ಸ್ಥಗಿತದ ಭೀತಿಯಲ್ಲಿ ಹಂಚು ಕಾರ್ಖಾನೆ: ಅತಂತ್ರದಲ್ಲಿ 2 ಸಾವಿರ ಕಾರ್ಮಿಕರು
ಉಡುಪಿ: ಸ್ವಾತಂತ್ರ್ಯ ಪೂರ್ವದಲ್ಲೇ ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಗೊಂಡು 150ವರ್ಷಕ್ಕೂ ಅಧಿಕ ಸಮಯ ದಿಂದ ಜಿಲ್ಲೆಯ ಆರ್ಥಿಕತೆ ಯಲ್ಲಿ ಪ್ರಮುಖ ಪಾತ್ರ ವಹಿಸುತಿದ್ದ ಹಂಚು ಉದ್ಯಮದ ಅಳಿದುಳಿದ ಕಾರ್ಖಾನೆಗಳೂ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳು ಹೇರುತ್ತಿರುವ ಅವೈಜ್ಞಾನಿಕ ಕಾನೂನು ಹಾಗೂ ಸಮಸ್ಯೆಗಳಿಂದಾಗಿ ಸಂಪೂರ್ಣ ವಾಗಿ ಸ್ಥಗಿತ ಗೊಳ್ಳುವ ಅಂಚಿನಲ್ಲಿದ್ದು, ಹಂಚಿನ ಕಾರ್ಖಾನೆಗಳಲ್ಲಿ ಬದುಕು ಕಟ್ಟಿ ಕೊಂಡಿರುವ ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ಬೀದಿಪಾಲಾಗುವ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಕುಂದಾಪುರ ಹಂಚು ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಟಿ.ಸೋನ್ಸ್ ಹೇಳಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಹಂಚು ಮಾಲಕರ ಸಂಘ ಹಾಗೂ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ ಜಂಟಿಯಾಗಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವಸಾನದ ಅಂಚಿನಲ್ಲಿರುವ ಹಂಚು ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ವಿವರಿಸಿದರು.
ಹಂಚು ಉದ್ಯಮಕ್ಕೆ ಬೇಕಾಗುವ ಪ್ರಮುಖ ಕಚ್ಛಾವಸ್ತುವಾದ ಆವೆ ಮಣ್ಣನ್ನು ಸಂಗ್ರಹಿಸುವಲ್ಲಿ ಜಿಲ್ಲೆಯಲ್ಲಿ ಗಣಿ ಇಲಾಖೆಯ ಕಾನೂನು ಭಾರೀ ಸಮಸ್ಯೆಗೆ ಕಾರಣವಾಗಿದೆ ಎಂದರು. ಹಂಚಿನ ಕಾರ್ಖಾನೆಗಳು ಇಡೀ ವರ್ಷಕ್ಕೆ ಬೇಕಾಗುವ ಆವೆ ಮಣ್ಣನ್ನು ವರ್ಷದ ಮೂರು ತಿಂಗಳಲ್ಲಿ (ಫೆಬ್ರವರಿ ಮಾರ್ಚ್, ಎಪ್ರಿಲ್) ಮಾತ್ರ ಸಂಗ್ರಹಿಸಿ ಇಡಬೇಕಾಗಿದೆ. ಉಳಿದ ತಿಂಗಳಲ್ಲಿ ಮಳೆಯಿಂದ ಆವೆಮಣ್ಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಆವೆಮಣ್ಣಿನ ಗಣಿಗಾರಿಕೆ ನಡೆಸಲು ಇಲಾಖೆಗಳು ತುಂಬಾ ಸಮಸ್ಯೆ ಒಡ್ಡುತ್ತಿದೆ. ದಶಕಗಳಿಂದ ಇಲ್ಲದ ನಿಯಮಗಳನ್ನು ಹೇರಿ ಕಾರ್ಖಾನೆ ಹಾಗೂ ಕಾರ್ಮಿಕರಿಗೆ ಸಮಸ್ಯೆ ಒಡ್ಡುತ್ತಿದೆ. ಕೇವಲ ಮೂರು ತಿಂಗಳು ಮಾತ್ರ ನಡೆಯುವ ಆವೆಮಣ್ಣಿನ ಗಣಿಗಾರಿಕೆಗೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ನಿಯಮಗಳನ್ನು ಹೇರುತ್ತಿದೆ ಎಂದವರು ದೂರಿದರು.
ರಾಯಧನ ಕಟ್ಟಿದರೂ ಸಮಸ್ಯೆ: ಹಂಚಿನ ಕಾರ್ಖಾನೆಗೆ ಬೇಕಾದ ಆವೆ ಮಣ್ಣನ್ನು ಖಾಸಗಿ ಭೂಮಿಯಿಂದ ಮಾತ್ರ ತೆಗೆಯ ಲಾಗುತ್ತಿದೆ. ಈವರೆಗೂ ಸರಕಾರಿ ಭೂಮಿಯಿಂದ ಆವೆ ಮಣ್ಣನ್ನು ತೆಗೆದಿಲ್ಲ. ರಾಯಧನದಿಂದ ಯಾವುದೇ ರಿಯಾಯತಿ ಯನ್ನು ಪಡೆದಿಲ್ಲ. ಆದರೆ ಏಕಾಏಕಿ ಉಡುಪಿ ಜಿಲ್ಲಾ ಖನಿಜ ಇಲಾಖೆ ನೀಡಿರುವ ಷರತ್ತಿನಂತೆ, ಇತರೆ ಇಲಾಖೆಗಳಿಂದ ಪರವಾನಿಗೆ ಪಡೆದು ಖನಿಜ ಇಲಾಖೆಗೆ ಸಲ್ಲಿಸಿ ಅವರಿಂದ ಆವೆಮಣ್ಣನ್ನು ತರಲು ಪರವಾನಿಗೆ ಪಡೆಯಲು ವರ್ಷದ ಮೂರು ತಿಂಗಳ ಕಾಲಾವಕಾಶದಲ್ಲಿ ಅಸಾಧ್ಯ ಎಂದು ಪ್ರಕಾಶ್ ಸೋನ್ಸ್ ಹೇಳಿದರು.
ಮರಳು, ಜಲ್ಲಿ ಗಣಿಗಾರಿಕೆಯಂತಲ್ಲ: ಅಧಿಕಾರಿಗಳು ಮರಳು, ಜಲ್ಲಿಕಲ್ಲಿನ ಗಣಿಗಾರಿಕೆಯಂತೆ ಆವೆಮಣ್ಣಿನ ಗಣಿಗಾರಿಕೆ ಯನ್ನು ಪರಿಗಣಿಸುವುದು ಸರಿಯಲ್ಲ. ಮರಳನ್ನು ಸಾಗಿಸಲು ಇರುವಂತೆ ಪರ್ಮಿಟ್ ಮಾದರಿಯನ್ನು ಅಳವಡಿಸಿಕೊಂಡು ಆವೆ ಮಣ್ಣನ್ನು ಸಾಗಿಸಲು ಅಸಾಧ್ಯ. ದಿನವೊಂದರಲ್ಲಿ ನೂರಾರು ಲಾರಿಗಳು ಓಡಾಟ ನಡೆಸುತ್ತವೆ. ಕುಂದಾಪುರ ಭಾಗದಲ್ಲಿ ಸವರ್ರ್ ಸಮಸ್ಯೆಯಿಂದಾಗಿ ಉಳಿದಿರುವ 10 ಕಾರ್ಖಾನೆಗಳಿಗೇ ಮಣ್ಣು ಸಾಗಾಟ ಅಸಾಧ್ಯ ಎಂದವರು ವಿವರಿಸಿದರು.
ಹಂಚಿನ ಕಾರ್ಖಾನೆಗಳು ಪ್ರಾರಂಭದಿಂದಲೂ ಯಾವುದೇ ಸಮಸ್ಯೆಯಿಲ್ಲದೆ ರಾಯಧನವನ್ನು ಪಾವತಿಸಲು ಒತ್ತಾಯಿ ಸಿದಾಗ, ರಾಜ್ಯ ಸರಕಾರದ ಅಧಿಕಾರಿ ಗಳೊಂದಿಗೆ ಚರ್ಚಿಸಿ ಒಮ್ಮತ ನಿರ್ಧಾರದಿಂದ ಕಾರ್ಖಾನೆಗಳಲ್ಲಿ ಬಳಸುವ ಮಣ್ಣಿಗೆ ವಾರ್ಷಿಕ ರಾಯಧನವನ್ನು ಪಾವತಿಸುತಿದ್ದೇವೆ. ಪ್ರತಿ ಕಾರ್ಖಾನೆಯ ಉತ್ಪಾದನೆಯ ಆಧಾರದ ಮೇಲೆ ಪಾವತಿಸಬೇಕಾದ ರಾಯಧನದ ಪ್ರಮಾಣ ವನ್ನು ನಿಗದಿಸಿಪಡಿಸಲಾಗಿತ್ತು. ಇದು ಸುಗಮವಾಗಿ ನಡೆದುಕೊಂಡು ಬಂದಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಖಾಸಗಿ ಭೂಮಿಯಿಂದ ಜೇಡಿಮಣ್ಣು ಅಗೆಯಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರಿಂದಾಗಿ ಅನೇಕ ಹಂಚಿನ ಕಾರ್ಖಾನೆಗಳು ಸ್ಥಗಿತಗೊಳ್ಳಲು ಕಾರಣವಾಗಿವೆ. ಪ್ರಾಚೀನ ಕಾಲದ ಹಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ರಾಜ್ಯದ ಬೆನ್ನೆಲುಬು ಮತ್ತು ಒಂದೂವರೆ ಶತಮಾನಗಳಿಂದ ರಾಜ್ಯ ಮತ್ತು ದೇಶದ ಬೊಕ್ಕಸಕ್ಕೆ ಕೊಡುಗೆ ನೀಡಿವೆ ಮತ್ತು ನೇರವಾಗಿ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗವನ್ನು ಪ್ರತ್ಯಕ್ಷವಾಗಿ ಹಾಗೊ ಪರೋಕ್ಷವಾಗಿ ಒದಗಿಸಿವೆ ಎಂದವರು ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಕಳೆದ ಫೆಬ್ರವರಿ 25ರಂದು ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಚಿವರು, ಕಾರ್ಮಿಕ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಸ್ಪಂದನೆ ದೊರಕಿಲ್ಲ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಹಂಚು ಮಾಲಕರ ಸಂಘದ ಕಾರ್ಯದರ್ಶಿ ಕೆ.ಸೀತಾರಾಮ ನಕ್ಕತ್ತಾಯ, ಸಚಿನ್ ನಕ್ಕತ್ತಾಯ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ನರಸಿಂಹ, ಕಾರ್ಯದರ್ಶಿ ಎಚ್.ನರಸಿಂಹ ಉಪಸ್ಥಿತರಿದ್ದರು.