ಸ್ಮರಣಶಕ್ತಿ ಜೀವನಕ್ಕೆ ಜೀವಾಳ : ರಮೇಶ್ಚಂದ್ರ ಹೆಗ್ಡೆ

Spread the love

ಸ್ಮರಣಶಕ್ತಿ ಜೀವನಕ್ಕೆ ಜೀವಾಳ : ರಮೇಶ್ಚಂದ್ರ ಹೆಗ್ಡೆ

ಉಡುಪಿ: ಉತ್ತಮ ಸ್ಮರಣಶಕ್ತಿ ಜೀವನಕ್ಕೆ ಜೀವಾಳ. ಇದನ್ನು ವಿದ್ಯಾರ್ಥಿದೆಸೆಯಲ್ಲಿಯೇ ರೂಢಿಸಿಕೊಳ್ಳಬೇಕು. ನೆನಪಿನಶಕ್ತಿ ಚೆನ್ನಾಗಿದ್ದರೆ ಎಲ್ಲಾ ವಿಷಯದಲ್ಲಿಯೂ ಮುಂದೆಬರಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಂಕಗಳಿಸಿ ಜೀವನದ ಗುರಿಯನ್ನು ಕಂಡುಕೊಳ್ಳಲು ನೆನಪಿನಶಕ್ತಿ ತುಂಬಾ ಚೆನ್ನಾಗಿರಬೇಕು. ಯಾವುದೇ ವಿಷಯವನ್ನು ದಿನದಲ್ಲಿ ನಾಲ್ಕೈದು ಬಾರಿ ಪುನರಪಿ ಮನನ ಮಾಡಿಕೊಳ್ಳುವ ಮೂಲಕ ಸ್ಮರಣಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಎಂದು ಹಿರಿಯ ಸಂಪನ್ಮೂಲ ವ್ಯಕ್ತಿ ರಮೇಶ್ಚಂದ್ರ ಹೆಗ್ಡೆ ನುಡಿದರು.

ಅವರು ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಹತ್ತನೇ ತರಗತಿಯ 210 ವಿದ್ಯಾರ್ಥಿಗಳಿಗೆ ನಡೆದ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುಪಿ ವಿ.ಪಿ.ನಗರದ ಇಂಡಿಯಾನ ಫೌಂಡೇಶನ್‍ನ ಶಾಂತಾರಾಮ ಭಂಡಾರ್ಕರ್ ಶಿಬಿರವನ್ನು ಆಯೋಜಿಸಿದ್ದರು.

ಶಿಬಿರದಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ.ನಾಯಕ್, ಎಸ್. ಎಸ್. ಖಾರೆ, ರಂಜನಾ ಎಸ್. ಖಾರೆ ಮುಂತಾದವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಪ್ರಾರ್ಥನೆ ಮಾಡುವ ವಿಧಾನ, ಪರಿಣಾಮಕಾರಿ ಭಾಷಣ, ಕೀಳರಿಮೆ ನಿರ್ಮೂಲನೆ, ಆಲಿಸುವ ಕಲೆ, ಮೆದುಳಿಗೆ ಪ್ರಚೋದನೆ, ಸೋಲನ್ನು ಎದುರಿಸಿ ಗೆಲ್ಲುವ ವಿಧಾನ, ಜನಸಂಪರ್ಕದಿಂದ ಸಿಗುವ ಲಾಭ, ಶ್ರೇಷ್ಠತೆಗೆ ಸ್ಫೂರ್ತಿ ಮುಂತಾದ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸಂಧ್ಯಾ ಅತಿಥಿಗಳನ್ನು ಸ್ವಾಗತಿಸಿದರು. ಸಭೆಯಲ್ಲಿ ಶಾಲಾ ಎಸ್. ಡಿ. ಎಮ್. ಸಿ.ಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಶಾಂತಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಶಿಕ್ಷಕಿ ಸುಗುಣ ಧನ್ಯವಾದವಿತ್ತರು.


Spread the love