ಸ್ವಚ್ಛತೆಗೆ ಮಾದರಿ ಸರ್ವಧರ್ಮ ಸಮನ್ವಯ ಕೇಂದ್ರ ಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳ: ನವೆಂಬರ್ ಬಂದಾಕ್ಷಣ ಕಾರ್ತೀಕ ಮಾಸದ ಬೆಳಕಿನ ರಂಗು, ದೀಪಾವಳಿಯ ವಿಶೇಷತೆ, ಕರ್ನಾಟಕ ಧರ್ಮಸ್ಥಳ ಧಾರ್ಮಿಕ ಕೇಂದ್ರದಲ್ಲಿ ಲಕ್ಷದಿಪೋತ್ಸವದ ಜಾತ್ರೆ. ಬೆಳಕು ಚೆಲ್ಲುವ ದೀಪದ ಸಾಲು, ಕಣ್ಸೆಳೆಯುವ ವಿದ್ಯುದಾಲಂಕಾರ, ಭಕ್ತಿ ಸಮೂಹದ ಭಕ್ತಿ ಪರವಶತೆ, ಉತ್ಸವ, ಸರ್ವಧರ್ಮೀಯತೆ, ಸಾಹಿತ್ಯ ಕೃಷಿಕ್ಷೇತ್ರಕ್ಕೆ ಎಲ್ಲದರ ಮಿಶ್ರಣ ಮನಸ್ಸನ್ನು ಹಿಡಿದಿಡುವಂತೆ ಮಾಡುತ್ತದೆ. ವಿಜೃಂಭಣೆ, ಸಂಪ್ರದಾಯ, ಆಚರಣೆಗಳು ಒಂದೆಡೆಯಾದರೇ ವ್ಯವಸ್ಥಿತ ಸ್ವಚ್ಛತೆ ಹಾಗೂ ಮತ್ತದೇ ವರ್ಚಸ್ಸನ್ನು ಕಾಯ್ದುಕೊಂಡು ಹೋಗುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಧರ್ಮಸ್ಥಳ ವಿಶೇಷವಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ.
ಹಿನ್ನಲೆ:
ಎಂಟು ಶತಮಾನಗಳ ಇತಿಹಾಸ ಹೊಂದಿರುವ ಧರ್ಮಸ್ಥಳಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಿಶೇಷತೆಗಳನ್ನು, ಸಾಧನೆಗಳನ್ನು ಮಾಡುತ್ತಲೇ ಇದೆ. ಲಕ್ಷ ದೀಪೋತ್ಸವ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು 1933ರಲ್ಲಿ ಅಂದಿನ ಧರ್ಮಾಧಿಕಾರಿ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ದೀಪೋತ್ಸವದ ನಾಲ್ಕನೇ ದಿನ ಸಾಹಿತ್ಯ, ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸಿದರು.
ಹೆಗ್ಗಡೆ ಪರಂಪರೆಯಲ್ಲಿ ಈಗಿನ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರು ಇಪ್ಪತ್ತೊಂದನೇ ಧರ್ಮಾಧಿಕಾರಿ. 1968 ರ ಅಕ್ಟೋಬರ್ 24ರಂದು ಧರ್ಮಾಧಿಕಾರಿಯಾಗಿ ಪಟ್ಟಾಭಿಷಕ್ತರಾದ ಇವರು ಹಳೇಯ ಪರಂಪರೆಗಳನ್ನು ಮನ್ನಡೆಸಿಕೊಂಡು, ಹೊಸ ಯೋಜನೆಗಳನ್ನು ಹಾಕುತ್ತಾ ಬಂದಿದ್ದಾರೆ.
ಹಲವಾರು ದಿನ ನಿತ್ಯ ಸಾವಿರಾರು ಮಂದಿ ಭಕ್ತರು ಬರುವುದರಿಂದ ದೇವಸ್ಥಾನದ ಒಳಗೆ, ಹೊರಗೆ, ವಸತಿ ನಿಲಯಗಳಲ್ಲಿ, ಬಸ್ಸು ನಿಲ್ದಾಣ, ಅಣ್ಣಪ್ಪ ಸ್ವಾಮಿ ಬೆಟ್ಟ, ನೇತ್ರಾವತಿ ಸ್ನಾನ ಘಟ್ಟ, ಶಾಂತಿವನ, ಅನ್ನಪೂರ್ಣ ಭೋಜನ ಶಾಲೆ ಎಲ್ಲೆಡೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾಮಫಲಕ, ಅಲ್ಲಲ್ಲಿ ಕಸದ ಬುಟ್ಟಿ, ಉಚಿತ ಶೌಚಾಲಯಗಳನ್ನು ಬಳಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ಭಕ್ತಾದಿಗಳಿಗಾಗಿ ಒಂಭತ್ತು ನೇತ್ರಾವತಿ, ಶ್ರೀ ಸನ್ನಿಧಿ, ವೈಶಾಲಿ, ರಜತಾದ್ರಿ, ಸಹ್ಯಾದ್ರಿ, ಗಾಯತ್ರಿ, ಸಾಕೇತ, ಗಂಗೋತ್ರಿ, ಶರಾವತಿ ವಸತಿನಿಲಯಗಳನ್ನು ನಿರ್ಮಿಸಲಾಗಿದೆ. ಈ ವಸತಿನಿಲಯಗಳ ಒಮ್ಮೆ ಉಪಯೋಗಿಸಿ ಬಿಟ್ಟ ನೀರಿನ ಪುನರ್ಬಳಕೆಯ ಪರಿಕಲ್ಪನೆಯನ್ನು ಒಪ್ಪಿಕೊಳ್ಳಲು ಸಹಜವಾಗಿ ಕಷ್ಟವಾಗುತ್ತದೆ, ಆದರೆ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಲೇಬೇಕಾದ ಸಂದರ್ಭ ಬಂದರೆ ವಿಪರ್ಯಾಸವೇನಲ್ಲ. ಇಂತಹ ಒಂದು ಸಫಲ ನೀರಿನ ಮರುಬಳಕೆ ಕಾರ್ಯಕ್ಕೆ ಉತ್ತಮ ನಿದರ್ಶನ ಎಂದರೆ ಧರ್ಮಸ್ಥಳದ ಒಳಚರಂಡಿ ನೀರು ಶುದ್ಧಿಕರಣ ಘಟಕ.
ನೀರನ್ನು ಪುನಃ ಬಟ್ಟೆತೊಳೆಯಲು, ಕೃಷಿಗೆ, ದಿನಚರಿ ಕೆಲಸಕ್ಕೆ ಹಾಗು ಕುಡಿಯುವಷ್ಟರ ಮಟ್ಟಿಗಿನ ತಂತ್ರಜ್ಞಾನವನ್ನು ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಸಾಮಥ್ರ್ಯದ ನೀರನ್ನು ಶುದ್ದಿಕರಿಸಿ ಬಿಡುವ ಯಂತ್ರ ಅಳವಡಿಸಿದ್ದಲ್ಲದೇ ಊರಿನ ಎಲ್ಲಾ ಮನೆಗಳ, ಒಂಭತ್ತು ವಸತಿ ಗೃಹಗಳ ಚರಂಡಿ ನೀರನ್ನು ಒಂದೇ ಭಾಗದಲ್ಲಿ ಬಂದು ಸೇರುವಂತೆ ಮಾಡಿ ಮೂಲ ಶುದ್ದಿಕರಣ ಘಟಕ ಸೇರುವಂತೆ ಎರಡು ಕೀಲೋಮೀಟರ್ ಪಂಪಿಂಗ್ ಲೈನ್ ಹಾಕಲಾಗಿದೆ, ಈ ಹಂತದಲ್ಲಿಯೇ ಸಿಗುವ ಪ್ಲಾಸ್ಟಿಕ್, ಕೂದಲಿನಂತಹ ಕಸಗಳನ್ನು ಹೊರ ತೆಗೆಯುತ್ತಾರೆ. ಅನ್ನಪೂರ್ಣ ಭೋಜನಾಲಯದಲ್ಲಿ ಬಳಸಿದ ಎಲೆ ಹಾಗೂ ನೀರನ್ನು ಕೃಷಿಗೆ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ನೇತ್ರಾವತಿ ಸ್ನಾನ ಘಟ್ಟದಲ್ಲಿ ಭಕ್ತರಿಂದ ನದಿ ನೀರು ಕಲುಷಿತವಾಗದಂತೆ ಸಿಬ್ಬಂದಿಗಳು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.
12 ಎಚ್.ಪಿ ಸಾರ್ಮಥ್ಯದ ಎರಡು ಮೋಟಾರ್ಗಳನ್ನು ಹಾಕಿ, 36 ಲಕ್ಞ ಲೀಟರನಷ್ಟು ಒಳಚರಂಡಿ ನೀರನ್ನು ಸಂಗ್ರಹಿಸಿ ಶುದ್ದಿಕರಿಸ ಬಹುದಾದಂತಹ ಘಟಕವನ್ನು ಊರಿನಾಚೆ ಸ್ಥಾಪಿಸಿದ್ದಾರೆ. 9 ¯ಕ್ಷ ಲೀಟರ್ ಸಾರ್ಮಥ್ಯದ ನಾಲ್ಕು ಟ್ಯಾಂಕುಗಳನ್ನಾಗಿ ಮಾಡಿ ಹಂತ ಹಂತಗಳಲ್ಲಿ ನೀರನ್ನು ಶುದ್ದಿಸಲಾಗುತ್ತದೆ.
ತಳದಲ್ಲಿ ಸಿಗುವ ಗಟ್ಟಿಯಾದ ಗಲೀಜನ್ನು ಕೃಷಿಗೆ ಗೊಬ್ಬರವಾಗಿ ಬಳಸಲಾಗುತ್ತಿದೆ. ಪ್ರತಿ ದಿನಕ್ಕೆ ಪ್ರಸ್ತುತದಲ್ಲಿ 16 ರಿಂದ 18 ಲಕ್ಷಗಳಷ್ಟು ಯೋಗ್ಯ ನೀರನ್ನು ಪಡೆಯಲಾಗುತ್ತಿದೆ. ಜಪಾನಿನ ಬ್ರೂಕ್ ತಂತ್ರಜ್ಞಾನವನ್ನು ಎರವಲು ಪಡೆದುಕೊಂಡು ಸತತ ಎಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಚಿತ್ವದ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಿದ್ದಾರೆ.
ಬೀಡಿ, ಸಿಗರೇಟು, ಮದ್ಯ, ಪ್ಲಾಸ್ಟಿಕ್ ಮಾರಾಟವನ್ನು ವ್ಯಾಪಾರಿಗಳು ನಿಷೇಧಿಸಿದ್ದು. ಪ್ರತಿಯೊಂದು ಅಂಗಡಿಗಳಲ್ಲಿ ಕಸದತೊಟ್ಟಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ. ಕ್ಷೇತ್ರದ ಸಿಬ್ಬಂದಿಗಳಿಂದ ಭಕ್ತರಲ್ಲಿ ಸ್ವಚ್ಛತೆಯ ಅರಿವು. ಸ್ವಚ್ಛತೆಗಾಗಿ ‘ಸಫಾಯಿ ಕರ್ಮಿ’ಗಳು ದಿನವಿಡೀ ಶುಚಿತ್ವದಲ್ಲಿ ತೊಡಗಿರುತ್ತಾರೆ.
ಎಸ್ಡಿಎಂ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಂಡಿಯಾ ಟುಡೆ ಪತ್ರಿಕೆ ನೀಡಿದ ಪ್ರಥಮ ರಾಷ್ಟ್ರೀಯ “ಸಫಾಯಿಗಿರಿ ಪ್ರಶಸ್ತಿ”ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಲಾಗಿದೆ.
ಸುಷ್ಮಾ ಉಪ್ಪಿನ್, ಇಸಳೂರ