ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಶಿಕ್ಷೆ
ಉಡುಪಿ: ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಎಂಬಲ್ಲಿ ಸ್ನೇಹಿತನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶೇಖರ ದೂಜಾ ಮೂಲ್ಯ, ವಯಸ್ಸು 53, ಮತ್ತು ಆತನ ಪತ್ನಿ ಮಾಲತಿ ಶೇಖರ ಮೂಲ್ಯ, ವಯಸ್ಸು 46, ಕಾಂತಾವರ ಗ್ರಾಮ, ಕಾರ್ಕಳ ನಿವಾಸಿಗಳಾಗಿದ್ದು, ಸದರಿಯವರು ಗಂಡ ಹೆಂಡತಿಯರಾಗಿದ್ದು ದಿ: 16-9-2011 ರಂದು ರಾತ್ರಿ ಸುಮಾರು 11-00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣಾ ಸರಹದ್ದಿನ ಕಾಂತಾವರ ಗ್ರಾಮದ ಬಾರಾಡಿ ದರ್ಖಾಸುಮನೆ ಎಂಬಲ್ಲಿರುವ ಶೇಖರ ಮೂಲ್ಯ ಮತ್ತು ಮಾಲತಿ ಮೂಲ್ಯ ಇವರ ಮನೆಗೆ ಬಂದಿದ್ದ ಕಾಂತಾವರ ಗ್ರಾಮದ ಬಾರಾಡಿ ವಾಸಿ ರಾಮ ಮೂಲ್ಯ, 65 ವರ್ಷ, ದಿ. ಕೊರಗ ಮೂಲ್ಯ ಇವರು ಆರೋಪಿತರಲ್ಲಿ ಅಸಭ್ಯವಾಗಿ ವರ್ತಿಸಿರುವುದರಿಂದ ಆರೋಪಿ-1 ಮತ್ತು 2 ರವರು ರಾಮ ಮೂಲ್ಯ ಇವರನ್ನು ಕೊಲೆ ಮಾಡುವ ಸಮಾನ ಉದ್ದೇಶದಿಂದ ತಮ್ಮ ಮನೆಯ ಮುಂಭಾಗದ ಪಂಚಾಂಗದಲ್ಲಿ 1ನೇ ಆರೋಪಿಯು ಹಾರೆಯ ಹಿಡಿಯಿಂದ ರಾಮ ಮೂಲ್ಯರ ತಲೆಗೆ, ಮುಖಕ್ಕೆ ಬಲವಾಗಿ ಹೊಡೆದುದಲ್ಲದೇ, 2ನೇ ಆರೋಪಿಯು ಕತ್ತಿಯಿಂದ ರಾಮ ಮೂಲ್ಯರ ತಲೆಗೆ ಕಡಿದು ರಾಮ ಮೂಲ್ಯರಿಗೆ ತೀವ್ರತರವಾದ ಗಾಯಗೊಳಿಸಿ ಅವರನ್ನು ಕಟ್ಟಿ ಹಾಕಿ ಕೊಲೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ.
ಈ ಪ್ರಕರಣದ ತನಿಖೆಯನ್ನು ಅಂದಿನ ವೃತ್ತ ನಿರೀಕ್ಷಕರಾದ, ಶ್ರೀ ವಿಜಯಪ್ರಸಾದ್ ಎಸ್. ತನಿಖೆ ನಡೆಸಿ, ಆರೋಪಿತರ ವಿರುದ್ಧ ಭಾ.ದಂ.ಸಂ. ಕಲಂ 302, 342, ಜತೆಗೆ 34 ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದು ಇರುತ್ತದೆ.
ಉಡುಪಿಯ ಮಾನ್ಯ ಜಿಲ್ಲಾ ವiತ್ತು ಸತ್ರ ನ್ಯಾಯಾಲಯವು ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯು ಆತನ ಮೇಲೆ ಆಪಾದಿಸಿದಂತೆ ಅಪರಾಧವೆಸಗಿದ್ದು ಪ್ರಕರಣದಲ್ಲಿ ಸಾಬೀತಾಗಿದೆಯೆಂದು ಪರಿಗಣಿಸಿ ಮಾನ್ಯ ನ್ಯಾಯಾಧೀಶರಾದ ಶ್ರೀ ಟಿ. ವೆಂಕಟೇಶ ನಾಯ್ಕರವರು ದಿನಾಂಕ: 1-8-2017 ರಂದು ಪ್ರಕರಣದ ಆರೋಪಿಗಳಿಗೆ ಭಾ. ದಂ.ಸಂ. ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ, ಭಾದಂಸಂ.ಕಲಂ 342 ಅಪರಾಧಕ್ಕೆ ರೂ.5000/- ದಂಡಕ್ಕೆ ಗುರಿಪಡಿಸಿದೆ. ಸದ್ರಿ ದಂಡದ ಮೊತ್ತವನ್ನು ನೊಂದವರಿಗೆ ಪರಿಹಾರ ಧನವಾಗಿ ನೀಡಲು ಆದೇಶಿಸಿದೆ.
ಪ್ರಾಸಿಕ್ಯುಷನ್ ಪರವಾಗಿ ಶ್ರೀಮತಿ ಶಾಂತಿಬಾಯಿ, ಪಬ್ಲಿಕ್ ಪ್ರಾಸಿಕ್ಯೂಟರ್, ಉಡುಪಿ ಇವರು ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿರುತ್ತಾರೆ.