ಸ್ವಚ್ಚತೆ ಎಂಬುವುದು ಗಾಂಧಿಜೀಯವರಿಗೆ ಧರ್ಮ ಆಗಿತ್ತು – ಪ್ರೊ. ಸಿರಿಲ್ ಮಥಾಯಸ್
ಉಡುಪಿ: ಗಾಂಧೀಜಿಯವರು ಜೀವನ ಮೌಲ್ಯಗಳನ್ನು ಬಾಲ್ಯದಲ್ಲಿ ಅವರ ಕುಟುಂಬದಿಂದ ಪಡೆದರೆ ಜೀವನದ ಕಹಿ ಪಾಠಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಪಡೆಯುತ್ತಾರೆ. ಅಪ್ಪಟ ರಾಮ ಭಕ್ತರಾಗಿದ್ದುಕೊಂಡು ಅಹಿಂಸಾವಾದದ ಪೂಜಾರಿಯಾಗಿದ್ದರು. ಗ್ರಾಮ ರಾಜ್ಯದ ಕಲ್ಪನೆ ಹಳ್ಳಿಗಳ ಏಳಿಗೆಗೆ ಪೂರಕ ಎಂದು ನಂಬಿದ್ದರು. ಆಂತರಿಕ ಹಾಗೂ ಬಹಿರಂಗ ಸ್ವಚ್ಚತೆಗೆ ಮಹತ್ವ ನೀಡಿದ ಗಾಂಧಿಯವರಿಗೆ ಸ್ವಚ್ಚತೆ ಎಂಬುದು ಧರ್ಮವಾಗಿತ್ತು. ಎಲ್ಲಾ ಧರ್ಮಗಳನ್ನು ಅರಿತುಕೊಂಡ ಸಹಬಾಳ್ವೆಯಿಂದ ಜೀವಿಸುವುದು ತನ್ನ ಜೀವನದ ಗುರಿ ಎಂದು ತಿಳಿದಿದ್ದರು. ಎಂದು ಪ್ರಗತಿಪರ ಚಿಂತಕ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಅಧ್ಯಾಪಕ ಪ್ರೊ. ಸಿರಿಲ್ ಮಥಾಯಸ್‍ರವರು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಆಶ್ರಯದಲ್ಲಿ ಗಾಂಧಿ ಜಯಂತಿಯಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ಜರಗಿದ “ಗಾಂಧಿ-150” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ನುಡಿದರು.
ಅವರು ಮುಂದುವರಿಯುತ್ತಾ ಸರಳ ಜೀವನ ಜೀವಿಸಿದ ಗಾಂಧಿಯವರಿಗೆ ಸತ್ಯ ಮತ್ತು ಅಹಿಂಸೆಯೇ ಅವರ ತೊಡುಗೆಯಾಗಿತ್ತು. ಹಿಂಸೆಯಿಂದ ತುಂಬಿದ ಸಮಾಜಕ್ಕೆ ಮಾನವ ಧರ್ಮವನ್ನು ಬೋಧಿಸಿದರು. ಸತ್ಯ ಮತ್ತು ಅಹಿಂಸೆಯ ಪ್ರವಾದಿಯಾಗಿದ್ದ ಗಾಂಧಿಜಿಯನ್ನು ಬ್ರಿಟೀಷರು ಭಯ ಮತ್ತು ಗೌರವದಿಂದ ನೋಡಿಕೊಂಡಿದ್ದರು. ಗಾಂಧಿಜೀಯವರು ಉಪವಾಸದ ಕರೆಕೊಟ್ಟಾಗ ಬ್ರಿಟೀಷ್ ಸರಕಾರ ನಡುಗುತ್ತಿತ್ತು. ಸತ್ಯಾಗ್ರಹ ಮತ್ತು ಉಪವಾಸ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ದ ಅಹಿಂಸಾ ಅಸ್ತ್ರವಾಗಿತ್ತು. ಯಾರೂ ಗಾಂಧಿಯನ್ನು ಅವರ ತತ್ವಗಳನ್ನು ವಿರೋಧಿಸಿ ಗಾಂಧಿ ಹಂತಕನನ್ನು ಬೆಂಬಲಿಸಿದರೋ ಅವರೇ ಇಂದು ದೇಶಭಕ್ತಿಯ ವಕ್ತಾರರಾಗಿರುವುದು ಇಂದಿನ ಸಮಾಜದ ವಿಪರ್ಯಾಸ ಎಂದರು.
ಉಪಸ್ಥಿತರಿದ್ದ ಮಾಜಿ ಸಚಿವರು ಮತ್ತು ಮಾಜಿ ಕಾಪು ಶಾಸಕರಾದ ವಿನಯ ಕುಮಾರ್ ಸೊರಕೆ ಮಾತನಾಡುತ್ತಾ ಇಂದು ನಾವು ಗಾಂಧಿ ತತ್ವ ಆದರ್ಶಗಳನ್ನು ಮರೆಯುತ್ತಿದ್ದೇವೆ. ಅಸಹಿಷ್ಣುತೆ ತಾಂಡವವಾಡುತ್ತಿರುವ ಈ ಹೊತ್ತಲ್ಲಿ ಗಾಂಧಿ ಚಿಂತನೆಗಳ ಅತ್ಯಂತ ಪ್ರಸ್ತುತ. ಆದರೆ ಇಂದು ಗಾಂಧೀಜಿಯವರ ಎಲ್ಲಾ ಚಿಂತನೆಗಳನ್ನು ಗೌಣವಾಗಿಸಿ ಕೇವಲ ಸ್ವಚ್ಚತೆಗೆ ಗಾಂಧೀಜಿಯನ್ನು ಮೀಸಲಿರಿಸಿ ಮುಂದಿನ ತಲೆಮಾರಿಗೆ ಗಾಂಧೀಜಿ ಚಿಂತನೆಗಳು ತಲುಪದಂತೆ ಮಾಡುವ ಷಡ್ಯಂತ್ರವೊಂದು ಜರಗುತ್ತಿದೆ. ಈ ಬಗ್ಗೆ ನಾವು ಎಚ್ಚರವನ್ನು ವಹಿಸಬೇಕು ಈ ನಿಟ್ಟಿನಲ್ಲಿ ಆರ್.ಜಿ.ಪಿ.ಆರ್.ಎಸ್. ಸಂಘಟಿಸಿದ ಈ ಕಾರ್ಯಕ್ರಮ ಅತ್ಯಂತ ಸಕಾಲಿಕ ಎಂದರು.
ಪ್ರಾರಂಭದಲ್ಲಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ರೋಶನಿ ಒಲಿವರ್‍ರವರು ಸ್ವಾಗತಿಸಿದರು. ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ವಂದಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಡಾ. ಸುನೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರ ಶಕ್ತಿ ತಂಡಕ್ಕೆ ಸದಸ್ಯತನ ನೋಂದಾವಣೆ ಕಾರ್ಯಕ್ರಮ ಜರಗಿತು.