Home Mangalorean News Kannada News ಸ್ನೇಕ್ ಮಾಸ್ಟರ್ ಜೊಸೇಫ್ ಅವರಿಗೆ ಹಾವು ಕಡಿದಾಗ!

ಸ್ನೇಕ್ ಮಾಸ್ಟರ್ ಜೊಸೇಫ್ ಅವರಿಗೆ ಹಾವು ಕಡಿದಾಗ!

Spread the love

ಸ್ನೇಕ್ ಮಾಸ್ಟರ್ ಜೊಸೇಫ್ ಅವರಿಗೆ ಹಾವು ಕಡಿದಾಗ!

ಕುಂದಾಪುರ: ಇಲ್ಲಿಗೆ ಸಮೀಪದ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹಿಡಿಯಲೆತ್ನಿಸಿದ ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಅವರ ಬಲಗೈಗೆ ಹಾವು ಕಡಿದ ಘಟನೆ ವರದಿಯಾಗಿದೆ.

ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಹಾವು(ಕುದ್ರಾಳ) ಕಾಣಿಸಿಕೊಂಡಿದ್ದರಿಂದ ಮನೆಯವರು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್‍ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.

ತಕ್ಷಣವೇ ಪಾರ್ತಿಕಟ್ಟೆಯತ್ತ ಪ್ರಯಾಣ ಬೆಳೆಸಿದ ಜೋಸೇಫ್ ಮೊದಲು ಹಿತಲಲ್ಲಿ ಪೊದೆಯೊಳಗೆ ಅವಿತುಕೊಂಡಿದ್ದ ಹಾವಿನ ಬಾಲವನ್ನು ಹಿಡಿದಿದ್ದರು. ಇಡೀ ಹಾವು ಪೊದೆಯೊಳಗಿದ್ದರಿಂದ ಪೊದೆಗಳನ್ನೆಲ್ಲಾ ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಅವರ ಬಲಗೈಗೆ ಕಡಿದಿತ್ತು.

ಹಾವು ಕಡಿದ ತಕ್ಷಣ ಕ್ಷಣ ಕಾಲ ದಿಗ್ಬ್ರಾಂತರಾದ ಜೋಸೆಫ್ ಹಾವಿನ ಬಾಲವನ್ನು ಬಿಟ್ಟಿದ್ದರು. ಬಳಿಕ ತಡಮಾಡದೆ ಕೈಗೊಂದು ಬಟ್ಟೆ ಕಟ್ಟಿಕೊಂಡು ಹರಸಾಹಸಪಟ್ಟು ಹಾವನ್ನು ಹಿಡಿದಿದ್ದರು. ಕೂಡಲೇ ಹಿಡಿದ ಬೃಹದಾಕಾರದ ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರಕ್ಕೆ ಧಾವಿಸಿದ್ದರು.

ತನಗೆ ಕಚ್ಚಿದ್ದು ವಿಷಪೂರಿತ ಕೊಳಕು ಮಂಡಲ ಎಂದು ಮನಗಂಡ ಜೋಸೆಫ್ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಆಸ್ಪತ್ರೆಗೆ ಧಾವಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಹಾವನ್ನು ಪರಿಶೀಲಿಸಿದಾಗಲಷ್ಟೆ ಗೊತ್ತಾಗಿದ್ದು ಈ ಹಾವು ಹೆಬ್ಬಾವು ಎಂದು!

ಇದೀಗ ಜೋಸೆಫ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಮ್ಮಾಡಿಗೆ ಆಗಮಿಸಿ ಎಂದಿನಂತೆ ತಮ್ಮ ರಿಕ್ಷಾ ಬಾಡಿಗೆ ಕಾಯಕದಲ್ಲಿ ನಿರತರಾಗಿದ್ದಾರೆ.


Spread the love

Exit mobile version