Home Mangalorean News Kannada News ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮೂಲಕ ಮಕ್ಕಳಲ್ಲಿ ಕಾನೂನಿನ ಬಗ್ಗೆ ಜಾಗೃತಿ- ಎ ಎಸ್ಪಿ ಕುಮಾರಚಂದ್ರ

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮೂಲಕ ಮಕ್ಕಳಲ್ಲಿ ಕಾನೂನಿನ ಬಗ್ಗೆ ಜಾಗೃತಿ- ಎ ಎಸ್ಪಿ ಕುಮಾರಚಂದ್ರ

Spread the love

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮೂಲಕ ಮಕ್ಕಳಲ್ಲಿ ಕಾನೂನಿನ ಬಗ್ಗೆ ಜಾಗೃತಿ- ಎ ಎಸ್ಪಿ ಕುಮಾರಚಂದ್ರ

ಉಡುಪಿ: ಮಕ್ಕಳಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಜಾಗೃತಿಯನ್ನು ಮೂಡಿಸುವುದೇ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಮುಖ್ಯ ಉದ್ಧೇಶ. ಇದರಿಂದ ಎಳವೇಯಲ್ಲಿಯೇ ಮಕ್ಕಳಿಗೆ ಪೊಲೀಸ್ ವೃತ್ತಿಗೆ ಸಂಬಂಧಪಟ್ಟಂತಹ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ಎಎಸ್ಪಿ ಕುಮಾರ್ಚಂದ್ರ ಹೇಳಿದರು.

ಅವರು ಶನಿವಾರ ಮಣಿಪಾಲದ ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವುದು, ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡುವುದು, ಸಂವಿಧಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ. ಮಕ್ಕಳಿಗೆ ಪೊಲೀಸರ ಕರ್ತವ್ಯಗಳ ಕುರಿತು ಅರಿವು ಮೂಡಿಸುವುದು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ, ಪೊಲೀಸ್ ಠಾಣೆಗಳಿಗೆ ಭೇಟಿ, ಅಲ್ಲಿನ ಕಾರ್ಯ ವೈಖರಿಯ ಪರಿಚಯ, ಪರೇಡ್, ಸೇರಿದಂತೆ ವಿವಿಧ ತರಬೇತಿಗಳನ್ನು ಸ್ಟೂಡೆಂಟ್ ಪೊಲೀಸ್ ಕೆಡೆಟ್ಗಳಿಗೆ ನೀಡಲಾಗುವುದು.

ರಾಜ್ಯದಲ್ಲಿ ಈಗಾಗಲೇ 300 ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳು ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು, ಕಾನೂನು ಬದ್ಧ ಹಾಗೂ ಶಾಂತಿಯುತ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸ್ ಇಲಾಖೆಯು, ಸ್ಟೂಡೆಂಟ್ ಪೊಲೀಸ್ ಕೆಡೆಟ್ಗಳ ಸಹಕಾರ ಸಹ ಪಡೆಯಲಾಗುವುದು ಎಂದು ಕುಮಾರ ಚಂದ್ರ ಹೇಳಿದರು.

ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಮಾತನಾಡಿ, ಸಮಸ್ಯೆಗಳನ್ನು ಎದುರಿಸುವುದು ಮತ್ತು ಅವುಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ತಯಾರು ಮಾಡುವುದೇ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಮೂಲ ಉದ್ದೇಶ. ಮಕ್ಕಳನ್ನು ಮೌಲ್ಯಯುತ ವ್ಯಕ್ತಿಯನ್ನಾಗಿಸಿ ಸದೃಢ ಪ್ರಜೆಯನ್ನಾಗಿಸುವ ಧ್ಯೇಯವನ್ನು ಕಾರ್ಯಕ್ರಮ ಹೊಂದಿದೆ. ಮಕ್ಕಳು ಸ್ಕೌಟ್ಸ್, ಗೈಡ್ಸ್, ಸೇವಾದಳ, ಗಿಡ ನೆಡುವ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

 

ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಎಚ್. ನಾರಾಯಣರಾವ್ ಮಾತನಾಡಿ, 8ನೇ ತರಗತಿಯ ಮಕ್ಕಳು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಡಿಯಲ್ಲಿ 2 ವರ್ಷ ತರಬೇತಿ ಪಡೆಯಲಿದ್ದು, ಈ ಅವಧಿಯಲ್ಲಿ ರಾಜ್ಯ ಮತ್ತು ಹೊರರಾಜ್ಯದಲ್ಲಿ ಪ್ರವಾಸಗಳನ್ನು ಹಮ್ಮಿಕೊಂಡು ಪೊಲೀಸ್ ಇಲಾಖೆಗೆ ಭೇಟಿ ನೀಡಿ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಿ.ಆರ್.ಸಿ. ಉಮಾ.ಪಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿತಿಕ ಸ್ವಾಗತಿಸಿ, ಮೋಹಕ ನಿರೂಪಿಸಿದರು. ಶಿಕ್ಷಕಿ ಆಶಾರಾಣಿ ವಂದಿಸಿದರು ಕಾರ್ಯಕ್ರಮದ ಅಂಗವಾಗಿ ಶಾಲಾ ವಠಾರದಲ್ಲಿ ಎಎಸ್ಪಿ ನೇತೃತ್ವದಲ್ಲಿ ಗಿಡ ನೆಡಲಾಯಿತು.


Spread the love

Exit mobile version