಡಿತವಾಗಿಯೂ ಗೆಲುವು ಪಡೆಯುತ್ತೇವೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಇದ್ದವರು ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಕಾರ್ಯ ಗಳನ್ನು ಮಾಡಿದ್ದಾರೆ ಎಂದರು.

ಜಿಲ್ಲೆಯ ಅಭಿವೃದ್ಧಿ, ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತೇನೆ. ವಾರಕ್ಕೆ ಮೂರು ದಿನ ಉಡುಪಿಯಲ್ಲಿದ್ದು, ಜನರ ಆಶೋತ್ತರ ತಕ್ಕಂತೆ ಕೆಲಸ ಮಾಡುತ್ತೇನೆ . ಜನರ ಹಿತಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.

ಮುಂದಿನ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಜಿ.ಎ. ಬಾವ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ನಾಯಕರಾದ ಸರಸು ಬಂಗೇರ, ಅಮೃತ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version